ಮತ್ತೆ ಕೊರೋನಾ ಅಟ್ಟಹಾಸಕ್ಕೆ ಅಸಲಿ ಕಾರಣವೇನು? ಚಳಿಗಾಲದಲ್ಲಿ ಏನ್ ಕತೆ!
ರಾಷ್ಟ್ರ ರಾಜಧಾನಿಗೆ ಮತ್ತೇ ಕೊರೋನಾ ಕಂಟಕ/ ಪ್ರತಿ ನಿತ್ಯ ಏರಿಕೆಯಾಗುತ್ತಿದೆ ಸೋಂಕಿತರ ಸಂಖ್ಯೆ/ ಚಳಿಗಾಳ ಮತ್ತಷ್ಟು ಆತಂಕ ತಂದೊಡ್ಡಲಿದೆ/ ವಾಯುಮಾಲಿನ್ಯವೂ ನಿಯಂತ್ರಣಕ್ಕೆ ಸಿಗುತ್ತಿಲ್ಲ
ಡೆಲ್ಲಿ ಮಂಜು
ನವದೆಹಲಿ(ಅ. 30) ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಸೋಂಕಿನ `ಥರ್ಡ್ ವೇವ್' ಶುರುವಾಯ್ತಾ ? 60 ಸಾವಿರ ಮಂದಿ ಗೆ ಟೆಸ್ಟ್ ಮಾಡಿದರೇ ಐದು ಸಾವಿರ ಸೋಂಕಿತರು ಎಂದು ಫಲಿತಾಂಶ ಹೊರ ಬೀಳುತ್ತಿರುವುದು ಇದೀಗ ದೆಹಲಿಯಲ್ಲಿ ಥರ್ಡ್‍ವೇವ್ ಶುರುವಾಗಿದೆ ಅನ್ನೋ ಮಾತುಗಳು ಆರಂಭವಾಗಿವೆ.
ದೆಹಲಿಯ ಆರೋಗ್ಯಮಂತ್ರಿ ಸತ್ಯೇಂದ್ರಜೈನ್, ಇದನ್ನು ಮೂರನೇ ವೇವ್ ಅನ್ನೋಕೆ ಆಗೋದಿಲ್ಲ. ಟೆಸ್ಟಿಂಗ್ ರೇಟ್ ಜಾಸ್ತಿ ಇದೆ. ಹಾಗಾಗಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಎಂದಿದ್ದಾರೆ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ನಾಲ್ಕರಿಂದ ಐದು ಸಾವಿರ ಸೋಂಕಿತರ ಪತ್ತೆಯಾಗುತ್ತಿರುವುದು ಮತ್ತೆ ದೆಹಲಿಗರಲ್ಲಿ ಆತಂಕ ಶುರುವಾಗಿದೆ.
ಚಳಿಗಾಲ ಜೊತೆಗೆ ವಾಯುಮಾಲಿನ್ಯ : 2020ರ ಈ ವರ್ಷದಲ್ಲಿ ಎಲ್ಲವೂ ತುಸು ಹೆಚ್ಚೇ ಅನ್ನುವಂತಾಗಿದೆ. ದೆಹಲಿಯಲ್ಲಿ ಸೂರ್ಯ ಕೆಂಗಣ್ಣುಬೀರಿ 47 ಡಿಗ್ರಿಯ ತನಕ ತನ್ನ ಪ್ರತಾಪ ತೋರಿದ್ದು ದಾಖಲಾಗಿದರೇ, ಈಗ ಚಳಿಗಾಲದ ಆರಂಭದಲ್ಲೇ ಎರಡೂವರೆ ದಶಕದ ಹಿಂದಿನ ದಾಖಲೆಗಳು ಸಮವಾಗುತ್ತಿವೆ. ಅಕ್ಟೋಬರ್ ತಿಂಗಳಲ್ಲಿ 12, 13 ಡಿಗ್ರಿ ತಾಪಮಾನ ದಾಖಲಾಗುತ್ತಿದ್ದು ದೆಹಲಿಗರನ್ನು ಹೈರಾಣವಾಗಿಸುತ್ತಿದೆ.
ಚಳಿಗಾಲದಲ್ಲಿ ದೆಹಲಿಗೆ ಬಂದ್ರೆ ಕೆಮ್ಮು ಮತ್ತು ಮಾಲಿನ್ಯ ಉಚಿತ ಅನ್ನೋ ಮಾತಿಗೆ ಈ ವರ್ಷ ಇನ್ನಷ್ಟು ಪುಷ್ಠಿಕೊಟ್ಟಿದೆ. ಇನ್ನು ಮನೆ ಬಿಟ್ಟು ಹೊರಗಡೆ ಬಾರದ ಹೌಸ್ ವೈಫ್, ಹಿರಿಯ ನಾಗರಿಕರಿಗೂ ಕೂಡ ಕೆಮ್ಮು, ನೆಗಡಿಯನ್ನು ಚಳಿಯ ಜೊತೆ ವಾಯುಮಾಲೀನ್ಯ ತಂದೊಡ್ಡುತ್ತಿರುವುದು ಸುಳ್ಳಲ್ಲ. ಅದರಲ್ಲೂ ಅಸ್ತಮಾ ರೋಗಿಗಳ ನರಳಾಟ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಕಾಣುತ್ತಿದೆ.
ದೆಹಲಿ ವಿಷಗಾಳಿ ಪರಿಸ್ಥಿತಿ ಹೇಗಿದೆ?
ಕೊರೋನಾ ಸೋಂಕಿತರಿಗೆ ವಾಯುಮಾಲಿನ್ಯ ಒಂದು ರೀತಿ ಯಮಪುರಿಯ ದಾರಿ ತೋರಿಸುತ್ತಿದೆ. ವಾಯುಮಾಲಿನ್ಯದ ಏರಿಕೆಯಿಂದ ಕೊರೋನಾ ಸೋಂಕಿತರ ಸಾವು ಕೂಡ ಹೆಚ್ಚಳವಾಗುತ್ತಿದೆ. ಕೊರೋನಾ ಮೊದಲೇ ಸೋಂಕಿತನ ಉಸಿರು ನಿಲ್ಲಿಸುವ ಕೆಲಸ ಮಾಡುತ್ತದೆ. ಇದರ ಜೊತೆಯಲ್ಲಿ ವಾಯುಮಾಲಿನ್ಯ! ದೀಪಾವಳಿಯ ಮುನ್ನವೇ ಏರ್ ಕ್ವಾಟಲಿ ಇಂಡೆಕ್ಸ್ 400ರ ಹಾಸುಪಾಸಿಗೆ ಬಂದು ನಿಂತಿರೋದು ಕೂಡ ಕೊರೊನಾ ಸೋಂಕಿತರಿಗೆ ಕೆಟ್ಟ ಸೂಚನೆಯೇ ಸರಿ.
ನವೆಂಬರ್ ನಲ್ಲಿ 10 ಸಾವಿರ ಸೋಂಕಿತರು : ಚಳಿಗಾಲ, ವಾಯುಮಾಲಿನ್ಯ ಹಾಗು ಕೊರೋನಾ ಮೂರು ಕೂಡ ಏಕಕಾಲಕ್ಕೆ ದೆಹಲಿಗರನ್ನು ಕಾಡಲು ಶುರುವಾಗಿವೆ. ದೆಹಲಿಯ ನಿತ್ಯ ಹೆಲ್ತ್ ಬುಲಿಟನ್‍ನಲ್ಲಿ 40 ರಿಂದ 50 ಮಂದಿಯ ತನಕ ಕೊರೋನಾ ಸೋಂಕಿತರು ಸಾವಿನ ಕದ ತಟ್ಟುತ್ತಿರುವುದು ವರದಿಯಾಗುತ್ತಿದೆ. ಕಳೆದ ಎರಡು ದಿನಗಳಿಂದಲೂ ಸೋಂಕಿತರ ಸಂಖ್ಯೆ ಐದು ಸಾವಿರ ಗಡಿದಾಟುತ್ತಿರುವುದು ಆತಂಕ ಹೆಚ್ಚಿಸುತ್ತಿದೆ. ಇದರ ಜೊತೆಯಲ್ಲಿ ದೆಹಲಿಯಲ್ಲಿ ಕೊರೋನಾ ವೇಗಕ್ಕೆ ಕಡಿವಾಣ ಬೀಳದಿದ್ದರೇ ನವೆಂಬರ್ ಅಂತ್ಯಕ್ಕೆ ಪ್ರತಿನಿತ್ಯ ಸೋಂಕಿತರ ಸಂಖ್ಯೆ 10 ಸಾವಿರ ದಾಟುತ್ತದೆ ಎನ್ನುತ್ತಿದ್ದಾರೆ ತಜ್ಞರು.
ಚಾಂದಿನಿ ಚೌಕಕ್ಕೆ ಹೊಸ ಕಳೆ; ಅಡ್ಡ ರಸ್ತೆಯಲ್ಲೊಂದು ಸುಂದರ ಸುತ್ತು
ಆದರೆ ತಜ್ಞರ ಈ ಸಂಖ್ಯೆ ಮುಟ್ಟದಂತೆ ನಾವು ಕ್ರಮವಹಿಸಿದ್ದೇವೆ. ಟೆಸ್ಟಿಂಗ್, ಟ್ರೇಸಿಂಗ್‍ಗೆ ಹೆಚ್ಚು ಆದತ್ಯೆ ನೀಡಿದ್ದೇವೆ. ಎಚ್ಚರಿಕೆಯಂತೆ ನಿಯಂತ್ರಣಕ್ಕೆ ಸಿದ್ಧತೆಗಳನ್ನೂ ಕೂಡ ಮಾಡಿಕೊಳ್ಳಲಾಗಿದೆ ಎನ್ನುವ ಮೂಲಕ ದೆಹಲಿಗರಿಗೆ ಸಮಾಧಾನ ಹೇಳುತ್ತಿದ್ದಾರೆ ಆರೋಗ್ಯ ಸಚಿವ ಸತ್ಯೇಂದ್ರಜೈನ್. ಇನ್ನು `ಗುಂಪು ಮತ್ತು ಕೊರೋನಾ' ಒಟ್ಟಿಗೆ ಸಾಗುತ್ತವೆ ಅನ್ನುವ ಈ ಹೊತ್ತಲ್ಲಿ ಮಾಸ್ಕ್ ಧರಿಸಿದರೆ ವಾಯುಮಾಲೀನ್ಯ ಮತ್ತು ಕೊರೊನಾ ಎರಡರಿಂದಲೂ ರಕ್ಷಣೆ ಸಿಗುತ್ತೆ ಅನ್ನೋದು ಡೆಲ್ಲಿ ಸರ್ಕಾರದ ಹೊಸ ಸ್ಲೋಗನ್.