ಬಿಸಿಲಿನ ಬೇಗೆಯಿಂದ ಬಳಲುತ್ತಿರುವವರಿಗೆ ಗುಡ್ ನ್ಯೂಸ್: ರಾಜ್ಯದಲ್ಲಿ ಇಂದಿನಿಂದ 5 ದಿನ ಮಳೆ..!
ರಾಜ್ಯದ ನಾನಾ ಕಡೆ ಇಂದಿನಿಂದ 5 ದಿನ ಮಳೆಯಾಗುವ ಸಾಧ್ಯತೆ ಎಂದು ಮಾಹಿತಿ ನೀಡಿದೆ. ಮಾರ್ಚ್ 14 ರಿಂದ 18 ರವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವೆಡೆ ಹಾಗೂ ಮಾರ್ಚ್ 16 ರಿಂದ 18 ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು (ಮಾರ್ಚ್ 14, 2023): ಈಗ ಎಲ್ಲಿ ನೋಡಿದ್ರೂ ಬಿಸಿಲಿನ ಅಬ್ಬರ ತಾಂಡವವಾಡ್ತಿದೆ. ಹಲವರು ಮಧ್ಯಾಹ್ನದ ವೇಳೆ ಮನೆಯಿಂದ ಹೊರಗೆ ಹೋಗಲು ಹೆದರುತ್ತಿದ್ದಾರೆ. ಇನ್ನು, ಹಲವರಿಗೆ ನಾನಾ ರೀತಿಯ ಕಾಯಿಲೆಗಳು ಶುರುವಾಗಿದೆ. ಈ ನಡುವೆ, ಬಿಸಿಲ ಧಗೆ ನಿಧಾನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯ ಸೇರಿ ದೇಶಾದ್ಯಂತ ತಾಪಮಾನ ಏರಿಕೆಯಾಗುತ್ತಲೇ ಇದೆ. ನಿಮಗೂ ಬಿಸಿಲು ಈಗಾಗಲೇ ತಲೆ ನೋವು ತರಿಸಿದ್ದರೆ ನಿಮಗೆ ನೆಮ್ಮದಿ ತರುವ ಸುದ್ದಿ ಇದು.
ಬಿಸಿಲ ಧಗೆ ರಾಜ್ಯದಲ್ಲಿ ನಿಧಾನವಾಗಿಯೇ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ. ಸಮುದ್ರಗಳಲ್ಲಿ ಮೆಲ್ಮೈ ಸುಳಿ ಕಾಣಿಸಿಕೊಂಡಿರೋ ಕಾರಣ ರಾಜ್ಯದ ನಾನಾ ಕಡೆ ಇಂದಿನಿಂದ 5 ದಿನ ಮಳೆಯಾಗುವ ಸಾಧ್ಯತೆ ಎಂದು ಮಾಹಿತಿ ನೀಡಿದೆ. ಮಾರ್ಚ್ 14 ರಿಂದ 18 ರವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವೆಡೆ ಹಾಗೂ ಮಾರ್ಚ್ 16 ರಿಂದ 18 ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನು ಓದಿ: ಬೇಸಿಗೆ ಆರಂಭದಲ್ಲೇ ಬತ್ತಿದ ಕೊಡಗಿನ ಕಾವೇರಿ, ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಆತಂಕ!
ಅದೇ ರೀತಿ, ಉತ್ತರ ಒಳನಾಡಿನ ಬಾಗಲಕೋಟೆ, ಬಳ್ಳಾರಿ, ಬೀದರ್, ಧಾರವಾಡ, ಗದಗ, ಕಲಬುರಗಿ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಯ ಕೆಲವೆಡೆ ಮಾರ್ಚ್ 16 ರಿಂದ ಮಾರ್ಚ್ 18 ರವರೆಗೆ ಮಳೆಯಾಗಲಿದೆ ಎಂದೂ ಹೇಳಲಾಗುತ್ತಿದೆ. ಹಾಗೆ, ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ಸಹ ಮಾರ್ಚ್ 17 ಹಾಗೂ 18 ರಂದು ಹಗುರ ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ.
ಕಾರವಾರದಲ್ಲಿ ಸೋಮವಾರ ರಾಜ್ಯದಲ್ಲೇ ಗರಿಷ್ಠ 37.1 ಡಿಗ್ರಿ ಸೆಲ್ಶಿಯಸ್ ಹಾಗೂ ಬಾಗಲಕೋಟೆಯಲ್ಲಿ ಕನಿಷ್ಠ 14 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ ಎಂದೂ ಐಎಂಡಿ ಮಾಹಿತಿ ನೀಡಿದೆ.
ಇದನ್ನೂ ಓದಿ: ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡದಲ್ಲಿ ವರ್ಷದ ಮೊದಲ ಮಳೆ
ಕರಾವಳಿ ಭಾಗದಲ್ಲಿ ಇಂದಿನಿಂದಲೇ ಮಳೆ..!
ರಾಜ್ಯದ ಗಡಿಗೆ ಹೊಂದಿಕೊಂಡಿರುವ ಕಾಸರಗೋಡು ಸೇರಿಕೊಂಡು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಇಂದು ಹಾಗೂ ನಾಳೆ ಮೋಡ ಮುಸುಕಿನ ವಾತಾವರಣ ಇರಲಿದ್ದು ಹಾಗೂ ಸಾಧಾರಣ ಮಳೆಯ ಸಾಧ್ಯತೆ ಇದೆ ಎಂದೂ ಹೇಳಿದೆ. ಈ ಮಧ್ಯೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತಾಪಮಾನ ಹೆಚ್ಚುತ್ತಲೇ ಇದ್ದು, ಮಂಗಳೂರಿನಲ್ಲಿ ಮಾರ್ಚ್ 13 ರಂದು ಗರಿಷ್ಠ 35 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಇಂದು ಹಾಗೂ ನಾಳೆ 36ಕ್ಕೆ ಏರಿಕೆಯಾಗಬಹುದು ಹಾಗೂ ಮಾರ್ಚ್ 16 ರ ನಂತರ ಗರಿಷ್ಠ ತಾಪಮಾನ 38 ಡಿಗ್ರಿಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಆದರೂ, ಮೋಡ -ಮುಸುಕಿನ ವಾತಾವರಣ ಹಾಗೂ ಮಳೆಯ ಸಾಧ್ಯತೆಯೂ ಇದೆ. ರಾಜ್ಯದಲ್ಲಿ ಮಾತ್ರವಲ್ಲ ದೇಶದ 10 ರಾಜ್ಯಗಳಲ್ಲಿ 6 ದಿನಗಳ ಕಾಲ ಮಳೆಯಾಗಬಹುದು ಎಂದೂ ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: Chikkamagaluru: ಜನೆವರಿಯಲ್ಲೂ ಮಳೆ ಕಂಡು ಮಲೆನಾಡಿಗರು ಕಂಗಾಲು!