ಪಿಎಸ್‌ಐ ಹಗರಣದ ಹಣ ಮ್ಯೂಚುವಲ್‌ ಫಂಡ್‌ಗೆ: ತನ್ನ ಖಾತೆ ಬದಲು ಬೇರೆಡೆ ಹಾಕಿಸ್ತಿದ್ದ ಕಿಂಗ್‌ಪಿನ್‌..!

ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳು ನೀಡಿದ ಹಣ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ನಂತರ ಅಗತ್ಯಬಿದ್ದಾಗ ಹಂತಹಂತವಾಗಿ ವಾಪಸ್‌ ಪಡೆಯುವ ಯೋಜನೆ ಹಾಕಿದ್ದ ಕಿಂಗ್‌ಪಿನ್‌ 

PSI Recruitment Scam Money to Mutual Fund in Karnataka grg

ಆನಂದ್‌.ಎಂ.ಸೌದಿ

ಯಾದಗಿರಿ(ಜು.24):  ಪಿಎಸ್‌ಐ ನೇಮಕಾತಿ ಅಕ್ರಮದಿಂದ ಬಂದ ಕೋಟ್ಯಂತರ ರುಪಾಯಿ ಕಪ್ಪುಹಣವನ್ನು ಮಧ್ಯವರ್ತಿಗಳ ಮೂಲಕ ಖಾತೆ ಮೂಲಕ ಕಿಂಗ್‌ಪಿನ್‌ವೊಬ್ಬರು ತಮ್ಮ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ವಿಚಾರ ಸಿಐಡಿ ವಿಚಾರಣೆ ವೇಳೆ ಬಯಲಾಗಿದೆ ಎನ್ನಲಾಗುತ್ತಿದೆ. ಈ ಮೂಲಕ ಅಕ್ರಮದ ಹಣ ನೇರವಾಗಿ ತನ್ನ ಖಾತೆ ಬದಲು ಸುತ್ತಿಬಳಸಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಯಾಗುವಂತೆ ನೋಡಿಕೊಳ್ಳಲಾಗುತ್ತಿತ್ತು. ಈ ವ್ಯವಹಾರದಲ್ಲಿ ಬ್ಯಾಂಕ್‌ ಅಧಿಕಾರಿಯೊಬ್ಬರೂ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.

‘ಕನ್ನಡಪ್ರಭ’ಕ್ಕೆ ಲಭ್ಯ ನಂಬಲರ್ಹ ಮೂಲಗಳ ಪ್ರಕಾರ, ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳು ನೀಡಿದ ಹಣವನ್ನು ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ನಂತರ ಅಗತ್ಯಬಿದ್ದಾಗ ಹಂತಹಂತವಾಗಿ ವಾಪಸ್‌ ಪಡೆಯುವ ಯೋಜನೆಯನ್ನು ಕಿಂಗ್‌ಪಿನ್‌ವೊಬ್ಬರು ಹಾಕಿದ್ದರು. ಇದಕ್ಕೆಂದೇ, ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಮಧ್ಯವರ್ತಿಗಳ (ಕಿಂಗ್‌ಪಿನ್‌ ಬೆಂಬಲಿಗರು) ಹೆಸರಲ್ಲಿ 28 ಹೊಸ ಖಾತೆಗಳನ್ನು ತೆರೆಯಲಾಗಿತ್ತು. ಪಿಎಸ್‌ಐ ನೇಮಕಾತಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡ (ಜ.19) ಎರಡ್ಮೂರು ದಿನಗಳ ಮೊದಲೇ ಈ ಖಾತೆಗಳು ಸಕ್ರಿಯಗೊಂಡಿದ್ದವು. ಈ ಖಾತೆಗೆ ಹಾಕುವ ಹಣವನ್ನು ವಿವಿಧ ಹಂತಗಳಲ್ಲಿ ಜಮೆ ಮಾಡಲಾಗುತ್ತಿತ್ತು. ಹಣ ಖಾತೆಗೆ ಬೀಳುತ್ತಿದ್ದಂತೆ ಅವುಗಳನ್ನು ಕಿಂಗ್‌ಪಿನ್‌ವೊಬ್ಬರ ಮ್ಯೂಚುವಲ್‌ ಫಂಡ್‌ಗೆ ವರ್ಗಾವಣೆ ಮಾಡಲಾಗುತ್ತಿತ್ತು.

ಪಿಎಸ್‌ಐ ನೇಮಕಾತಿ ಹಗರಣ: ಅಮೃತ್‌ ಪೌಲ್‌ ವಿಚಾರಣೆಯ ಇನ್‌ಸೈಡ್‌ ಡೀಟೆಲ್ಸ್

ಚೆಕ್‌ಗೆ ಸಹಿ ಹಾಕಿಸಿದ್ರು: 

ಮಧ್ಯವರ್ತಿಗಳು ಅಭ್ಯರ್ಥಿಗಳಿಂದ ಪಡೆದ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಆತಂಕದ ಹಿನ್ನೆಲೆಯಲ್ಲಿ ಅವರಿಂದ 10 ಚೆಕ್‌ಗಳಿಗೆ ಸಹಿ ಕೂಡ ಹಾಕಿಸಿಕೊಳ್ಳಲಾಗಿತ್ತು. ಈ ಮೂಲಕ ಅಕ್ರಮದ ಹಣದಲ್ಲಿ ಎಲ್ಲೂ ವಂಚನೆ ಆಗದಂತೆ ಕಿಂಗ್‌ಪಿನ್‌ ನೋಡಿಕೊಂಡಿದ್ದ ಎಂದು ತಿಳಿದುಬಂದಿದೆ.

ಖಾತೆ ಮುಟ್ಟುಗೋಲು:

ಅಕ್ರಮದ ವಿಚಾರಣೆ ವೇಳೆ ಆರೋಪಿಯೊಬ್ಬರು ನೀಡಿದ ಮಾಹಿತಿಯಂತೆ ಅಧಿಕಾರಿಗಳು ತನಿಖೆ ಆರಂಭಿಸಿದಾಗ ಸಿಐಡಿ ಅಧಿಕಾರಿಗಳಿಗೆ ಈ ಮ್ಯೂಚುವಲ್‌ ಫಂಡ್‌ ವ್ಯವಹಾರ ಬೆಳಕಿಗೆ ಬಂದಿದೆ. ಆ ನಂತರ ಕಲಬುರಗಿ ಸಿಐಡಿ ತಂಡ, ಆ ಎಲ್ಲ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಬ್ಯಾಂಕಿನ ಅಧಿಕಾರಿಯೊಬ್ಬರೂ ಈ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಅನುಮಾನಗಳು ಸಿಐಡಿ ತಂಡಕ್ಕೆ ಇದೆ. ಜ.19 ರಂದು 545 ಪಿಎಸ್‌ಐ (ಸಿವಿಲ್‌) ಲಿಖಿತ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿತ್ತು. ಇದಕ್ಕೆ ಎರಡ್ಮೂರು ದಿನಗಳ ಮೊದಲೇ ಈ ಖಾತೆಗಳು ಆರಂಭಗೊಂಡು, ಕೋಟ್ಯಂತರ ರುಪಾಯಿಗಳ ವಹಿವಾಟು ನಡೆದಿತ್ತು ಎನ್ನಲಾಗುತ್ತಿದೆ. ಈ ವ್ಯವಹಾರಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸಿಐಡಿ ಅಧಿಕಾರಿಗಳು ಈಗಾಗಲೇ ಬ್ಯಾಂಕ್‌ ಅಧಿಕಾರಿಗಳ ನೆರವು ಪಡೆಯುತ್ತಿದ್ದಾರೆ ಎನ್ನಲಾಗಿದೆ.

ವರ್ಗಾವಣೆ ಹೇಗೆ?

- ಫಲಿತಾಂಶ ಪ್ರಕಟವಾಗುವ 2 ದಿನ ಮುನ್ನ ಖಾತೆ ಆರಂಭ
- ಅಭ್ಯರ್ಥಿಗಳು ನೀಡಿದ ಹಣ ಈ ಬ್ಯಾಂಕ್‌ ಖಾತೆಗಳಿಗೆ ಜಮೆ
- ಈ ಹಣ ಕಿಂಗ್‌ಪಿನ್‌ ಮ್ಯೂಚುವಲ್‌ ಫಂಡ್‌ಗೆ ವರ್ಗಾವಣೆ
- ಇದರಲ್ಲಿ ಬ್ಯಾಂಕ್‌ ಅಧಿಕಾರಿ ಕೂಡ ಭಾಗಿಯಾಗಿರುವ ಶಂಕೆ
 

Latest Videos
Follow Us:
Download App:
  • android
  • ios