PSI Recruitment Scam ತಲೆ ಮರೆಸಿಕೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮುಂಬೈನಲ್ಲಿ ಬಂಧನ
ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಮುಂಬೈನಲ್ಲಿ ಬಂಧಿಸಲಾಗಿದೆ. 8 ಅಭ್ಯರ್ಥಿಗಳಿಗೆ ಮಧ್ಯವರ್ತಿಯಾಗಿದ್ದ, ಹಗರಣ ಬೆಳಕಿಗೆ ಬಂದಾಗಿನಿಂದ ನಾಪತ್ತೆಯಾಗಿದ್ದ ಸಬ್ ಇನ್ಸ್‌ಪೆಕ್ಟರ್ ಷರೀಫ್ ಕಳ್ಳಿಮನಿ ಬಂಧನವಾಗಿದೆ.
ಬೆಂಗಳೂರು (ಜು.31): ದೇಶದಾದ್ಯಂತ ಸುದ್ದಿ ಮಾಡಿದ್ದ ಕರ್ನಾಟಕ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣದಲ್ಲಿ ಮತ್ತೋರ್ವ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಎಂಟು ಅಭ್ಯರ್ಥಿಗಳಿಗೆ ಮಧ್ಯವರ್ತಿಯಾಗಿ ಡೀಲ್ ಕುದುರಿಸಿದ ಆರೋಪದ ಹಿನ್ನೆಲೆಯಲ್ಲಿ ತಿಂಗಳುಗಳ ಕಾಲದಿಂದ ತಲೆಮರೆಸಿಕೊಂಡಿದ್ದ ಸಬ್ ಇನ್ಸ್‌ಪೆಕ್ಟರ್‌ವೊಬ್ಬ ಕೊನೆಗೂ ಮುಂಬೈನಲ್ಲಿ ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಬಲೆಗೆ ಬಿದ್ದಿದ್ದಾನೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಸಬ್ ಇನ್ಸ್‌ಪೆಕ್ಟರ್ ಷರೀಫ್ ಕಳ್ಳಿಮನಿ ಬಂಧಿತನಾಗಿದ್ದು, ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮದಲ್ಲಿ ನೇಮಕಾತಿ ವಿಭಾಗದ ಅಧಿಕಾರಿಗಳು ಮತ್ತು ಎಂಟು ಅಭ್ಯರ್ಥಿಗಳ ನಡುವಿನ ಡೀಲ್‌ನಲ್ಲಿ ಷರೀಫ್ ಮಧ್ಯವರ್ತಿಯಾಗಿದ್ದ. ಈ ಕೃತ್ಯ ಬೆಳಕಿಗೆ ಬಂದ ನಂತರ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ತನಿಖಾ ತಂಡ ಶನಿವಾರ ಬಂಧಿಸಿ ನಗರಕ್ಕೆ ಕರೆತಂದಿತು. ಸಂಜೆ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ 10 ದಿನಗಳ ಕಾಲ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊಬೈಲ್ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಷರೀಫ್‌ನನ್ನು ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಹರ್ಷನ ಜತೆ ಡೀಲ್: 2019ರ ಸಾಲಿನ ಪಿಎಸ್‌ಐ ಆಗಿರುವ ಗದಗ ಜಿಲ್ಲೆಯ ಷರೀಫ್, ಪಶ್ಚಿಮ ವಿಭಾಗದ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರೊಬೇಷನರಿ ಮುಗಿಸಿ ಕರ್ತವ್ಯ ನಿಯೋಜನೆಗೊಂಡಿದ್ದ. ಮೊದಲಿನಿಂದಲೂ ಈ ಹಗರಣದಲ್ಲಿ ಬಂಧಿತನಾಗಿರುವ ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಪ್ರಥಮ ದರ್ಜೆ ಸಹಾಯಕ ಹರ್ಷ ಜತೆ ಷರೀಫ್‌ಗೆ ಸ್ನೇಹವಿತ್ತು. ಈ ಗೆಳೆತನದ ಹಿನ್ನೆಲೆಯಲ್ಲಿ 2021ರ ಪಿಎಸ್‌ಐ ನೇಮಕಾತಿಯಲ್ಲಿ ಹಣ ಪಡೆದು ಅಭ್ಯರ್ಥಿಗಳಿಗೆ ಹುದ್ದೆ ಕೊಡಿಸಲು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾನೆ ಎಂದು ಸಿಐಡಿ ಮೂಲಗಳು ಹೇಳಿವೆ.
ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆದಿದ್ದ ಎಂಟು ಅಭ್ಯರ್ಥಿಗಳನ್ನು ಸಂಪರ್ಕಿಸಿದ ಷರೀಫ್, ನೀವು ಹಣ ನೀಡಿದರೆ ಪಿಎಸ್‌ಐ ಹುದ್ದೆ ಖಾತ್ರಿ ಪಡಿಸುತ್ತೇನೆ ಎಂದಿದ್ದ. ಬಳಿಕ ಹರ್ಷನ ಪರವಾಗಿ ತಲಾ ಅಭ್ಯರ್ಥಿಯಿಂದ 20ರಿಂದ 40 ಲಕ್ಷ ರುವರೆಗೆ ಹಣ ವಸೂಲಿ ಮಾಡಿದ ಷರೀಫ್, ಬಳಿಕ ಆ ಹಣವನ್ನು ಹರ್ಷನಿಗೆ ತಲುಪಿಸಿದ್ದ. ಹೀಗೆ ಷರೀಫ್ ಮೂಲಕ ಡೀಲ್ ಕುದುರಿಸಿದ್ದ ಎಂಟು ಅಭ್ಯರ್ಥಿಗಳ ಒಎಂಆರ್‌ಶೀಟ್‌ಗಳನ್ನು ತಿದ್ದುಪಡಿಯಾಗಿ ಆಯ್ಕೆಯಾಗಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿತು. ಈ ಮಾಹಿತಿ ಮೇರೆಗೆ ಅಭ್ಯರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಷರೀಫ್ ಹಾಗೂ ಹರ್ಷನ ಡೀಲ್ ಬಹಿರಂಗವಾಯಿತು. ತನ್ನ ಮೂಲಕ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದ ಅಭ್ಯರ್ಥಿಗಳ ಬಂಧನ ಬೆನ್ನಲ್ಲೇ ಭೀತಿಗೊಂಡು ನಗರ ತೊರೆದು ಮುಂಬೈಗೆ ಆತ ಪರಾರಿಯಾಗಿದ್ದ.
ಪಿಎಸ್‌ಐ ಅಕ್ರಮ: ಕಲಬುರಗಿ ಕಮಿಷನರ್‌ಗೆ ಸಿಐಡಿ ತನಿಖೆ ಬಿಸಿ
ಪಿಎಸ್‌ಐ ನೇಮಕ ಹಗರಣ: 2ನೇ ಆರೋಪಪಟ್ಟಿಸಲ್ಲಿಕೆ
ರಾಜ್ಯಾದ್ಯಂತ ಸದ್ದು ಮಾಡಿದ್ದ ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು 1,609 ಪುಟಗಳ ಎರಡನೇ ಆರೋಪ ಪಟ್ಟಿಯನ್ನು ಶುಕ್ರವಾರ ಕಲಬುರಗಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ಜು.5ರಂದು 1,974 ಪುಟಗಳ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದೀಗ ಮತ್ತೊಂದು ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ. ಎಂಎಸ್‌ಐ ಡಿಗ್ರಿ ಮಹಾವಿದ್ಯಾಲಯದಲ್ಲಿನ ಪರೀಕ್ಷೆ ಕೇಂದ್ರದಲ್ಲಿ ಬ್ಲೂಟೂತ್ ಬಳಕೆ ಹಾಗೂ ಇತರೆ ಅಕ್ರಮಕ್ಕೆ ಸಂಬಂಧಿಸಿ ಹಗರಣದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಸೇರಿ 8 ಆರೋಪಿಗಳನ್ನು ಈ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಪಿಎಸ್‌ಐ ಹಗರಣದ ಹಣ ಮ್ಯೂಚುವಲ್ ಫಂಡ್‌ಗೆ: ತನ್ನ ಖಾತೆ ಬದಲು ಬೇರೆಡೆ ಹಾಕಿಸ್ತಿದ್ದ ಕಿಂಗ್‌ಪಿನ್..!
ಸಿಐಡಿ ಡಿವೈಎಸ್ಪಿ ವಿರೇಂದ್ರ ಕುಮಾರ್ ಅವರು ತನಿಖಾಧಿಕಾರಿಯಾಗಿ ಆರೋಪಪಟ್ಟಿಸಲ್ಲಿಸಿದ್ದಾರೆ. ಆರ್.ಡಿ. ಪಾಟೀಲ್ ಅಲ್ಲದೆ, ಪರೀಕ್ಷಾರ್ಥಿ ಪ್ರಭು, ತಂದೆ ಶರಣಪ್ಪ, ಚಾರ್ಟೆಡ್ ಅಕೌಂಟೆಂಟ್ ಚಂದ್ರಕಾಂತ ಕುಲಕರ್ಣಿ, ಕಾಶಿನಾಥ್, ಪ್ರಕಾಶ್ ಊಡಗಿ ಮತ್ತಿತರರ ಹೆಸರುಗಳೂ ಆರೋಪಪಟ್ಟಿಯಲ್ಲಿದೆ. ಮೊದಲ ಆರೋಪ ಪಟ್ಟಿಯಲ್ಲಿ ಗೋಕುಲ… ಬಡಾವಣೆಯಲ್ಲಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಜ್ಞಾನಜೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿ ಸಿಐಡಿ ತಂಡ 34 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.