ಪಿಎಸ್‌ಐ ಪರೀಕ್ಷೆಯನ್ನು ಕ್ರಮಾಗತವಾಗಿ, ಪದ್ಧತಿ ಪ್ರಕಾರ ಅಚ್ಚುಕಟ್ಟಾಗಿ ನಡೆಸಿರುವುದಾಗಿ ಸ್ಪಷ್ಟಪಡಿಸಿದ ಕಲಬುರಗಿ ಪೊಲೀಸ್‌ ಆಯುಕ್ತ ಡಾ.ವೈ.ಎಸ್‌.ರವೀಂದ್ರನಾಥ್‌ 

ಶೇಷಮೂರ್ತಿ ಅವಧಾನಿ

ಕಲಬುರಗಿ(ಜು.27): 545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ನೇಮಕಾತಿ ವಿಭಾಗದ ಮುಖ್ಯಸ್ಥ ಅಮೃತ್‌ ಪೌಲ್‌ರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ ಬೆನ್ನಲ್ಲೇ ಇದೀಗ ಕಲಬುರಗಿ ಪರೀಕ್ಷಾ ಕೇಂದ್ರಗಳ ಉಸ್ತುವಾರಿಯಾಗಿದ್ದ, ಸದ್ಯ ಕಲಬುರಗಿ ನಗರ ಪೊಲೀಸ್‌ ಆಯುಕ್ತರಾಗಿರುವ ಡಾ.ವೈ.ಎಸ್‌.ರವಿಕುಮಾರ್‌ ಅವರಿಗೆ ಹಗರಣಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಕೇಳಿ 2 ಪತ್ರಗಳನ್ನು ಬರೆದಿರುವ ಸಂಗತಿ ಬೆಳಕಿಗೆ ಬಂದಿದೆ.

ಜ್ಞಾನಜ್ಯೋತಿ ಹೈಸ್ಕೂಲ್‌ ಪರೀಕ್ಷಾ ಕೇಂದ್ರದ ಕಸ್ಟೋಡಿಯನ್‌, ಡಿವೈಎಸ್ಪಿ ಹುಲ್ಲೂರ್‌ರನ್ನು ದಿಢೀರ್‌ ಪರೀಕ್ಷೆ ಕೆಲಸದಿಂದ ಬಿಡುಗಡೆ ಮಾಡಿದ್ದೇಕೆ? ಪರೀಕ್ಷಾ ಕೇಂದ್ರದ ಬಾಗಿಲಲ್ಲೇ ಲೋಹ ಶೋಧಕ ಇದ್ದರೂ ಅಭ್ಯರ್ಥಿಗಳು ಬ್ಲೂಟೂತ್‌ ಉಪಕರಣವನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ದಿದ್ದು ಹೇಗೆ? ಈ ಉಪಕರಣವನ್ನು ಲೋಹ ಶೋಧಕ ಪತ್ತೆ ಹಚ್ಚಲಿಲ್ಲವೆ? ಭದ್ರತೆ ಉಸ್ತುವಾರಿ ಸಿಬ್ಬಂದಿ ಕಿವಿಗೆ ಮೆಟಲ್‌ ಡಿಟೆಕ್ಟರ್‌ನ ಬಿಪ್‌ ಸದ್ದು ಕೇಳಲೇ ಇಲ್ಲವೆ ಎಂಬಿತ್ಯಾದಿ ಪ್ರಶ್ನೆಗಳಿರುವ ಪತ್ರ ಬರೆದು ಅದಾಗಲೇ 3 ವಾರ ಕಳೆದರೂ ಯಾವ ಪ್ರಶ್ನೆಗಳಿಗೂ ಪೊಲೀಸ್‌ ಕಮೀಷನರ್‌ ಈವರೆಗೂ ಉತ್ತರಿಸಿಲ್ಲ. ತನಿಖೆ ಮುಂದುವರಿಸಲು ಪೊಲೀಸ್‌ ಆಯುಕ್ತರು ನೀಡುವ ಉತ್ತರ ತುಂಬಾ ಮುಖ್ಯವಾಗಲಿವೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

PSI Recruitment Scam: ಮಾಜಿ ಸೈನಿಕನ ಬಂಧಿಸಿದ ಸಿಐಡಿ ಅಧಿಕಾರಿಗಳು!

ಒಂದೊಂದಾಗಿಯೇ ಉತ್ತರ ಕೊಡುತ್ತಿದ್ದೇನೆ: ರವೀಂದ್ರ

ಸಿಡಿಐ ಬರೆದಿರುವ ಪತ್ರದ ಕುರಿತಾಗಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿರುವ ಕಲಬುರಗಿ ಪೊಲೀಸ್‌ ಆಯುಕ್ತ ಡಾ.ವೈ.ಎಸ್‌.ರವೀಂದ್ರನಾಥ್‌, ಪಿಎಸ್‌ಐ ಪರೀಕ್ಷೆಯನ್ನು ಕ್ರಮಾಗತವಾಗಿ, ಪದ್ಧತಿ ಪ್ರಕಾರ ಅಚ್ಚುಕಟ್ಟಾಗಿ ನಡೆಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಡಿವೈಎಸ್ಪಿ ಹುಲ್ಲೂರ್‌ ನಿವೃತ್ತಿ ಅಂಚಲ್ಲಿ (ಡ್ಯೂ ಫಾರ್‌ ರಿಟೈರ್ಮೆಂಟ್‌) ಇದ್ದರು. ಅವತ್ತೇ ಬೇರೊಬ್ಬರಿಗೆ ಲಿಂಗಸುಗೂರು ಸಬ್‌ಡಿವಿಜನ್‌ಗೆ ಪೋಸ್ಟಿಂಗ್‌ ಆಗಿತ್ತು. ಇಲ್ಲಿ ನಮ್ಮಲ್ಲಿ ಹೊಸ್ಮನಿ ಎಂಬ ಡಿವೈಎಸ್ಬಿ ಲಭ್ಯ ಇದ್ದರು. ಹಾಗಾಗಿ ಡಿವೈಎಸ್ಪಿ ಹುಲ್ಲೂರ್‌ ಅಲ್ಲಿಗೆ ಹೋಗಿ ಚಾಜ್‌ರ್‍(ಪ್ರಭಾರ) ಕೊಡಲಿ ಎಂದು ನಾನೇ ಆದೇಶ ಮಾಡಿ ರೈಟಿಂಗ್‌ನಲ್ಲಿ ಕೊಟ್ಟಿದ್ದೆ ಎಂದು ಹೇಳಿದ್ದಾರೆ. ಇನ್ನು ಸಿಐಡಿಯವರು ಕೇಳಿದ್ದಕ್ಕೆಲ್ಲ ಒಂದೊಂದಾಗಿಯೇ ಉತ್ತರ ಕೊಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಕಿವಿಯಲ್ಲಿ ರಿಸೀವಿಂಗ್‌ ಡಿವೈಸ್‌!

ಕಲಬುರಗಿಯ ನ್ಯೂ ನೋಬಲ್‌ ಶಾಲೆ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್‌ ಬಳಸಿ ಪರೀಕ್ಷೆ ಬರೆದು ಪಾಸಾಗಿರುವ ನಿವೃತ್ತ ಸೈನಿಕ ವಿಶ್ವನಾಥ ಮಾನೆ ತನ್ನ ಅಂಗಿ ಕಾಲರ್‌ನಲ್ಲಿ ಬ್ಲೂಟೂತ್‌ ಉಪಕರಣದ ಸ್ವಿಚ್‌ ಹೊಂದಿದ್ದ. ಕರೆ ಸ್ವೀಕರಿಸಲು ನಿಸ್ತಂತು ಬ್ಲೂಟೂತ್‌ ಕಾಲ್‌ ರಿಸೀವರ್‌ ಉಪಕರಣವನ್ನು ಕಿವಿಯಲ್ಲಿ ಇಟ್ಟುಕೊಂಡಿದ್ದನೆಂಬ ಅಂಶ ಸಿಐಡಿ ವಿಚಾರಣೆಯಲ್ಲಿ ಸಾಬೀತಾಗಿದೆ. ಅಭ್ಯರ್ಥಿಗಳ ಕಿವಿಗಳು ಸೇರಿದಂತೆ ಬನಿಯನ್‌ ಇತ್ಯಾದಿ ತಪಾಸಣೆ ಮಾಡಬೇಕೆಂಬ ಆದೇಶವಿದ್ದರೂ ಪರೀಕ್ಷಾ ಕೇಂದ್ರಗಳಲ್ಲಿ ಹಲವು ಬಾರಿ ಇವುಗಳೆಲ್ಲವೂ ಸಡಿಲಗೊಂಡಿದ್ದವೆಂಬ ಸಂಗತಿ ಸಿಐಡಿ ವಿಚಾರಣೆಯಲ್ಲಿ ಬಯಲಾಗಿದೆ.