ಬೆಂಗಳೂರಿನ ಪಕ್ಕದಲ್ಲೊಂದು ಅಪಾಯಕಾರಿ ತ್ಯಾಜ್ಯ ಘಟಕ; ಭುಗಿಲೆದ್ದ ಸ್ಥಳೀಯರ ಆಕ್ರೋಶ
ಕೇಂದ್ರ ಪರಿಸರ ಇಲಾಖೆಯ ಅನುಮತಿ ಇಲ್ಲದೆ ಕಾರ‍್ಯ ನಿರ್ವಹಿಸುತ್ತಿರುವ ರಾಮ್ಕಿ ಕಂಪೆನಿ: ಸ್ಥಳೀಯರ ಆರೋಪ | ನಿಯಮ ಉಲ್ಲಂಘನೆಯ ಅರಿವಿದ್ದರೂ ಕಾರ್ಯನಿರ್ವಹಣೆಗೆ ಅನುಮತಿ ನೀಡಿದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ | ಅಕ್ರಮವಾಗಿ ಅಪಾಯಕಾರಿ ತ್ಯಾಜ್ಯ ಸಂಸ್ಕರಣೆ ಮಾಡುತ್ತಿರುವುದರಿಂದ ಪರಿಸರ ಹಾಳಾಗುತ್ತಿದೆ: ಪರಿಸರ ತಜ್ಞರು
ಬೆಂಗಳೂರು (ಅ. 30): ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ರಾಮ್ಕಿ ಎನ್ವಿರೋ ಇಂಜಿನಿಯರ್ಸ್ ಲಿಮಿಟೆಡ್ ಕಂಪೆನಿಯು ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ (ಎನ್ವಿರಾನ್‌ಮೆಂಟ್ ಕ್ಲಿಯರೆನ್ಸ್ -ಇಸಿ) ಪಡೆಯದೆ ಅಪಾಯಕಾರಿ ತ್ಯಾಜ್ಯದ ಶೇಖರಣೆ ಹಾಗೂ ಸಂಸ್ಕರಣೆ ಕಾರ್ಯ (ಟಿಎಸ್‌ಡಿಎಫ್) ನಡೆಸುತ್ತಿದೆ ಎಂಬ ಆಪಾದನೆ ಕೇಳಿಬಂದಿದ್ದು, ಪರಿಸರ ಇಲಾಖೆ ಅನುಮತಿ ಇಲ್ಲದೆ ಅಪಾಯಕಾರಿ ತ್ಯಾಜ್ಯ ಸಂಸ್ಕರಣೆ ನಡೆಸುತ್ತಿರುವುದು ಭಾರಿ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.
ಯಾವುದೇ ಕ್ಷಣದಲ್ಲೂ ಇತ್ತೀಚೆಗೆ ನೆರೆಯ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ರಾಮ್ಕಿ ಸಮೂಹದ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ನಡೆದಿದ್ದ ಭಾರಿ ಅಗ್ನಿ ಸ್ಫೋಟದಂತಹ ದುರ್ಘಟನೆ ಇಲ್ಲೂ ನಡೆಯಬಹುದು ಎಂದು ಸ್ಥಳೀಯರು ತೀವ್ರ ಭಯಭೀತರಾಗಿದ್ದಾರೆ.
ರಾಮ್ಕಿ ಕಂಪೆನಿಯು ಬಿಬಿಎಂಪಿಯಿಂದ ಬ್ಲ್ಯಾಕ್ ಲಿಸ್ಟ್‌ಗೆ ಒಳಗಾಗಿದ್ದ ಕಂಪೆನಿ. ಇಂತಹ ಕಂಪೆನಿಯು ಇ.ಸಿ. ಪಡೆಯದೇ ಅಪಾಯಕಾರಿ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವುದು ಅಕ್ರಮ ಎಂದು ಖುದ್ದು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರೇ 2016ರಲ್ಲಿ ಕೇಂದ್ರ ಪರಿಸರ ಇಲಾಖೆಗೆ ಪತ್ರ ಬರೆದಿದ್ದರು. ಇದರಿಂದ ಸ್ಥಳೀಯರ ಆತಂಕ ದುಪ್ಪಟ್ಟಾಗಿದೆ.
ಕೇವಲ 3 ನಿಮಿಷದಲ್ಲಿ ಕಾರು ವಿಮಾನವಾಗಿ ಬದಲಾಗುತ್ತೆ; ಕ್ಲೈನ್ ಮಿಷನ್ ಆವಿಷ್ಕಾರ!
ಇನ್ನು ರಾಮ್ಕಿ ಕಂಪೆನಿಯು ದಾಬಸ್‌ಪೇಟೆ ಘಟಕದಲ್ಲಿ ಅಪಾಯಕಾರಿ ತಾಜ್ಯವನ್ನು ವೈಜ್ಞಾನಿಕವಾಗಿ ಹೂಳುವ ಮೂಲಕ ಸಂಸ್ಕರಣೆ, ವಿಲೇವಾರಿ ಮಾಡಲು (ಟಿಎಸ್‌ಡಿಎಫ್) ಘಟಕ ಹಾಗೂ ತ್ಯಾಜ್ಯವನ್ನು ಸುಡುವ ಮೂಲಕ ವಿಲೇವಾರಿ ಮಾಡಲು ಇನ್ಸಿನರೇಟರ್ (ದಹನಕಾರಿ) ಘಟಕವನ್ನು ಸ್ಥಾಪಿಸಿದೆ. ಈ ಪೈಕಿ 2014ರಲ್ಲಿ ಇನ್ಸಿನರೇಟರ್ ಘಟಕಕ್ಕೆ ಇ.ಸಿ. ಪಡೆದಿದ್ದು, ಈ ಇ.ಸಿ.ಯೇ ಎರಡಕ್ಕೂ ಅನ್ವಯವಾಗುತ್ತದೆ ಎಂದು ವಾದಿಸಿತ್ತು. ಇದನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಸ್ಪಷ್ಟವಾಗಿ ತಳ್ಳಿಹಾಕಿದೆ.
ಅಲ್ಲದೆ, ಎರಡು ತಿಂಗಳ ಒಳಗಾಗಿ ಟಿಎಸ್‌ಡಿಎಫ್ ಘಟಕಕ್ಕೂ ಕಡ್ಡಾಯವಾಗಿ ಇ.ಸಿ. ಪಡೆಯಬೇಕು ಎಂದು 2016ರಲ್ಲಿ ಸ್ಪಷ್ಟಆದೇಶ ನೀಡಿದೆ. ಆದರೂ, ಎನ್‌ಜಿಟಿ ಆದೇಶ ದಿಕ್ಕರಿಸಿ ರಾಮ್ಕಿ ಕಂಪೆನಿಯು ಕಾರ್ಯನಿರ್ವಹಣೆ ಮಾಡುತ್ತಿದೆ. ಹೀಗೆ ಕಂಪೆನಿಯ ಉಲ್ಲಂಘನೆಗಳ ಅರಿವಿದ್ದರೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಯಾಚರಣೆಗೆ 2020ರ ಅಕ್ಟೋಬರ್‌ನಲ್ಲಿ ಪಿಎಫ್‌ಒ (ಕನ್ಸೆಂಟ್ ಫಾರ್ ಆಪರೇಷನ್ಸ್) ಅನುಮತಿ ನೀಡಿದೆ ಎಂದು ಪರಿಸರ ತಜ್ಞರು ಕಿಡಿಕಾರಿದ್ದಾರೆ.
ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ದಾಬಸ್‌ಪೇಟೆಯಲ್ಲಿ ಇ.ಸಿ. ಪಡೆಯದೇ ಕಳೆದ 12 ವರ್ಷದಿಂದ ಇಂತಹ ಅಪಾಯಕಾರಿ ತ್ಯಾಜ್ಯ ಸಂಸ್ಕರಣೆ ಘಟಕ ಕಾರ್ಯನಿರ್ವಹಿಸುತ್ತಿದ್ದರೂ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಗಂಭೀರವಾಗಿ ಪರಿಗಣಿಸಿಲ್ಲ. ಕೇಂದ್ರದ ಪರಿಸರ ಇಲಾಖೆ ಅನುಮತಿ ಪಡೆದಿಲ್ಲ (ಇ.ಸಿ) ಎಂಬ ಕಾರಣಕ್ಕಾಗಿಯೇ 2018ರಲ್ಲಿ ಸಿಎಫ್‌ಒ ನವೀಕರಣವನ್ನು ತಿರಸ್ಕರಿಸಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಏಕಾಏಕಿ ಸಿಎಫ್‌ಒ ಅನುಮತಿ ನೀಡಿರುವುದು ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ ಎಂದು ಹೇಳಿದ್ದಾರೆ. ಇನ್ನು ರಾಮ್ಕಿ ಕಂಪೆನಿಯು 2003ರಲ್ಲೇ ಪರಿಸರ ಇಲಾಖೆ ಅನುಮೋದನೆ ಪಡೆದಿರುವುದಾಗಿ ಸ್ಪಷ್ಟನೆ ನೀಡಿದ್ದು, ಇದನ್ನು ನ್ಯಾಯಾಲಯ ಪುರಸ್ಕರಿಸಿಲ್ಲ ಎಂದು ಪರಿಸರ ತಜ್ಞರು ತಿಳಿಸಿದ್ದಾರೆ.
ಏನಿದು ವಿವಾದಿತ ಯೋಜನೆ:
ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಪೆಮ್ಮೇನಹಳ್ಳಿ ಹಾಗೂ ತಿಮ್ಮನಾಯಕನಹಳ್ಳಿ ಎಂಬ ಪ್ರದೇಶದಲ್ಲಿ ವರ್ಷಕ್ಕೆ 40 ಸಾವಿರ ಟನ್ ಸಾಮಾನ್ಯ ಅಪಾಯಕಾರಿ ತ್ಯಾಜ್ಯ ಸಂಗ್ರಹ, ಸಂಸ್ಕರಣೆ ಹಾಗೂ ವಿಲೇವಾರಿ ಮಾಡುವ ಯೋಜನೆಗಾಗಿ ರಾಮ್ಕಿ ಕಂಪೆನಿಗೆ ಕೆಐಎಡಿಬಿಯು 93.18 ಎಕರೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ನೀಡಿತ್ತು. ಇದರಲ್ಲಿ 26 ಎಕರೆಯನ್ನು ಲ್ಯಾಂಡ್‌ಫಿಲ್‌ಗೆ ಮೀಸಲಿಡಲಾಗಿತ್ತು ಎಂದು ಸ್ಥಳೀಯರು ವಿವರಿಸಿದ್ದಾರೆ.
ಕೇಂದ್ರದ ಜೆಕೆ ಭೂ ತಿದ್ದುಪಡಿ ಕಾನೂನಿಗೆ ಕಾಶ್ಮೀರಿ ಪಂಡಿತರಿಂದಲೇ ವಿರೋಧ!
ಇನ್ನು ಯೋಜನೆ ಸಂಬಂಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು 2007ರ ಜುಲೈನಲ್ಲಿ ಘಟಕ ಸ್ಥಾಪನೆಗೆ ಅನುಮತಿ (ಸಿಎಫ್‌ಇ) ನೀಡಿತ್ತು. ಬಳಿಕ ಕಾರ್ಯಾಚರಣೆ ಆರಂಭಕ್ಕೆ ಸಿಎಫ್‌ಒ ಅನುಮತಿ ಪಡೆಯಬೇಕಾಗಿದ್ದು, ಅದಕ್ಕೂ ಮೊದಲು ಕೇಂದ್ರ ಪರಿಸರ ಇಲಾಖೆಯಿಂದ ಪರಿಸರಕ್ಕೆ ಹಾನಿ ಉಂಟಾಗುವುದಿಲ್ಲ ಎಂಬ ಕುರಿತು ಇ.ಸಿ. ಪಡೆಯಬೇಕಿತ್ತು. ಆದರೆ, ಕಂಪೆನಿಯು ಇ.ಸಿ. ಪಡೆಯದೇ 2008ರಲ್ಲಿ ಮಂಡಳಿಯಿಂದ ಸಿ.ಎಫ್.ಒ ಪಡೆದಿತ್ತು. ಇದರ ನಡುವೆ 2014ರಲ್ಲಿ ಕಂಪೆನಿಯು ತ್ಯಾಜ್ಯವನ್ನು ಸುಡುವ ಇನ್ಸಿನರೇಟರ್ (ದಹನಕಾರಿ) ಘಟಕವನ್ನೂ ಸ್ಥಾಪನೆ ಮಾಡಿದೆ. ಇದಕ್ಕೆ ಮಾತ್ರ ಇ.ಸಿ. ಪಡೆದುಕೊಂಡಿದೆ ಎಂದು ಹೇಳಿದರು.
ಪಿಎಫ್‌ಒ ತಿರಸ್ಕರಿಸಿದ್ದ ಮಂಡಳಿ:
ಈ ಅಕ್ರಮಗಳ ವಿರುದ್ಧ ಸ್ಥಳೀಯರಾದ ನಾವೆಲ್ಲಾ 2016ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಹೈಕೋರ್ಟ್ ಮೊರೆ ಹೋಗಿದ್ದೆವು. ಹೈಕೋರ್ಟ್ ಕೆಲ ಸಲಹೆಗಳೊಂದಿಗೆ ಪ್ರಕರಣವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿಗೆ) ವರ್ಗಾಯಿಸಿತ್ತು. ಎನ್‌ಜಿಟಿಯು 2016ರಲ್ಲಿ ಎರಡು ತಿಂಗಳ ಒಳಗಾಗಿ ಇ.ಸಿ. ಪಡೆಯುವಂತೆ ಸೂಚಿಸಿತ್ತು. ಈ ವೇಳೆ ಕಂಪೆನಿಯು ಇನ್ಸಿನರೇಟರ್‌ಗೆ ಪಡೆದಿರುವ ಇ.ಸಿ.ಯೇ ಟಿಎಸ್‌ಡಿಎಫ್ ಘಟಕಕ್ಕೂ ಅನ್ವಯವಾಗುತ್ತದೆ ಎಂದು ವಾದಿಸಿತ್ತು. ಇದನ್ನು 2019ರ ಸೆಪ್ಟೆಂಬರ್‌ನಲ್ಲಿ ಎನ್‌ಜಿಟಿ ಸ್ಪಷ್ಟವಾಗಿ ತಿರಸ್ಕರಿಸಿತ್ತು ಎಂದು ಸ್ಥಳೀಯರೊಬ್ಬರು ತಿಳಿಸಿದರು.
ಇದರ ನಡುವೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಂಪೆನಿಯು ಇ.ಸಿ. ಪಡೆದಿಲ್ಲ. ಜೊತೆಗೆ ಹಲವು ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಕಾರಣವನ್ನು ಪ್ರಸ್ತಾಪಿಸಿ 2018ರ ಫೆಬ್ರುವರಿಯಲ್ಲಿ ಪಿಎಫ್‌ಒ ನವೀಕರಣಕ್ಕೆ ನಿರಾಕರಿಸಿತ್ತು ಎಂದು ಹೇಳಿದರು.
ಇನ್ನು ಪರಿಸರ ತಜ್ಞರೊಬ್ಬರ ಪ್ರಕಾರ, 2018ರಲ್ಲೇ ಪಿಎಫ್‌ಒ ತಿರಸ್ಕರಿಸಿದ್ದರೂ ಕಂಪೆನಿಯ ಚಟುವಟಿಕೆ ನಿಂತಿರಲಿಲ್ಲ. ಅಲ್ಲದೆ, ಪ್ರತಿ ವರ್ಷ ಎಷ್ಟುತ್ಯಾಜ್ಯ ಸಂಸ್ಕರಣೆ ಮಾಡುತ್ತಿದ್ದೇವೆ ಎಂಬ ಬಗ್ಗೆ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ವಾರ್ಷಿಕ ವರದಿ ನೀಡಿದೆ. ಹೀಗಿದ್ದರೂ ಮಂಡಳಿಯು ಚಟುವಟಿಕೆ ನಿಲ್ಲಿಸುವ ಪ್ರಯತ್ನ ಮಾಡಿಲ್ಲ. ಇದೀಗ ಕಂಪೆನಿಯು ಈವರೆಗೂ ಇ.ಸಿ. ಪಡೆಯದಿದ್ದರೂ ಇ.ಸಿ. ಪಡೆಯದ ಕಾರಣಕ್ಕಾಗಿಯೇ ತಿರಸ್ಕರಿಸಿದ್ದ ಪಿಎಫ್‌ಒನ್ನು ಮತ್ತೆ ವಿತರಿಸಿ ಮಂಡಳಿ ಆದೇಶ ಹೊರಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇವೇಗೌಡರಿಂದಲೂ ರಾಮ್ಕಿ ವಿರುದ್ಧ ದೂರು
ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು 2016ರಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ರಾಮ್ಕಿ ಎನ್ವಿರೋ ಇಂಜಿನಿಯರ್ಸ್ ಲೋಪಗಳ ವಿರುದ್ಧ ದೂರು ನೀಡಿದ್ದರು.
ಬ್ಲ್ಯಾಕ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದ ಕಂಪೆನಿಯು ಕಳೆದ 10 ವರ್ಷದಿಂದ ಇ.ಸಿ. ಪಡೆಯದೇ ಅಪಾಯಕಾರಿ ತ್ಯಾಜ್ಯ ಸಂಸ್ಕರಣೆ ಮಾಡುತ್ತಿದೆ. ಇದರಿಂದ ನೆರೆಹೊರೆಯ ಪ್ರದೇಶದಲ್ಲಿ ನೀರು ಹಾಗೂ ಗಾಳಿ ಮಲಿನಗೊಳ್ಳುತ್ತಿದೆ. ಹೀಗಾಗಿ ನಿಯಮ ಉಲ್ಲಂಘಿಸಿರುವ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಪರಿಸರ ಇಲಾಖೆಯನ್ನು ಒತ್ತಾಯಿಸಿದ್ದರು.
ಮತ್ತೆ ಕೊರೊನಾ ಅಟ್ಟಹಾಸಕ್ಕೆ ಅಸಲಿ ಕಾರಣವೇನು? ಚಳಿಗಾಲದಲ್ಲಿ ಏನ್ ಕಥೆ!
ವಿಶಾಖಪಟ್ಟಣದಲ್ಲಿ ಇದೇ ಕಂಪೆನಿ ಘಟಕ ಸ್ಫೋಟಗೊಂಡಿತ್ತು!
2020ರ ಜೂನ್ ತಿಂಗಳಲ್ಲಿ ರಾಮ್ಕಿ ಎನ್ವಿರೋ ಇಂಜಿನಿಯರ್ಸ್ ಸಮೂಹಕ್ಕೆ ಸೇರಿದ ರಾಮ್ಕಿ ಸಾಲ್ವೆಂಟ್ಸ್‌ನ ಕೋಸ್ಟಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಪ್ರಾಜೆಕ್ಟ್ನ ಘಟಕದಲ್ಲಿ ಭಾರೀ ಸ್ಫೋಟ ಉಂಟಾಗಿತ್ತು. ಈ ವೇಳೆ ಒಬ್ಬರು ಸ್ಥಳದಲ್ಲೇ ಸುಟ್ಟು ಕರಕಲಾದರೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಇನ್ನು ಪರಿಸರ ಇಲಾಖೆಯಿಂದ ಅನುಮೋದನೆ ಪಡೆಯದ ಅಪಾಯಕಾರಿ ವಿಭಾಗದ ಘಟಕಗಳನ್ನು ನೋಡಿದರೆ ಭೋಪಾಲ್‌ನ ಅನಿಲ ದುರಂತ ನೆನಪಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ದಾಬಸ್‌ಪೇಟೆಯಲ್ಲಿ ಏನು ಸಮಸ್ಯೆ?
- ಬೆಂಗಳೂರಿನ ಪಕ್ಕದಲ್ಲೇ ಕೇಂದ್ರ ಪರಿಸರ ಇಲಾಖೆ ಅನುಮತಿ (ಇ.ಸಿ.) ಇಲ್ಲದೆ ಅಪಾಯಕಾರಿ ತ್ಯಾಜ್ಯ ಸಂಸ್ಕರಣೆ ಘಟಕ ಕಾರ್ಯನಿರ್ವಹಣೆ.
- ದಾಬಸ್‌ಪೇಟೆಯಲ್ಲಿ ರಾಮ್ಕಿ ಎನ್ವಿರೋ ಇಂಜಿನಿಯರ್ಸ್ ಲಿಮಿಟೆಡ್‌ನಿಂದ ಇ.ಸಿ. ಇಲ್ಲದೆ ಸಂಸ್ಕರಣಾ ಚಟುವಟಿಕೆ.
- ಅಪಾಯಕಾರಿ ತಾಜ್ಯ ಶೇಖರಣೆ, ಸಂಸ್ಕರಣೆ, ವಿಲೇವಾರಿ (ಟಿಎಸ್‌ಡಿಎಫ್) ಹಾಗೂ ತ್ಯಾಜ್ಯವನ್ನು ಸುಡುವ ಇನ್ಸಿನರೇಟರ್ (ದಹನಕಾರಿ) ಘಟಕ.
- ಇನ್ಸಿನರೇಟರ್‌ಗೆ ಮಾತ್ರ ಇ.ಸಿ. ಪಡೆದು ಟಿಎಸ್‌ಡಿಎಫ್ ಘಟಕವೂ ಕಾರ್ಯನಿರ್ವಹಣೆ. 2018ರಲ್ಲಿ ಇದನ್ನು ಪ್ರಶ್ನಿಸಿ ಇದೀಗ ಮೆತ್ತಗೆ ಅನುಮತಿ ನೀಡಿದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ.
- ವಿಶಾಖಪಟ್ಟಣಂನಲ್ಲಿ ಈ ವರ್ಷದ ಜೂನ್‌ನಲ್ಲಿ ರಾಮ್ಕಿಗೆ ಸೇರಿದ ತಾಜ್ಯ ನಿರ್ವಹಣೆ ಘಟಕದಲ್ಲೇ ಭಾರೀ ಸ್ಫೋಟ. ಇದರಿಂದ ಭಯಭೀತರಾಗಿರುವ ದಾಬಸ್‌ಪೇಟೆ ಸ್ಥಳೀಯರು.
- ಇ.ಸಿ. ಪಡೆಯದೆ ಪದೇ ಪದೇ ಕಾನೂನು ಉಲ್ಲಂಘಿಸಿರುವ ಕಂಪೆನಿಗೆ ಸಿಎಫ್‌ಒ (ಕಾರ್ಯನಿರ್ವಹಣೆಗೆ ಒಪ್ಪಿಗೆ) ನೀಡಿ ಹುಬ್ಬೇರುವಂತೆ ಮಾಡಿದ ಮಾಲಿನ್ಯ ನಿಯಂತ್ರಣ ಮಂಡಳಿ.
- ಮಂಡಳಿಯ ಕ್ರಮಕ್ಕೆ ಸ್ಥಳೀಯರು ಹಾಗೂ ಪರಿಸರವಾದಿಗಳಿಂದ ತೀವ್ರ ಆಕ್ರೋಶ.
ಲಾರಿಯೇ ಹೊತ್ತಿ ಉರಿದಿತ್ತು!
ಹಲವು ವರ್ಷಗಳ ಹಿಂದೆ ಮಂಗಳೂರಿನಿಂದ ದಾಬಸ್‌ಪೇಟೆಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ತರಲಾಗುತ್ತಿದ್ದ ಅಪಾಯಕಾರಿ ತ್ಯಾಜ್ಯವುಳ್ಳ ಲಾರಿಯು ಮಾರ್ಗಮಧ್ಯೆಯೇ ಹೊತ್ತಿ ಉರಿದಿತ್ತು. ಅಷ್ಟರ ಮಟ್ಟಿಗೆ ಅಪಾಯಕಾರಿ ತ್ಯಾಜ್ಯವನ್ನು ಈ ಘಟಕದಲ್ಲಿ ಸಂಸ್ಕರಣೆ ಮಾಡಲಾಗುತ್ತದೆ. ಹೀಗಾಗಿ ಪರಿಸರಕ್ಕೆ ಸಂಬಂಧಪಟ್ಟಎಲ್ಲ ಅನುಮತಿಗಳನ್ನೂ ಪಡೆದ ಬಳಿಕವೇ ಕಾರ್ಯನಿರ್ವಹಣೆಗೆ ಅವಕಾಶ ನೀಡಬೇಕಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.