ಕೊಡಗು ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು, ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ. ಜಿಲ್ಲಾಡಳಿತ ಸಾವಿರಾರು ಕುಟುಂಬಗಳಿಗೆ ಸ್ಥಳಾಂತರಗೊಳ್ಳುವಂತೆ ನೊಟೀಸ್ ನೀಡಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜೂ.12) : ಕೊಡಗು ಜಿಲ್ಲೆಯಲ್ಲಿ ಗುರುವಾರದಿಂದ ಮತ್ತೆ ಮಳೆ ಚುರುಕುಗೊಂಡಿದೆ. ಗುರುವಾರ ಇಡೀ ದಿನ ಸಾಧಾರಣ ಮಳೆ ಸುರಿದಿದೆ. ತೀವ್ರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಕೂಡ ಕ್ರಮೇಣ ಹೆಚ್ಚಳವಾಗುತ್ತಿದೆ. ಈ ನಡುವೆ ಮಳೆ ತೀವ್ರಗೊಂಡಂತೆಲ್ಲಾ ಸಾವಿರಾರು ಕುಟುಂಬಗಳ ಸ್ಥಳಾಂತರ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಹೌದು ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳ ಕಾಲ ಮಳೆಯಿಂದ ಎದುರಾದ ಪ್ರವಾಹ ಭೂಕುಸಿತದ ಅನುಭವಗಳಿಂದ ಹೆಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಕಾವೇರಿ ನದಿ ಪಾತ್ರದ ಮತ್ತು ಬೆಟ್ಟದ ತಪ್ಪಿಲಿನಲ್ಲಿ ವಾಸಿಸುತ್ತಿರುವ ಸಾವಿರಾರು ಕುಟುಂಬಗಳಿಗೆ ನೊಟೀಸ್ ನೀಡಿದೆ. ಮಳೆ ತೀವ್ರಗೊಳ್ಳುತ್ತಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದೆ. ನೊಟೀಸ್ ನೀಡಿಯೂ ಸ್ಥಳಾಂತರಗೊಳ್ಳದೆ ಇದ್ದು, ಆಕಸ್ಮಿಕವಾಗಿ ಏನಾದರೂ ಅನಾಹುತಗಳಾದರೆ ಅದಕ್ಕೆ ನೀವುಗಳೇ ಜವಾಬ್ದಾರಿ ಎಂದು ನೊಟೀಸ್ ನೀಡಿದೆ.

ಹಲವು ವರ್ಷಗಳ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಮಳೆ ತೀವ್ರಗೊಂಡರೆ ಸ್ಥಳಾಂತರಗೊಳ್ಳುವಂತೆ ನದಿಪಾತ್ರದ ಜನರಿಗೆ ನೊಟೀಸ್ ನೀಡಿದೆ. ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು, ಸಿದ್ದಾಪುರ, ಗುಹ್ಯ, ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ, ಕುಂಬಾರಗುಂಡಿ, ಪೊನ್ನತ್ ಮೊಟ್ಟೆ, ಕುಶಾಲನಗರ ಪಟ್ಟಣದ ಹಲವು ಬಡಾವಣೆಗಳು ಹಾಗೆಯೇ ಮಡಿಕೇರಿ ತಾಲ್ಲೂಕಿನ ಚೆರಿಯಪರಂಬು, ನಾಪೋಕ್ಲು, ಕಲ್ಲುಮೊಟ್ಟೆ ಸೇರಿದಂತೆ ಹಲವು ಗ್ರಾಮಗಳ ನಿವಾಸಿಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ. ಮಳೆ ತೀವ್ರಗೊಳ್ಳುತ್ತಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೊಟೀಸ್ ನೀಡಿದೆ. ಅದಕ್ಕಾಗಿ 200 ಕ್ಕೂ ಹೆಚ್ಚು ಕಾಳಜಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಹಿಂದಿನ ಅನುಭವದ ಆಧಾರದಲ್ಲಿ 347 ಪ್ರದೇಶಗಳನ್ನು ಅಪಾಯಕಾರಿ ಸ್ಥಳಗಳೆಂದು ಗುರುತ್ತಿಸಿದ್ದು, ಪ್ರವಾಹ ಮತ್ತು ಭೂಕುಸಿತದಿಂದ 347 ಸ್ಥಳಗಳ 12 ಸಾವಿರ ಜನರಿಗೆ ಇದರಿಂದ ಎಫೆಕ್ಟ್ ಆಗುವ ಸಾಧ್ಯತೆ ಇದೆ. ಅಗತ್ಯವಿದ್ದರೆ ಅಷ್ಟು ಜನರ ಸ್ಥಳಾಂತರ ಮಾಡುವ ಸಾಧ್ಯತೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದ್ದಾರೆ. ಈಗಾಗಲೇ ತಹಶೀಲ್ದಾರ್, ಪಿಡಿಓ ಸೇರಿದಂತೆ ಎಲ್ಲಾ ಹಂತದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ಸ್ಥಳಾಂತರ ಆಗುವಂತೆ ಜನರಿಗೆ ನೊಟೀಸ್ ನೀಡಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಮೂರು ದಶಗಳಿಂದ ಇದೇನು ಹೊಸದಲ್ಲ. ಮಳೆಗಾಲದಲ್ಲಿ ನೊಟೀಸ್ ನೀಡುವ ಇವರು ನಂತರ ನಮ್ಮನ್ನು ಮರೆತು ಬಿಡುತ್ತಾರೆ. ಕಾಳಜಿ ಕೇಂದ್ರ ತೆರೆಯುವುದು ಒಂದು ದೊಡ್ಡ ನಾಟಕ ಅಷ್ಟೇ. ಪ್ರತೀ ವರ್ಷ ಜನರು ಸಮಸ್ಯೆ ಅನುಭವಿಸುತ್ತಿದ್ದರೂ ಶಾಶ್ವತ ಪರಿಹಾರ ನೀಡುತ್ತಿಲ್ಲ. ಬೇಕೆಂದೇ ಈ ರೀತಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನೆಲ್ಯಹುದಿಕೇರಿ ಪಂಚಾಯಿತಿ ವ್ಯಾಪ್ತಿಯ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಲ್ಲಿ ನಿವೇಶನ ಗುರುತ್ತಿಸಲಾಗಿದೆ. ಆದರೆ ಇದುವರೆಗೆ ಅದನ್ನು ಅಭಿವೃದ್ಧಿಗೊಳಿಸಿ ಅವರಿಗೆ ನಿವೇಶನ ನೀಡಲು ಜಿಲ್ಲಾಡಳಿತ ಪ್ರಯತ್ನಿಸಿಲ್ಲ. ನೊಟೀಸ್ ನೀಡುವುದು ಕಾಳಜಿ ಕೇಂದ್ರ ತೆರೆಯುವುದು ಇವೆಲ್ಲಾ ನಾಟಕವೆಂದು ಹೋರಾಟಗಾರ ಪಿ.ಆರ್. ಭರತ್ ಆಕ್ರೋಶ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಮಳೆ ಮತ್ತೆ ತೀವ್ರಗೊಳ್ಳುತ್ತಿದ್ದು ಜಿಲ್ಲಾಡಳಿತ ಹೇಳುತ್ತಿರುವುದನ್ನು ನೋಡಿದರೆ ಕೊಡಗಿನ ಆತಂಕ, ಅಪಾಯ ಕಟ್ಟಿಟ್ಟ ಬುತ್ತಿನಾ ಎನ್ನುವಂತೆ ಆಗಿದೆ.
