ನನಗಿರೋ ಮಾಹಿತಿ ಪ್ರಕಾರ ಎಸ್‌ಐ ಹಗರಣದಲ್ಲಿ ಮಂತ್ರಿಗಳ ಕೈವಾಡವಿದೆ: ಡಿಕೆಶಿ ಆರೋಪ
* ಕುಮಾರಸ್ವಾಮಿ ಹೇಳಿರೋದು ಸತ್ಯ. ಪಿಎಸ್‌ಐ ಹಗರಣದ ಕಿಂಗ್‌ಪಿನ್ ಬೇರೆಯೇ ಇದ್ದಾರೆ
* ಎಸ್‌ಐ ಹಗರಣದಲ್ಲಿ ಮಂತ್ರಿಗಳ ಕೈವಾಡ: ಡಿಕೆಶಿ
* ಮಂತ್ರಿಗಳ ರಕ್ಷಣೆ ಇಲ್ಲದೆ ಈ ಹಗರಣ ನಡೆಯಲು ಸಾಧ್ಯವಿಲ್ಲ: ಕೆಪಿಸಿಸಿ ಅಧ್ಯಕ್ಷ ಆರೋಪ
ಅರಕಲಗೂಡು(ಮೇ.09): ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಮಂತ್ರಿಗಳ ರಕ್ಷಣೆ, ಮಾರ್ಗದರ್ಶನ ಇಲ್ಲದೆ ಈ ಹಗರಣ ಮಾಡಲು ಸಾಧ್ಯವೇ ಇಲ್ಲ. ನನಗಿರೋ ಮಾಹಿತಿ ಪ್ರಕಾರ ಈ ಹಗರಣದಲ್ಲಿ ಕೆಲವು ಮಂತ್ರಿಗಳ ಕೈವಾಡವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಕುಮಾರಸ್ವಾಮಿ ಹೇಳಿರೋದು ಸತ್ಯ. ಪಿಎಸ್‌ಐ ಹಗರಣದ ಕಿಂಗ್‌ಪಿನ್ ಬೇರೆಯೇ ಇದ್ದಾರೆ. ಆ ಕಿಂಗ್‌ಪಿನ್‌ಗಳೇ ಕೆಲವರನ್ನೆಲ್ಲ ಬಿಡಿಸುತ್ತಿದ್ದಾರೆ. ಬರೀ ಆಫೀಸರ್, ಪೊಲೀಸ್ ಕಾನ್ಸ್‌ಟೆಬಲ್‌ಗಳನ್ನಷ್ಟೇ ಇದೀಗ ವಿಚಾರಣೆ ಮಾಡುತ್ತಿದ್ದಾರೆ. ಅಂಗಡಿ ಓಪನ್ ಮಾಡಿದವರು, ಆ ಅಂಗಡಿಯಲ್ಲಿ ಸಾಮಾನು ಖರೀದಿಸಲು ಹೋದ ಹುಡುಗರನ್ನು ಬಂಧಿಸಿ ವಿಚಾರಿಸುತ್ತಿದ್ದಾರೆ. ಈ ಕುರಿತು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದರು.
ಮಂತ್ರಿಗಳ ರಕ್ಷಣೆ, ಮಾರ್ಗದರ್ಶನ ಇಲ್ಲದೆ ಈ ಹಗರಣ ನಡೆಯಲು ಸಾಧ್ಯವಿಲ್ಲ. ಗೃಹ ಸಚಿವರು, ಅಶ್ವತ್ಥ ನಾರಾಯಣ್ ಕರೆ ಮಾಡಿ ಕೆಲವರನ್ನು ಬಿಡಿಸಿದ್ದಾರೆ. ಇನ್ನೂ ಕೆಲವರು ಇದ್ದಾರೆ, ಆ ಹೆಸರುಗಳೆಲ್ಲ ಈಚೆ ಬರುತ್ತವೆ. ಆರೋಪಿಗಳನ್ನು ಬಿಡಿಸಿದ ತಕ್ಷಣ ಕೆಲ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ತನಿಖೆ ಬಗ್ಗೆ ಬೊಮ್ಮಾಯಿ ಸತ್ಯಾಂಶ ಹೇಳಬೇಕು, ಮುಚ್ಚಿಡಬಾರದು. ಹೈಕೋರ್ಚ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಪ್ರಮುಖರ ಹೆಸರು ಬಹಿರಂಗಪಡಿಸಿ: ಡಿಕೆಶಿ
ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಸರ್ಕಾರ ಕೇವಲ ಫಲಾನುಭವಿಗಳನ್ನು ಮಾತ್ರ ಬಂಧಿಸುತ್ತಿದೆ. ಆದರೆ, ಅವರ ಹಿಂದಿರುವ ಪ್ರಭಾವಿಗಳನ್ನು ಬಂಧಿಸುತ್ತಿಲ್ಲ, ಅವರ ಹೆಸರನ್ನೂ ಬಹಿರಂಗಗೊಳಿಸುತ್ತಿಲ್ಲ. ಸರ್ಕಾರ ಇಡೀ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸರ್ಕಾರ ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ರಾಜಕಾರಣಿಗಳು, ಮಂತ್ರಿಗಳು, ಶಾಸಕರ ಹೆಸರು ಬಹಿರಂಗಪಡಿಸುತ್ತಿಲ್ಲ. ಈ ಅಕ್ರಮಗಳಿಗೆ ಯಾರು ಬೆಂಬಲವಾಗಿ ನಿಂತರು, ಯಾರು ಅಕ್ರಮವಾಗಿ ಕೆಲಸ ಕೊಡಿಸಲು ಮುಂದಾದರು ಎಂಬ ಕುರಿತ ದೊಡ್ಡಪಟ್ಟಿಯೇ ನನ್ನ ಕಿವಿಗೆ ಬೀಳುತ್ತಿದೆ. ಮುಖ್ಯಮಂತ್ರಿಗಳು ಅಕ್ರಮದಲ್ಲಿ ಶಾಮೀಲಾಗಿಲ್ಲ ಅಂತಾದರೆ, ಯಾರೆಲ್ಲ ಭಾಗಿಯಾಗಿದ್ದಾರೆ ಅವರ ಹೆಸರು ಬಹಿರಂಗಪಡಿಸಲಿ ಎಂದರು.
ನೇಮಕಾತಿ ಅಕ್ರಮದಲ್ಲಿ ಸರ್ಕಾರ ಕೇವಲ ಫಲಾನುಭವಿಗಳನ್ನು ಮಾತ್ರ ಬಂಧಿಸುತ್ತದೆ. ಇವರೆಲ್ಲ ಅಕ್ರಮದ ಅಂಗಡಿ ತೆರೆದ ಕಾರಣಕ್ಕೆ ಹಗರಣದಲ್ಲಿ ಶಾಮೀಲಾಗಿದ್ದಾರೆ. ಆದರೆ ಈ ಅಕ್ರಮದಲ್ಲಿ ಯಾರೆಲ್ಲಾ ಪ್ರಭಾವಿ ಸಚಿವರು ಭಾಗಿಯಾಗಿದ್ದಾರೆ, ಬೆಂಬಲವಾಗಿ ನಿಂತಿದ್ದಾರೆ ಎಂಬುದು ಗೊತ್ತಾಗಬೇಕು. ಸಿಐಡಿ ಅಧಿಕಾರಿಗಳು ಬಂಧಿಸಿದವರಲ್ಲಿ ಕೆಲವರು ಸಚಿವರಾದ ಆರಗ ಜ್ಞಾನೇಂದ್ರ ಮತ್ತು ಡಾ.ಅಶ್ವತ್ಥ ನಾರಾಯಣರ ಹೆಸರು ಹೊರ ತಂದಿದ್ದಾರೆ. ಎಷ್ಟೋ ಜನ ನಾಯಕರ ಹೆಸರು ವಿಚಾರಣೆ ವೇಳೆ ಬಂಧಿತರಿಂದ ಹೊರ ಬಂದಿವೆ. ಗೃಹ ಸಚಿವ ಮತ್ತು ಅಶ್ವತ್ಥ ನಾರಾಯಣ ಮೂಗಿನ ಕೆಳಗೆಯೇ ತನಿಖೆ ನಡೆಯುತ್ತಿದೆ ಎಂದು ಕಿಡಿಕಾರಿದರು.
ಎಲ್ಲರನ್ನೂ ಕರೆಸಿ ವಿಚಾರಣೆ ಮಾಡುವಾಗ, ಸಚಿವ ಅಶ್ವತ್ಥ ನಾರಾಯಣರಿಗೆ ಬೇಕಾದ ಅಭ್ಯರ್ಥಿಯನ್ನು ಮಾತ್ರ ಬಿಟ್ಟು ಕಳುಹಿಸಿದ್ದಾರೆ. ಅನೇಕ ಹಿರಿಯ ಅಧಿಕಾರಿಗಳೂ ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಪ್ರಕರಣದಲ್ಲಿ ಗೃಹ ಸಚಿವರೇ ಅಪರಾಧಿಯಾಗಿದ್ದು, ಎಲ್ಲ ಕಳ್ಳರ ರಕ್ಷಣೆಯನ್ನು ಅವರೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಚ್ಡಿಕೆ ವಿರುದ್ಧ ಕೇಸ್ ದಾಖಲಿಸಿ: ಅಶ್ವತ್ಥ ನಾರಾಯಣ್ ಮೊದಲಿನಿಂದಲೂ ನರ್ಸಿಂಗ್ ಮಾರ್ಕ್ಸ್ ಕಾರ್ಡ್, ಸರ್ಟಿಫಿಕೆಟ್‌ಗಳನ್ನು ಕೊಟ್ಟು ದಂಧೆ ನಡೆಸುತ್ತಿದ್ದರು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರು ಆಧಾರವಿಲ್ಲದೆ ಆರೋಪ ಮಾಡುತ್ತಾರಾ? ಅವರ ಆರೋಪ ಸುಳ್ಳಾಗಿದ್ದರೆ ಸುಳ್ಳು ಹೇಳಿದ ಕಾರಣಕ್ಕೆ ಅವರ ವಿರುದ್ಧವೇ ಪ್ರಕರಣ ದಾಖಲಿಸಲಿ ಎಂದು ಆಗ್ರಹಿಸಿದರು.