ಶಿವಮೊಗ್ಗದ ರಾಗಿಗುಡ್ಡದಲ್ಲಿ ಗಣಪತಿ ವಿಗ್ರಹ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಚನ್ನಬಸಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಕ್ರಮ ಮನೆ ನಿರ್ಮಾಣ ಮಾಡಿದ ಆರೋಪಿ ಸಿದ್ದಿಕ್ ಮನೆ ತಕ್ಷಣ ಧ್ವಂಸಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಶಿವಮೊಗ್ಗ (ಜುಲೈ 5): ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಅನ್ಯಕೋಮಿನ ಯುವಕರಿಂದ ಗಣಪತಿ ವಿಗ್ರಹ ಒಡ್ಡಿ ಕಿತ್ತೆಸೆಯಲಾದ ಘಟನೆಯ ಹಿನ್ನೆಲೆಯಲ್ಲಿ ಶಾಸಕ ಚನ್ನಬಸಪ್ಪ ಸ್ಥಳಕ್ಕೆ ಭೇಟಿ ನೀಡಿದರು
ಡಿವೈಎಸ್‌ಪಿಗೆ ತರಾಟೆ:
ಸ್ಥಳ ಪರಿಶೀಲನೆ ಬಳಿಕ ಶಿವಮೊಗ್ಗ ಗ್ರಾಮಾಂತರ ಡಿವೈಎಸ್‌ಪಿ ಸಂಜೀವ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು. ಬಳಿಕ ಪ್ರಕರಣದ ಕುರಿತು ಮಾತನಾಡಿದ ಚನ್ನಬಸಪ್ಪ, ಸಿದ್ದಿಕ್ ಎಂಬಾತ ಸರ್ಕಾರಿ ಜಾಗದಲ್ಲಿ ಮಹಾನಗರ ಪಾಲಿಕೆಯ ಯಾವುದೇ ಪರವಾನಗಿಯಿಲ್ಲದೆ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.
ಹಿಂದೂಗಳು ಇರಬಾರದು ಎಂಬುವವನ ಮನೆಯೂ ಇಲ್ಲಿ ಇರಬಾರದು:
ಹಿಂದುಗಳ ದೇಗುಲ ಇರಬಾರದು ಎನ್ನುವವನ ಮನೆ ಇಲ್ಲಿ ಇರಬೇಕಿಲ್ಲ. ತಕ್ಷಣವೇ ಈ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸಬೇಕು ಎಂದು ಕಿಡಿಕಾರಿದ ಶಾಸಕರು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಗೆ ಮೊಬೈಲ್ ಕರೆ ಮಾಡಿ, ಸಿದ್ದಿಕ್‌ನ ಮನೆಯನ್ನು ತಕ್ಷಣ ಡೆಮಾಲಿಶ್ ಮಾಡುವಂತೆ ಒತ್ತಾಯಿಸಿದರು.
ಪಾಲಿಕೆ ಆಡಳಿತ ಇದನ್ನು ಕೈಗೊಳ್ಳದಿದ್ದರೆ, ನಾವೇ ನೆಲಸಮಗೊಳಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆಕ್ರೋಶ ಮತ್ತು ಆತಂಕ ಮೂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಾಸಕರ ಈ ಕಠಿಣ ನಿಲುವಿನಿಂದ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಮುಂದಿನ ಅಪ್ಡೇಟ್‌ಗಾಗಿ ಟ್ಯೂನ್ ಆಗಿರಿ.