ಕೊಡಗಿನಲ್ಲಿ ಬೆಟ್ಟ ಕೊರೆದು ಬಡಾವಣೆ ನಿರ್ಮಾಣದಿಂದ ಭೂಕುಸಿತದ ಭೀತಿ. ಮಡಿಕೇರಿಯಲ್ಲಿ ಅಪಾಯಕಾರಿ ಬೆಟ್ಟದ ಮೇಲೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ.

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು : ಕೊಡಗು ಜಿಲ್ಲೆಯಲ್ಲಿ 2018 ರಿಂದ ನಿರಂತರವಾಗಿ ಭೂಕುಸಿತ ಪ್ರವಾಹ ಎದುರಾಗುತ್ತಲೇ ಇವೆ. 2018 ರಲ್ಲಿ ಸಂಭವಿಸಿದ ಭೂಕುಸಿತ ಪ್ರವಾಹದಲ್ಲಿ ಹತ್ತಾರು ಜನರ ಪ್ರಾಣ ಪಕ್ಷಿ ಹಾರಿ ಹೋಯಿತು. ಅದಕ್ಕೆ ಕಾರಣ ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪವೇ ಕಾರಣ ಅಂತ ಅಂದೇ ಭೂ ವಿಜ್ಞಾನಿಗಳ ತಂಡ ಅಂದಿನ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇಷ್ಟಾದರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಬದಲಾಗಿ ಬೆಟ್ಟ ಗುಡ್ಡಗಳನ್ನು ಕೊರೆದು ಬಡಾವಣೆಗಳನ್ನು ನಿರ್ಮಿಸುವ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ.

ಹೌದು ಮಡಿಕೇರಿ ನಗರಸಭೆ ವ್ಯಾಪ್ತಿಯ ಕನ್ನಂಡ ಬಾಣೆಯಲ್ಲಿ ಬೃಹತ್ ಬೆಟ್ಟವನ್ನು ಕೊರೆದು ಅಲ್ಲಿ ಬಡಾವಣೆ ಮುಂದಾಗಿದ್ದಾರೆ. ಬೆಂಗಳೂರಿನ ಖಾಸಗಿ ಕಂಪೆನಿಯೊಂದರ ಹೆಸರಿನಲ್ಲಿ ರಾಜಕೀಯ ಪ್ರಭಾವಿ ವ್ಯಕ್ತಿಯೊಬ್ಬರು 2023 ರಲ್ಲಿಯೇ ಈ ಭೂಮಿಯನ್ನು ಖರೀದಿಸಿ ಅಂದೇ ಭೂ ಪರಿವರ್ತನೆಯನ್ನು ಮಾಡಿದ್ದಾರೆ. ಆದರೆ ಇದೀಗ ಆ ಬೆಟ್ಟ ಪ್ರದೇಶವನ್ನು ಕೊರೆದು ಬಡಾವಣೆ ನಿರ್ಮಿಸಿ ಮತ್ತೊಂದು ದುರಂತ ತರಲು ಸಜ್ಜಾಗಿದ್ದಾರೆ.

ಅತ್ಯಂತ ಕಡಿದಾದ ಈ ಬೆಟ್ಟ ಪ್ರದೇಶದಲ್ಲಿ ಬರೋಬ್ಬರಿ ನಾಲ್ಕು ಎಕರೆ ಪ್ರದೇಶದಷ್ಟು ಬೆಟ್ಟವನ್ನು ಕೊರೆದು ಅದರಲ್ಲಿ ಬಡಾವಣೆ ನಿರ್ಮಿಸಲು ಹೊರಟಿದೆ. ಇದಕ್ಕೆ ಹೊಂದಿಕೊಂಡಂತೆ ಮಡಿಕೇರಿ, ಸೋಮವಾರಪೇಟೆ ಹಾಗೂ ಗಾಳಿಬೀಡು ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಇದೆ. ಇದೀಗ ಬಡಾವಣೆ ಮಾಡಲು ಬೆಟ್ಟವನ್ನು ಕೊರೆದಿರುವುದರಿಂದ ಹೆದ್ದಾರಿಯೇ ಕುಸಿಯುವ ಭೀತಿ ಎದುರಾಗಿದೆ. ಎಷ್ಟೊಂದು ಅಪಾಯಕಾರಿ ಸ್ಥಳ ಎಂದು ಗೊತ್ತಿದ್ದರೂ ಬಡಾವಣೆ ನಿರ್ಮಾಣಕ್ಕೆ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹೇಗೆ ಅವಕಾಶ ನೀಡಿದರು ಎನ್ನುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಒಂದು ವೇಳೆ ಬೆಟ್ಟ ಕುಸಿದಿದ್ದೇ ಆದಲ್ಲಿ ಕೆಳಭಾಗದಲ್ಲಿ 50 ಕ್ಕೂ ಹೆಚ್ಚು ಮನೆಗಳಿದ್ದು ಮಾರಣ ಹೋಮವೇ ನಡೆದು ಹೋಗುತ್ತದೆ. ಇದು ಕೇರಳ ವೈಯನಾಡಿನಲ್ಲಿ ನಡೆದ ದುರಂತವನ್ನು ನೆನಪಿಸುವುದರಲ್ಲಿ ಅನುಮಾನವಿಲ್ಲ. ಈ ಕುರಿತು ನಗರಾಭಿವೃದ್ಧಿ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಅವರನ್ನು ಕೇಳಿದರೆ, ಇದು ನಾನು ಅಧಿಕಾರಕ್ಕೆ ಬರುವ ಮೊದಲೇ ಆಗಿದೆ. ಆದರೂ ನಾಳೆಯೇ ನಮ್ಮ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಪಾಯದ ಸ್ಥಳವೆಂದು ಕಂಡುಬಂದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಮಡಿಕೇರಿ ನಗರಸಭೆಯ ಈ ವಾರ್ಡಿನ ಕೌನ್ಸಿಲರ್ ಸತೀಶ್ ಕುಮಾರ್ ಇದು ಅತ್ಯಂತ ಅಪಾಯಕಾರಿ ಸ್ಥಳ. ಆದರೂ ಅಧಿಕಾರಿಗಳು ಹೇಗೆ ಇಲ್ಲಿ ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆ ಗೊತ್ತಿಲ್ಲ. ಇದು ಜನರ ಜೀವದೊಂದಿಗೆ ಆಟವಾಡುವ ಕೆಲಸವಾಗುತ್ತಿದೆ. ಈ ಕುರಿತು ಈಗಾಗಲೇ ನಗರಸಭೆ ಗಮನಕ್ಕೆ ತಂದು ಕೆಲಸ ನಿಲ್ಲಿಸಿದ್ದೇನೆ. ಇಲ್ಲಿ ಯಾವುದೇ ಕಾರಣಕ್ಕೂ ಕಾಮಗಾರಿ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಪ್ರಭಾವಿಗಳ ಒತ್ತಡಕ್ಕೆ ಮಣಿದೋ ಇಲ್ಲ, ಹಣದ ಆಮಿಷಗಳಿಗೆ ಒಳಗಾಗಿಯೋ ಬೆಟ್ಟ ಪ್ರದೇಶದಲ್ಲಿ ಲೇಔಟ ನಿರ್ಮಾಣಕ್ಕೆ ಅಧಿಕಾರಿಗಳು ಅವಕಾಶ ನೀಡಿ ಎಡವಟ್ಟು ಮಾಡಿರುವುದಂತು ಸತ್ಯ