ಪ್ರೊ.ಸಿ.ಶಿವರಾಜು ಅವರು ಬೆಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿದ್ದ ಅವರು, ವಿಶ್ವವಿದ್ಯಾಲಯದ ಶೈಕ್ಷಣಿಕ ಅಭಿವೃದ್ಧಿ, ವಿದ್ಯಾರ್ಥಿ ಸ್ನೇಹಿ ವಾತಾವರಣ ಮತ್ತು ನೌಕರರ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.
ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ.ಸಿ.ಶಿವರಾಜು ಅಧಿಕಾರ ವಹಿಸಿಕೊಂಡರು.ಜ್ಞಾನಭಾರತಿ ಆವರಣದ ಬೆಂಗಳೂರು ವಿಶ್ವವಿದ್ಯಾಲಯ ಆಡಳಿತ ಕಚೇರಿಯಲ್ಲಿ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವರು (ಮೌಲ್ಯಮಾಪನ) ಆಗಿ ಕೂಡ ಸೇವೆ ಸಲ್ಲಿಸಿದ್ದ ಪ್ರೊ.ಸಿ.ಶಿವರಾಜು ಅವರು ಬೆಂಗಳೂರು ವಿಶ್ವವಿದ್ಯಾಲಯ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರನ್ನು ನೂತನ ಕುಲಪತಿಯಾಗಿ ರಾಜ್ಯಪಾಲರು ಥಾವರ್‌ಚಂದ್ ಗೆಹ್ಲೋಟ್ ನೇಮಕ ಮಾಡಿ ಆದೇಶ ಹೊರಡಿಸಿದರು.
ಸಂಸ್ಕೃತ ಸಾಹಿತ್ಯ ಮತ್ತು ಅರ್ಥಶಾಸ್ತ್ರ ವಿಷಯದಲ್ಲಿ ಪರಿಣತಿ
ಪ್ರೊ.ಸಿ.ಶಿವರಾಜ್ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿ "ಬೆಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯದ ಅಭಿವೃದ್ಧಿ, ವಿದ್ಯಾರ್ಥಿ ಸ್ನೇಹಿ ವಾತಾವರಣ, ನೌಕರರ ಪ್ರಗತಿಗೆ ಭವಿಷ್ಯದಲ್ಲಿ ಮತ್ತಷ್ಟು ಶ್ರಮಿಸುತ್ತೇನೆ" ಎಂದು ತಿಳಿಸಿದರು.
1994 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ಆರಂಭಿಸಿದರು. ಸಂಸ್ಕೃತ ಸಾಹಿತ್ಯ ಮತ್ತು ಅರ್ಥಶಾಸ್ತ್ರ ವಿಷಯದಲ್ಲಿ ಪರಿಣತಿ ಹೊಂದಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕೋಶದ ವಿಶೇಷಾಧಿಕಾರಿಯಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.


