*  6 ತಿಂಗಳಿನಿಂದ ಸಚಿವ ಅಶ್ವತ್ಥ್‌ರನ್ನು ಭೇಟಿಯಾಗಿಲ್ಲ: ಎಂಬಿ ಪಾಟೀಲ್‌ ಸ್ಪಷ್ಟನೆ*  ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದರೆ ರಾಜೀನಾಮೆ ನೀಡಬೇಕು*  ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಪರಸ್ಪರ ಭೇಟಿಯಾಗುವುದು ಸಹಜ

ಬೆಂಗಳೂರು(ಮೇ.11):  ತಮ್ಮ ಹಗರಣಗಳ ಬಗ್ಗೆ ಕಾಂಗ್ರೆಸ್ಸಿಗರೂ ಧ್ವನಿಯೆತ್ತದಂತೆ ರಕ್ಷಣೆ ಕೋರಲು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ(CN Ashwathnarayan) ಅವರು ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾಡಿದ್ದಾರೆ.

ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿರುವ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌(MB Patil) ತಾವು ಅಶ್ವತ್ಥ ನಾರಾಯಣ ಅವರನ್ನು ಭೇಟಿಯೇ ಮಾಡಿಲ್ಲ. ಅವರನ್ನು ಭೇಟಿ ಮಾಡಿ ಆರು ತಿಂಗಳಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌(DK Shivakumar) ಈ ಆರೋಪ ಮಾಡಿದರು. ಅಶ್ವತ್ಥ ನಾರಾಯಣ ಇಲಾಖೆಯ ಹಗರಣಗಳ ಬಗ್ಗೆ ಯಾರೂ ಧ್ವನಿ ಎತ್ತಬಾರದು. ಕಾಂಗ್ರೆಸಿಗರು ಮಾತನಾಡಬಾರದು ಎಂದು ಒತ್ತಡ ಹೇರಿ ರಕ್ಷಣೆ ಮಾಡಿಕೊಳ್ಳಲು ಪಾಟೀಲ್‌ ಅವರನ್ನು ಭೇಟಿ ಮಾಡಿದ್ದಾರೆ. ಕೇಳಿದರೆ ಸಹಜವಾಗಿಯೇ ಇಂದೊಂದು ಖಾಸಗಿ ಭೇಟಿ. ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಸಲಹೆ ಪಡೆಯಲು ಪಾಟೀಲರ ಮನೆಗೆ ಹೋಗಿದ್ದೆ ಎಂದು ಸಬೂಬು ನೀಡುತ್ತಾರೆ ಎಂದು ಹೇಳಿದರು.

Karnataka Politics: ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವತ್ಥ್‌ ಯಾಕೆ ಹೆಗಲು ಮುಟ್ಟಿಕೊಳ್ತಾರೆ?: ಡಿಕೆಶಿ ಪ್ರಶ್ನೆ

ಭೇಟಿ ಮಾಡಿಲ್ಲ; ಎಂಬಿಪಾ:

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಎಂ.ಬಿ.ಪಾಟೀಲ್‌, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರನ್ನು ನಾನು ಇತ್ತೀಚೆಗೆ ಭೇಟಿ ಮಾಡಿಲ್ಲ. ತಮ್ಮ ವಿರುದ್ಧದ ಆರೋಪಗಳಿಂದ ರಕ್ಷಣೆ ಪಡೆಯಲು ಅಶ್ವತ್ಥ ನಾರಾಯಣ ತಮ್ಮನ್ನು ಭೇಟಿಯಾಗಿದ್ದರು ಎಂದು ಶಿವಕುಮಾರ್‌ ಹೇಳಿಕೆ ನೀಡಿದ್ದರೆ, ಅದು ತಪ್ಪು. ಈ ಬಗ್ಗೆ ನಾನು ಶಿವಕುಮಾರ್‌ ಅವರೊಂದಿಗೆ ಮಾತನಾಡುತ್ತೇನೆ ಎಂದರು.

ವಿಧಾನ ಮಂಡಲ ಅಧಿವೇಶನ(Assembly Session) ನಡೆಯುತ್ತಿದ್ದಾಗ 6 ತಿಂಗಳ ಹಿಂದೆ ವಿಧಾನಸೌಧದಲ್ಲೇ ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿದ್ದೇನೆ. ಇತ್ತೀಚೆಗೆ ಮಾಡಿಲ್ಲ. ಇಷ್ಟಕ್ಕೂ ಭೇಟಿ ಮಾಡಿದರೆ ತಪ್ಪೇನೂ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಹೋದರೆ ತಿಂಡಿ ತಿನ್ನುತ್ತೇವೆ. ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಪರಸ್ಪರ ಭೇಟಿಯಾಗುವುದು ಸಹಜವಾಗಿದೆ. ನನ್ನ ಪುತ್ರ ಹಾಗೂ ಅಶ್ವತ್ಥ ನಾರಾಯಣ ಪುತ್ರಿ ಸಹಪಾಠಿಗಳು. ಹೀಗಾಗಿ ಅವರನ್ನು ಭೇಟಿ ಮಾಡಿದರೆ ತಪ್ಪೇನೂ ಆಗುವುದಿಲ್ಲ. ಆದರೆ, ಇತ್ತೀಚೆಗಂತೂ ನಾನು ಅವರನ್ನು ಭೇಟಿ ಮಾಡಿಲ್ಲ ಎಂದರು.

ರಾಜೀನಾಮೆಗೆ ಆಗ್ರಹ:

ಪಿಎಸ್‌ಐ ನೇಮಕ ಅಕ್ರಮದಲ್ಲಿ(PSI Recruitment Scam) ಅಶ್ವತ್ಥ ನಾರಾಯಣ ವಿರುದ್ಧ ಆರೋಪ ಕೇಳಿಬಂದಿದೆ. ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದರೆ ರಾಜೀನಾಮೆ ನೀಡಬೇಕು. ಬಸವರಾಜ ಬೊಮ್ಮಾಯಿ(Basavaraj Bommai) ಅವರು ಗೃಹ ಸಚಿವರಾಗಿದ್ದಾಗ ಪಿಎಸ್‌ಐ ನೇಮಕಾತಿಗೆ ನೋಟಿಫಿಕೇಷನ್‌ ಆಗಿದ್ದರೆ ಅವರೂ ಸಹ ಸ್ಥಾನದಲ್ಲಿ ಮುಂದುವರೆದರೆ ತನಿಖೆಗೆ ಅಡ್ಡಿ ಉಂಟಾಗುತ್ತದೆ ಎಂದು ಹೇಳಿದರು.

ಎಂಬಿಪಾ ಭೇಟಿ ಸುಳ್ಳು: ಸಚಿವ ಅಶ್ವತ್ಥ

ರಾಮನಗರ: ಕಾಂಗ್ರೆಸ್‌ ನಾಯಕ ಎಂ.ಬಿ.ಪಾಟೀಲ್‌ ಭೇಟಿಯಾಗಿ​ದ್ದೇ​ನೆಂಬುದು ಸುಳ್ಳು, ಅದರ ಅವಶ್ಯಕತೆಯೂ ನನಗಿಲ್ಲ. ಭೇಟಿ ಆಗಬೇಕು ಅಂದರೆ ಆಗ್ತೀನಿ, ಇವರನ್ನು ಕೇಳಿ ಭೇಟಿ ಆಗಬೇಕಾ? ಮಾನ ಮರ್ಯಾದೆ ಇದ್ದವರು ಯಾರಾದರು ನಿರಾಧಾರ ಆರೋಪ ಮಾಡ್ತಾರಾ? ಡಿ.ಕೆ.ಶಿವಕುಮಾರ್‌ ನೂರು ಜನ್ಮ ಎತ್ತಿ ಬಂದರೂ ನನಗೆ ಮಸಿ ಬಳಿ​ಯಲು ಆಗಲ್ಲ, ಜೈಲು ಹಕ್ಕಿ ಹೇಳೋ​ದನ್ನು ಯಾರೂ ನಂಬ​ಲ್ಲ!

ಉನ್ನತ ಶಿಕ್ಷ​ಣ​ ಸಚಿವ ಡಾ.ಸಿ.​ಎ​ನ್‌.​ಅ​ಶ್ವ​ತ್ಥ​ನಾ​ರಾ​ಯಣ ಅವರು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.ಶಿವ​ಕು​ಮಾರ್‌ ವಿರುದ್ಧ ಕಿಡಿ​ಕಾ​ರಿದ್ದು ಹೀಗೆ. ತಮ್ಮ ಇಲಾ​ಖೆ​ಯಲ್ಲಿ ನಡೆ​ದಿ​ರುವ ಹಗ​ರ​ಣ​ಗಳ ಕುರಿತು ಧ್ವನಿ ಎತ್ತ​ದಂತೆ ಮನ​ವೊ​ಲಿ​ಸಲು ಎಂ.ಬಿ.​ಪಾ​ಟೀ​ಲ​ರನ್ನು ಭೇಟಿ​ಯಾ​ಗಿ​ದ್ದಾರೆ ಎಂಬ ಡಿ.ಕೆ.​ಶಿ​ವ​ಕು​ಮಾರ್‌ ಆರೋ​ಪದ ಕುರಿತು ಮಂಗ​ಳ​ವಾರ ಸುದ್ದಿ​ಗಾ​ರರ ಮುಂದೆ ತೀವ್ರ ಆಕ್ರೋಶ ಹೊರ​ಹಾ​ಕಿ​ದ​ರು. ನಾನು ಯಾರನ್ನೂ ಭೇಟಿ​ಯಾ​ಗಿಲ್ಲ, ಅದರ ಅವ​ಶ್ಯ​ಕ​ತೆಯೂ ನನ​ಗಿಲ್ಲ. ರಾಜಿ ಮಾಡಿ​ಕೊ​ಳ್ಳಲು ಏನಿ​ದೆ? ಮಾನ ಮರ್ಯಾದೆ ಇದ್ದವರು ನಿರಾಧಾರ ಆಪಾದನೆ ಮಾಡುವುದಿಲ್ಲ. ಮಾನ, ಮರ್ಯಾದೆ ಇದ್ದವರು ಮಾಡುವ ಕೆಲಸಾನ ಇದು? ಇಷ್ಟುರಾಜಕೀಯ ಅನುಭವ ಇರುವವರು, ಆಡಳಿತ ಅನುಭವ ಇರುವವರು ದಾಖಲೆ ಇಲ್ಲದೆ ನಿರಾಧಾರವಾಗಿ ಆಪಾದನೆ, ರಾಜಕೀಯ ತೇಜೋವಧೆ ಮಾಡುವುದು ಸರಿಯಲ್ಲ ಎಂದರು.

Hassan: 'ದನ ಕಾಯೋನೇ ನೀನು' ಹೇಳಿಕೆಗೆ ಕ್ಷಮೆ ಕೋರಿದ ರೇವಣ್ಣ

ಡಿಕೆಶಿ ಹೇಳೋದನ್ನು ಯಾರು ನಂಬಲ್ಲ: ಡಿ.ಕೆ.ಶಿವಕುಮಾರ್‌ ಅವರನ್ನು ಜೈಲು ಹಕ್ಕಿ ಎಂದ ಅಶ್ವತ್ಥ ನಾರಾ​ಯಣ, ‘ಅದು ಜೈಲು ಹಕ್ಕಿ ಬೇಲ್‌ ಮೇಲೆ ಆಚೆ ಇದೆ. ಅವರ ಕರ್ಮಕಾಂಡಗಳಿಗೆ ಪರ್ಮನೆಂಟ್‌ ಪ್ಲೇಸ್‌ ತಿಹಾರ್‌ ಜೈಲು. ಜೈಲು ಹಕ್ಕಿ ಹೇಳೋದನ್ನು ಯಾರೂ ನಂಬಲ್ಲ’ ಎಂದು ಕುಟುಕಿದರು.

ಡಿ.ಕೆ.​ಶಿ​ವ​ಕು​ಮಾರ್‌ ಭ್ರಷ್ಟರು ಅನ್ನು​ವುದು ಯಾರಿಗೆ ಗೊತ್ತಿಲ್ಲ. ಎಲ್ಲಿ ದೋಚಿದ್ದಾರೆ, ಎಲ್ಲಿ ತಗೊಂಡಿದ್ದಾರೆ ಎಂಬುದು ಸಾರ್ವತ್ರಿಕವಾಗಿ ಗೊತ್ತಿರುವ ವಿಚಾರ. ಅವರು ಎಲ್ಲಿದ್ದರು, ಹೇಗಿದ್ದರು, ಏನು ಮಾಡಿಕೊಂಡಿ​ದ್ದರು ಅನ್ನೋ ವಿಚಾರವೂ ಎಲ್ಲರಿಗೂ ಗೊತ್ತಿದೆ. ಶಿವಕುಮಾರ್‌ ಅಂದ್ರೆ ಬರೀ ಕಾಸು. ನಾನು ರಾಜಕೀಯಕ್ಕೆ ಬಂದಿರೋದು ಕೊಡೋದಕ್ಕೆ, ಡಿ.ಕೆ.ಶಿವಕುಮಾರ್‌ ರೀತಿ ತಗೊಳ್ಳಲು ಅಲ್ಲ. ಶಿವಕುಮಾರ್‌ ಅಂದರೆ ಭ್ರಷ್ಟಾಚಾರ. ಸಿಕ್ಕಿದ್ದೆಲ್ಲ ಲೂಟಿ ಹೊಡೆಯೋದು, ಭ್ರಷ್ಟಾಚಾರ ಕಾಂಗ್ರೆಸ್‌ ಸಂಸ್ಕೃತಿ ಎಂದು ಆರೋಪಿಸಿದರು.