ವರ್ಷದ ಮೊದಲ ಮಳೆ ಕಾಫಿ ಫಸಲಿಗೆ ಅನುಕೂಲ. ಅಲ್ಲದೆ, ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ಕಾಡ್ಗಿಚ್ಚಿಗೆ ಮಳೆ ಬ್ರೇಕ್‌ ಹಾಕಬಹುದು ಎಂದು ಸ್ಥಳೀಯರ ಹರ್ಷ. 

ಬೆಂಗಳೂರು(ಮಾ.15):  ಕೊಡಗು, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು, ಶಿವಮೊಗ್ಗಗಳಲ್ಲಿ ಮಂಗಳವಾರ ಮಧ್ಯಾಹ್ನದ ನಂತರ ಸುರಿದ ವರ್ಷದ ಮೊದಲ ಮಳೆ ಕಾದ ಇಳೆಗೆ ತಂಪನ್ನೆರೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಡಗಿನ ನಾಪೋಕ್ಲು, ಮರಗೋಡು, ಕತ್ತಲೆಕಾಡು ಮತ್ತಿತರ ಕಡೆ ಮಧ್ಯಾಹ್ನದ ನಂತರ ದಿಢೀರ್‌ ಮಳೆಯಾಗಿದ್ದು, ಸುಂಟಿಕೊಪ್ಪದ ಪನ್ಯದಲ್ಲಿ ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಇದೇ ವೇಳೆ, ಮೂಡಿಗೆರೆ, ಎನ್‌.ಆರ್‌.ಪುರ, ಹೊರನಾಡು, ಬಾಳೆಹೊನ್ನೂರು, ಕಳಸ, ಕೊಪ್ಪ ತಾಲೂಕು ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಧ್ಯಾಹ್ನ 2.30ರಿಂದ 4 ಗಂಟೆಯವರೆಗೆ ಆಲಿಕಲ್ಲು, ಗುಡುಗು ಸಹಿತ ಮಳೆಯಾಗಿದೆ. ಗಾಳಿ, ಮಳೆಗೆ ರಂಭಾಪುರಿ ಪೀಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯ 300ಕ್ಕೂ ಅಧಿಕ ಹೆಂಚುಗಳು ಹಾರಿಹೋಗಿವೆ. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ. ಬಾಳೆಹೊನ್ನೂರಿನ ವೀರಭದ್ರಸ್ವಾಮಿ ದೇವಾಲಯದ ಹೆಂಚುಗಳಿಗೂ ಹಾನಿಯಾಗಿದೆ. ಕಳಸದಲ್ಲಿ ಬುಧವಾರ ಮಳೆಗಾಗಿ ಪ್ರಾರ್ಥಿಸಿ ಕಳಸೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿದ್ದು, ಇದಕ್ಕೂ ಒಂದು ದಿನ ಮೊದಲೇ ಮಳೆಯಾಗಿದೆ.

ಬಿಸಿಲಿನ ಬೇಗೆಯಿಂದ ಬಳಲುತ್ತಿರುವವರಿಗೆ ಗುಡ್‌ ನ್ಯೂಸ್‌: ರಾಜ್ಯದಲ್ಲಿ ಇಂದಿನಿಂದ 5 ದಿನ ಮಳೆ..!

ಇದೇ ವೇಳೆ, ಶಿವಮೊಗ್ಗ, ಹೊಸನಗರ ಭಾಗದ ಕೆಲವೆಡೆಯೂ ತುಂತುರು ಮಳೆ ಸುರಿಯಿತು. ಉತ್ತರ ಕನ್ನಡ ಜಿಲ್ಲೆ ಶಿರಸಿ ಸುತ್ತಮುತ್ತ ಮಧ್ಯಾಹ್ನದ ನಂತರ ಮಳೆಯಾಗಿದ್ದು, ಇಳೆಗೆ ತಂಪನ್ನೆರೆಯಿತು. ವರ್ಷದ ಮೊದಲ ಮಳೆ ಕಾಫಿ ಫಸಲಿಗೆ ಅನುಕೂಲ. ಅಲ್ಲದೆ, ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ಕಾಡ್ಗಿಚ್ಚಿಗೆ ಮಳೆ ಬ್ರೇಕ್‌ ಹಾಕಬಹುದು ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.