ಅರಣ್ಯ ಅಭಿವೃದ್ಧಿ ಮಾಡುತ್ತೇವೆ ಎನ್ನುವ ಹೆಸರಿನಲ್ಲಿ ಸಾವಿರಾರು ಜನರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನೇ ಅರಣ್ಯ ಇಲಾಖೆ ನುಂಗುತ್ತಿದೆ. ಇಂತಹ ವಿಚಿತ್ರ ಘಟನೆ ಸಾಕ್ಷಿಯಾಗಿರುವುದು ಕೊಡಗು ಜಿಲ್ಲೆಯಲ್ಲಿ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜೂ.07): ಅರಣ್ಯ ಅಭಿವೃದ್ಧಿ ಮಾಡುತ್ತೇವೆ ಎನ್ನುವ ಹೆಸರಿನಲ್ಲಿ ಸಾವಿರಾರು ಜನರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನೇ ಅರಣ್ಯ ಇಲಾಖೆ ನುಂಗುತ್ತಿದೆ. ಇಂತಹ ವಿಚಿತ್ರ ಘಟನೆ ಸಾಕ್ಷಿಯಾಗಿರುವುದು ಕೊಡಗು ಜಿಲ್ಲೆಯಲ್ಲಿ. ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅರಣ್ಯ ಇಲಾಖೆ ಇದು ಅರಣ್ಯದ ಜಾಗವಾಗಿದ್ದು, ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡದಂತೆ ಪದೇ ಪದೇ ತಡೆಯೊಡ್ಡುತ್ತಿದೆ. ಇದರಿಂದಾಗಿ ಆಸ್ಪತ್ರೆ ಅಭಿವೃದ್ಧಿ ಕಾಣದೆ ಸಾವಿರಾರು ರೋಗಿಗಳು ಸಂಕಷ್ಟ ಅನುಭವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೊಡಗು ಜಿಲ್ಲೆಯಲ್ಲಿ ಪೈಸಾರಿ, ಊರುಡುವೆ ಪೈಸಾರಿ ಎಂದು ಸರ್ಕಾರಿ ಜಾಗಗಳಿದ್ದವು.

10/1 ಸರ್ವೆ ನಂಬರ್ನ ಈ ಊರುಡುವೆ ಪೈಸಾರಿ ಎನ್ನುವ ಜಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಅದಕ್ಕೆ ಸಂಬಂಧಿಸಿದ ನಾಲ್ಕು ಎಕರೆ ಜಾಗವಿದೆ. ತಲತಲಾತರಗಳಿಂದ ಇದೇ ರೀತಿ ಇತ್ತು. ಆದರೆ 2002 ರಲ್ಲಿ ಸರ್ಕಾರ ಊರುಡುವೆ ಪೈಸಾರಿ ಜಾಗಗಳನ್ನು ಅರಣ್ಯವೆಂದು ಘೋಷಿಸಿದ ಹಿನ್ನೆಲೆ ಅಂದಿನಿಂದ ಇದು ಅರಣ್ಯ ಭೂಮಿಯಾಗಿ ಪರಿವರ್ತನೆಯಾಗಿದೆ. ಆ ಬಳಿಕವೂ ಆಸ್ಪತ್ರೆಯಾಗಿದ್ದ ಕಾರಣ ಅರಣ್ಯ ಇಲಾಖೆ ಯಾವುದೇ ತಂಟೆ ತಕರಾರುಗಳನ್ನು ಮಾಡಿರಲಿಲ್ಲ. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಅರಣ್ಯದ ಜಾಗಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವಂತೆ ಇಲಾಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಜಾಗವನ್ನು ಬಿಡಿಸಿಕೊಳ್ಳಲು ಅರಣ್ಯ ಇಲಾಖೆ ಆಸ್ಪತ್ರೆಯ ವೈದ್ಯರಿಗೆ ಪದೇ ಪದೇ ನೊಟೀಸ್ ನೀಡುತ್ತಿದೆ.

ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಹಳೇ ಕಟ್ಟಡ ಹೇಗೆ ಇದೆಯೋ, ಹಾಗೇ ಇದ್ದುಕೊಳ್ಳಲಿ ಎಂದು ಪದೇ ಪದೇ ನೊಟೀಸ್ ನೀಡುತ್ತಿದೆ. ಇದರಿಂದಾಗಿ ಆಸ್ಪತ್ರೆ ಸುತ್ತ ಕಾಂಪೌಂಡ್ ನಿರ್ಮಿಸುವುದಾಗಲಿ, ವೈದ್ಯರ ವಸತಿ ಗೃಹ ನಿರ್ಮಿಸುವುದಾಗಲಿ ಯಾವುದೇ ಕೆಲಸಗಳನ್ನು ಮಾಡುವುದಕ್ಕೆ ಬಿಡುತ್ತಿಲ್ಲ. ಇದು ಇದೇ ಆಸ್ಪತ್ರೆಯನ್ನೇ ನಂಬಿಕೊಂಡಿರುವ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಹಳ್ಳಿಗಳ ಸಾವಿರಾರು ಕುಟುಂಬಗಳಿಗೆ ಸಮಸ್ಯೆಯಾಗಿ ಕಾಡಲಾರಂಭಿಸಿದೆ. ಯಾವುದೇ ಅಭಿವೃದ್ಧಿಯಾಗದಿದ್ದರೆ ರೋಗಿಗಳಿಗೆ ಸಮರ್ಪಕವಾದ ಚಿಕಿತ್ಸೆ ದೊರೆಯುವುದಾದರೂ ಹೇಗೆ ಎನ್ನುತ್ತಿದ್ದಾರೆ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷ ಸಿ.ಎಲ್. ವಿಶ್ವ.

ಕಳೆದ 23 ವರ್ಷಗಳಿಂದಲೂ ಇದು ಅರಣ್ಯ ಭೂಮಿಯೆಂದು ದಾಖಲಾಗಿದ್ದರೂ, ಅದನ್ನು ಹಿಂದಿನ ಶಾಸಕರು ಹೇಗೋ ನಿಭಾಯಿಸುತ್ತಿದ್ದರು. ಆದರೆ ಈಗ ಅದು ಹಾಗೆ ಆಗುತ್ತಿಲ್ಲ. ಆಸ್ಪತ್ರೆಯ ಜಾಗವನ್ನು ಆಸ್ಪತ್ರೆಯ ಹೆಸರಿಗೆ ದಾಖಲೆ ಮಾಡಿಕೊಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಅರಣ್ಯದ ಜಾಗವೆಂದು ಕಂದಾಯ ಇಲಾಖೆ ಅಧಿಕಾರಿಗಳು ಕೈಚೆಲ್ಲುತ್ತಿದ್ದಾರೆ. ಇನ್ನಾದರೂ ಆಸ್ಪತ್ರೆಯನ್ನು ಉಳಿಸಿ ಬಡ ರೋಗಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಸ್ಥಳೀಯರು ಶಾಸಕರು, ಸಚಿವರಿಗೆ ಮನವಿ ಮಾಡಿದ್ದಾರೆ.