ರಾಜ್ಯ ಸರ್ಕಾರವು ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ ಜಿಲ್ಲೆ' ಎಂದು ಮರುನಾಮಕರಣ ಮಾಡಿದೆ. ಈ ಬದಲಾವಣೆಯು ಆಡಳಿತ ಮತ್ತು ಸಾರ್ವಜನಿಕ ಸೇವೆಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ಮತ್ತು ಹೇರೋಹಳ್ಳಿ ತಾಲೂಕುಗಳು ಜಿಲ್ಲೆಯ ವ್ಯಾಪ್ತಿಗೆ ಬರುತ್ತವೆ.
ಬೆಂಗಳೂರು (ಮೇ 23): ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು, ಇಂದಿನಿಂದ ರಾಮನಗರ ಜಿಲ್ಲೆಯ ಹೊಸ ಹೆಸರು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರವು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಈ ಹೆಸರು ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಕ್ರಮ ಕೈಗೊಂಡಿದೆ.
ಪ್ರಮುಖವಾಗಿ, ರಾಜ್ಯ ರಾಜಧಾನಿ ಬೆಂಗಳೂರು ನಗರವನ್ನು ವಿಭಜಿಸಿ ವಿಸ್ತಾರಗೊಳಿಸುವ ಉದ್ದೇಶದಿಂದ ಈ ಮರುನಾಮಕರಣ ಮಾಡಲಾಗಿದೆ. ಬೆಂಗಳೂರಿನ ಜನಸಂಖ್ಯೆ, ನಗರೀಕರಣದ ವೇಗ, ಆಡಳಿತಾತ್ಮಕ ಸವಾಲುಗಳನ್ನು ಗಮನದಲ್ಲಿ ಇಟ್ಟುಕೊಂಡು ರಾಮನಗರ ಜಿಲ್ಲೆಯ ಹೆಸರನ್ನು 'ಬೆಂಗಳೂರು ದಕ್ಷಿಣ ಜಿಲ್ಲೆ' ಎಂದು ಪರಿವರ್ತನೆ ಮಾಡಲಾಗಿದೆ. ಈ ಹೊಸ ಹೆಸರನ್ನು ಎಲ್ಲ ಸರ್ಕಾರಿ ದಾಖಲೆಗಳು, ಬೋರ್ಡುಗಳು, ನಾಮಪತ್ರಗಳು ಹಾಗೂ ಕಚೇರಿ ದಾಖಲೆಗಳಲ್ಲಿ ತಕ್ಷಣದಿಂದ ಜಾರಿಗೆ ತರಲಾಗುವುದು. ಇದರ ಜೊತೆಗೆ, ಎಲ್ಲಾ ಸಂಬಂಧಿತ ಇಲಾಖೆಗಳಿಗೂ ಸೂಚನೆ ನೀಡಲಾಗಿದೆ.
ಈಗಾಗಲೇ ರಾಮನಗರ ಜಿಲ್ಲೆಗೆ ಸೇರಿದ್ದ ತಾಲೂಕುಗಳಾದ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ಮತ್ತು ಹೇರೋಹಳ್ಳಿ ಇನ್ನು ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆಯ ವ್ಯಾಪ್ತಿಗೆ ಸೇರಲಿವೆ. ಸಾರ್ವಜನಿಕರ ದಿನನಿತ್ಯದ ಸರಕಾರಿ ವ್ಯವಹಾರಗಳಲ್ಲಿ ಹೆಸರು ಬದಲಾವಣೆಯು ಯಾವುದೇ ಅಡಚಣೆ ಉಂಟುಮಾಡದೆ ನಡೆಯಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಈ ನಿರ್ಧಾರ ಹಿಂದಿರುವ ಸರ್ಕಾರದ ಉದ್ದೇಶ
ಆಡಳಿತದ ಸುಧಾರಣೆ
ಮೂಲಭೂತ ಸೌಕರ್ಯಗಳ ಸಮರ್ಪಕ ವಿತರಣಾ ವ್ಯವಸ್ಥೆ
ಸಾರ್ವಜನಿಕ ಸೇವೆಗಳ ಸುಗಮ ನಿರ್ವಹಣೆ
ಮೂರು ಭಾಷೆಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಉಲ್ಲೇಖ:
ಭಾರತದಲ್ಲಿ ಅಧಿಕೃತ ಭಾಷೆಗಳಲ್ಲಿ 3 ಭಾಷೆಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಹೇಗೆ ಬರೆಯಬೇಕು ಎಂಬುದನ್ನು ಸರಕಾರದಿಂದ ತಿಳಿಸಲಾಗಿದೆ. ಇಂಗ್ಲೀಷನ್‌ನಲ್ಲಿ Bengaluru South District, ಕನ್ನಡದಲ್ಲಿ 'ಬೆಂಗಳೂರು ದಕ್ಷಿಣ ಜಿಲ್ಲೆ' ಹಾಗೂ ದೇವನಾಗರಿ ಲಿಪಿಯಲ್ಲಿ 'बेंगलूरु दक्षिण जिला' ಎಂದು ಉಲ್ಲೇಖ ಮಾಡಲಾಗಿದೆ. ರಾಮನಗರ ಜಿಲ್ಲೆಯ ಎಲ್ಲೆಡೆ ಇದೀಗ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಫಲಕಗಳನ್ನು ಹಾಗೂ ಕಡತಗಳಲ್ಲಿ ತಿದ್ದುಪಡಿಗಳನ್ನು ಮಾಡುವಂತೆ ಆದೇಶ ಹೊರಡಿಸಲಾಗಿದೆ.

2007ರಲ್ಲಿ ರಾಮನಗರ ಜಿಲ್ಲೆ ನಾಮಕರಣ:
ರಾಜ್ಯದಲ್ಲಿ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದ್ದ ಅವಧಿಯಲ್ಲಿ ಹಾಲಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ, ಹೇರೋಹಳ್ಳಿಯನ್ನು ಒಟ್ಟುಗೂಡಿಸಿ 2007ರಲ್ಲಿ ರಾಮನಗರ ಜಿಲ್ಲೆ ಎಂದು ಪ್ರತ್ಯೇಕ ಜಿಲ್ಲೆಯನ್ನಾಗಿ ರಚಿಸಿದರು. ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಕೋಟಿ ಕೋಟಿ ಅನುದಾನವನ್ನು ನೀಡಿದ್ದಾರೆ. ಜಿಲ್ಲಾಡಳಿತ ಕಚೇರಿ, ಪೊಲೀಸ್ ಕಚೇರಿ, ಆಸ್ಪತ್ರೆಗಳು ಇತರೆ ಸರ್ಕಾರಿ ಇಲಾಖೆಗಳನ್ನು ನಿರ್ಮಾಣ ಮಾಡಲಾಗಿದೆ. ಇದೀಗ ಇದೇ ರಾಮನಗರವನ್ನು ರಾಜಕೀಯ ಮತ್ತು ಆಡಳಿತ ಉದ್ದೇಶದಿಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿದ್ದಾರೆ. ಇಲ್ಲಿ ಮುಖ್ಯವಾಗಿ ರಾಮನಗರವನ್ನು ಜಿಲ್ಲಾ ಕೇಂದ್ರವಾಗಿ ಉಳಿಸಿಕೊಳ್ಳಲಾಗಿದೆ.
ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿದ್ದಕ್ಕೆ ಜೆಡಿಎಸ್ ಹಾಗೂ ವಿಪಕ್ಷವಾದ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಜನತಾದಳದ ವತಿಯಿಂದ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
