ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಜಿಲ್ಲಾ ಕೇಂದ್ರ ರಾಮನಗರವಾಗಿಯೇ ಮುಂದುವರಿಯಲಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಈ ಘೋಷಣೆ ಮಾಡಿದ್ದು, ಅಭಿವೃದ್ಧಿಗೆ ಪೂರಕ ಎಂದಿದ್ದಾರೆ. ಬಿಡಿಎ ತೆರಿಗೆ ಬಾಕಿಗೆ ಬಡ್ಡಿ ವಿನಾಯಿತಿ ನೀಡಲಾಗುವುದು ಎಂದೂ ತಿಳಿಸಿದ್ದಾರೆ.

ಬೆಂಗಳೂರು (ಮೇ 22): ರಾಜ್ಯದಲ್ಲಿ ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಚನೆ ಮಾಡಿದ್ದ ರಾಮನಗರ ಜಿಲ್ಲೆಯನ್ನು ಇದೀಗ ಕಾಂಗ್ರೆಸ್ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮಾಡಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಐಯ ಕೈಗೊಳ್ಳಲಾಗಿದ್ದು, ಶೀಘ್ರದಲ್ಲಿಯೇ ಹೆಸರು ಬದಲಾವಣೆ ಆದೇಶ ಹೊರಬೀಳಲಿದೆ. ಇನ್ನು ಜಿಲ್ಲಾ ಕೇಂದ್ರವಾಗಿ ರಾಮನಗರವನ್ನೇ ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ರಾಮನಗರ ಹೆಸರು ಬದಲಾವಣೆ ಮಾಡಲಾಗಿದೆ. ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ರಾಮನಗರ ಹೆಡ್ ಕ್ವಾರ್ಟರ್ಸ್ ಆಗಿ‌ ಮುಂದುವರಿಯಲಿದೆ. ಇನ್ನು ಹೆಸರು ಬದಲಾವಣೆಯಿಂದ ಜಿಲ್ಲೆ ಅಭಿವೃದ್ಧಿ ಆಗಲ್ಲ ಎಂಬ ಜೆಡಿಎಸ್ ನಾಯಕರ ಟೀಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಜೆಡಿಸ್‌ನವರು ಕಾದು ನೋಡಲಿ ಎಂದರು. ಜೊತೆಗೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ತೆರಿಗೆ ಬಾಕಿ ಉಳಿಸಿಕೊಂಡಿರುವ ಸಂಘ ಸಂಸ್ಥೆಗಳಿಗೆ ಬಡ್ಡಿ ವಿನಾಯಿತಿ ನೀಡಲು ತಿರ್ಮಾನ ಮಾಡಲಾಗಿದೆ. ಮುಖ್ಯವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಸಂಗ್ರಹ ಮತ್ತು ಸಾಗಾಣಿಕೆ ಸೇರಿದಂತೆ ಒಟ್ಟು 33 ಪ್ಯಾಕೇಜ್ ಮಾಡಲು ಸಂಪುಟ ಸಭೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂಬ ಹೆಸರು ಮರುನಾಮಕರಣ ವಿಚಾರದ ಬಗ್ಗೆ ಮಾತನಾಡಿದ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು, ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಜಿಲ್ಲೆಯನ್ನ ಹಿಂದೆ ರಾಮನಗರ ಜಿಲ್ಲೆ ಅಂತ ಮಾಡಿದ್ದರು. ಆದರೆ ಇದಕ್ಕೆ ಬೆಂಗಳೂರು ಎಂಬ ಹೆಸರು ಸೇರಿಸಲು ಸಾಕಷ್ಟು ಅಪೇಕ್ಷೆ ಇತ್ತು. ಈಗ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಘೋಷಣೆ ಆಗಿದೆ. ನಾನು ಸಿಎಂ ಹಾಗೂ ಡಿಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು ಬುದ್ದಿವಂತರು. ಬೆಂಗಳೂರು ಜಿಲ್ಲೆ ಡಿವೈಡ್ ಆದಾಗ ಅವರು ಬೆಂಗಳೂರು ಗ್ರಾಮಾಂತರ ಉಳಿಸಿಕೊಂಡರು. ಆದರೆ ಆಗ ನಾವು ಉಳಿಸಿಕೊಳ್ಳಲು ಆಗಲಿಲ್ಲ. ಈಗ ಬೆಂಗಳೂರು ದಕ್ಷಿಣ ಜಿಲ್ಲೆಯಾದರೆ ರಾಮನಗರ ಪ್ರಮುಖ ಪಟ್ಟಣವಾಗಿ ಉಳಿದುಕೊಳ್ಳುತ್ತದೆ. ಇದಕ್ಕೆ ಎಲ್ಲರೂ ಸಹಕಾರ ಕೊಡಬೇಕು ಎಂದು ಹೇಳಿದರು.

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಹೆಸರು ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು, ಇದು ಬಹಳ ಹೆಮ್ಮೆಪಡುವ ವಿಷಯ‌. ನಾವೆಲ್ಲರೂ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು. ಇದು ಮತ್ತೆ ಬೆಂಗಳೂರಿಗೆ ಸೇರಬೇಕು ಅಂತ ಡಿಸಿಎಂ ಶ್ರಮಪಟ್ಟು ಹೋರಾಟ ಮಾಡಿದ್ದರು. ಅವರ ಶ್ರಮ, ಹೋರಾಟಕ್ಕೆ ಈಗ ಜಯ ಸಿಕ್ಕದೆ. ಇದು ಈ ಜಿಲ್ಲೆಗೆ ಸಿಕ್ಕ ಗೌರವ. ಡಿಸಿಎಂಗೆ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದ ತಿಳಿಸುತ್ತೇನೆ‌‌. ಸಾಕಷ್ಟು ಜನ ಇದಕ್ಕೆ ವಿರೋಧ ಹಾಗೂ ಟೀಕೆ ಮಾಡಿದ್ದರು. ಬೆಂಗಳೂರು ಹೆಸರು ಜಿಲ್ಲೆ ಅಭಿವೃದ್ಧಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ತಿಳಿಸಿದರು.

ಈ ಹಿಂದಿನ ಸರ್ಕಾರಗಳು ಈ ಜಿಲ್ಲೆ ಬಗ್ಗೆ ಗಮನಹರಿಸಿರಲಿಲ್ಲ. ಕುಡಿಯುವ ನೀರಿಗೂ ತೊಂದರೆ ಇತ್ತು. ಕೆಲವರು ಸಿಎಂ ಆಗಿ, ಪ್ರಧಾನ ಮಂತ್ರಿ ಆಗಿದ್ರೂ ನಾವು ಕೊಳಚೆ ನೀರು ಕುಡಿಯುತ್ತಿದ್ದೆವು. ಈಗ ಶುದ್ಧ ಕುಡಿಯುವ ನೀರು ಕೊಡುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಜಿಲ್ಲೆಗೆ ಮೆಟ್ರೋ ತರಲು ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರು ದಕ್ಷಿಣ ಆದ ತಕ್ಷಣ ರಾಮನ ಹೆಸರು ಬಿಡುವುದಿಲ್ಲ. ರಾಮನ ಊರು ರಾಮನಗರ ಎಂದು ಹಾಗೆಯೇ ಉಳಿಯುತ್ತದೆ. ರಾಮನಗರ ಜಿಲ್ಲಾ ಕೇಂದ್ರವಾಗಿ ಹಾಗೆಯೇ ಉಳಿಯಲಿದೆ. ಬೆಂಗಳೂರು ದಕ್ಷಿಣ ಎಂಬ ಹೆಸರಿಗೆ ಸಾಕಷ್ಟು ಹೂಡಿಕೆದಾರರು ಬರುತ್ತಾರೆ. ಈ ಭಾಗದಲ್ಲಿ ಅಭಿವೃದ್ಧಿಗೆ ಇದು ಪೂರಕವಾಗಲಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.