ಬೆಂಗಳೂರಿನ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿನ ನಿರಂತರ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) 6 ಪಥದ ಬೃಹತ್ ಸುರಂಗ ರಸ್ತೆ ನಿರ್ಮಾಣಕ್ಕೆ ಅಧಿಕೃತ ಚಾಲನೆ ನೀಡಿದೆ. ಈ 4.4 ಕಿ.ಮೀ ಉದ್ದದ ಸುರಂಗ ಮಾರ್ಗವು ಡಾ.ರಾಜ್‌ಕುಮಾರ್ ಸಮಾಧಿ ಬಳಿಯಿಂದ ಬಿಇಎಲ್ ಜಂಕ್ಷನ್‌ವರೆಗೆ ನಿರ್ಮಾಣವಾಗಲಿದ್ದು, ತುಮಕೂರು ರಸ್ತೆ ಮೂಲಕ ಸಂಚರಿಸುವ ವಾಹನ ಸವಾರರಿಗೆ ವರದಾನವಾಗಲಿದೆ.
ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರ ಪಾಲಿಗೆ ನರಕದಂತಿರುವ ಗೊರಗುಂಟೆಪಾಳ್ಯ ಸಿಗ್ನಲ್‌ನಲ್ಲಿ ಇನ್ಮುಂದೆ ಟ್ರಾಫಿಕ್ ಕಿರಿಕಿರಿ ಇರುವುದಿಲ್ಲ! ಹೌದು, ಕಳೆದ ಹಲವು ವರ್ಷಗಳಿಂದ ವಾಹನ ಸವಾರರ ಕನಸಿನ ಯೋಜನೆಯಾಗಿದ್ದ ಗೊರಗುಂಟೆಪಾಳ್ಯ ಸುರಂಗ ಮಾರ್ಗ ನಿರ್ಮಾಣಕ್ಕೆ ಈಗ ಅಧಿಕೃತ ಚಾಲನೆ ಸಿಕ್ಕಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಈ ಭಾಗದಲ್ಲಿ 6 ಪಥದ ಬೃಹತ್ ಸುರಂಗ ರಸ್ತೆ ನಿರ್ಮಿಸಲು ಸಜ್ಜಾಗಿದೆ.
ಯಾರಿಗೆಲ್ಲಾ ಈ ಯೋಜನೆಯಿಂದ ಲಾಭ?
ಬೆಂಗಳೂರಿನಿಂದ ತುಮಕೂರು ರಸ್ತೆ ಮೂಲಕ ಪ್ರಯಾಣಿಸುವ ಲಕ್ಷಾಂತರ ಜನರಿಗೆ ಇದು ಹ್ಯಾಪಿ ನ್ಯೂಸ್. ವಿಶೇಷವಾಗಿ.. ಮಂಗಳೂರು, ಹಾಸನ ತುಮಕೂರು, ಚಿತ್ರದುರ್ಗ ದಾವಣಗೆರೆ, ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಸಂಚರಿಸುವ ವಾಹನ ಸವಾರರಿಗೆ ಈ ಸುರಂಗ ಮಾರ್ಗ ವರದಾನವಾಗಲಿದೆ.
ಎಲ್ಲಿಂದ ಎಲ್ಲಿಯವರೆಗೆ ಸುರಂಗ ರಸ್ತೆ?
ಬಿಡಿಎ ಸಿದ್ಧಪಡಿಸಿರುವ ನೀಲಿನಕ್ಷೆಯ ಪ್ರಕಾರ, ಈ ಸುರಂಗ ಮಾರ್ಗವು ಒಟ್ಟು 4.4 ಕಿಲೋಮೀಟರ್ ಉದ್ದವಿರಲಿದೆ. ಡಾ.ರಾಜ್‌ಕುಮಾರ್ ಸಮಾಧಿ (ಪಶ್ಚಿಮ ಕಾರ್ಡ್ ರಸ್ತೆ ಬಳಿ) ಬಳಿಯಿಂದ ಪ್ರಾರಂಭವಾಗಿ ಬಿಇಎಲ್ (BEL) ಜಂಕ್ಷನ್‌ನಲ್ಲಿ ಅಂತ್ಯಕಾಣದಲಿದೆ. ಈ ಸುರಂಗ ಮಾರ್ಗವು ಸಂಪೂರ್ಣವಾಗಿ 6 ಪಥ (6 Lane) ರಸ್ತೆಯಾಗಿರಲಿದ್ದು, ಅತ್ಯಾಧುನಿಕ ಟಿಬಿಎಂ (Tunnel Boring Machine) ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗುತ್ತದೆ.
ಭೂಗತ ಲೂಪ್ ವ್ಯವಸ್ಥೆಯ ವಿಶೇಷತೆ
ಕೇವಲ ನೇರ ರಸ್ತೆಯಷ್ಟೇ ಅಲ್ಲದೆ, ವಾಹನಗಳು ಯಾವುದೇ ಸಿಗ್ನಲ್ ಇಲ್ಲದೆ ವಿವಿಧ ದಿಕ್ಕುಗಳಿಗೆ ತಿರುಗಲು ಅನುಕೂಲವಾಗುವಂತೆ 'ಲೂಪ್' ವ್ಯವಸ್ಥೆಯನ್ನು ಮಾಡಲಾಗುತ್ತದೆ.
- ತುಮಕೂರು ರಸ್ತೆಯಿಂದ ಬಿಇಎಲ್ ಜಂಕ್ಷನ್‌ಗೆ: ನೇರವಾಗಿ ಭೂ ಮಾರ್ಗದ ಮೂಲಕ ಸಂಪರ್ಕ.
- ಡಾ. ರಾಜ್‌ಕುಮಾರ್ ಸಮಾಧಿಯಿಂದ ತುಮಕೂರು ರಸ್ತೆಗೆ: ಸರಾಗವಾಗಿ ವಾಹನಗಳು ಚಲಿಸಲು ಲೂಪ್ ರೋಡ್ ವ್ಯವಸ್ಥೆ ಮಾಡಲಾಗುತ್ತದೆ.
ಬಿಡಿಎಯಿಂದ ಟೆಂಡರ್ ಆಹ್ವಾನ
ಈಗಾಗಲೇ ಬಿಡಿಎ ಈ ಮಹತ್ವಾಕಾಂಕ್ಷಿ ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಿದೆ. ಡಿಪಿಆರ್ ಸಿದ್ಧವಾದ ಕೂಡಲೇ ಅದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ, ಅನುಮೋದನೆ ಪಡೆದು ಕಾಮಗಾರಿ ಆರಂಭಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ.
ಟ್ರಾಫಿಕ್ ಮುಕ್ತ ಪ್ರಯಾಣದ ಕನಸು
ಗೊರಗುಂಟೆಪಾಳ್ಯ ಸಿಗ್ನಲ್ ಎಂದರೆ ವಾಹನ ಸವಾರರು ಕನಿಷ್ಠ 20 ರಿಂದ 30 ನಿಮಿಷಗಳ ಕಾಲ ಕಾಯಲೇಬೇಕಾದ ಪರಿಸ್ಥಿತಿ ಇತ್ತು. ಪೀಣ್ಯ ಫ್ಲೈಓವರ್ ಏರಲು ಅಥವಾ ಹೊರ ವರ್ತುಲ ರಸ್ತೆಗೆ (ORR) ಸೇರಲು ಹರಸಾಹಸ ಪಡಬೇಕಿತ್ತು. ಈ ಸುರಂಗ ಮಾರ್ಗ ಪೂರ್ಣಗೊಂಡರೆ, ಸಿಗ್ನಲ್ ಇಲ್ಲದೆ ಸೆಕೆಂಡುಗಳಲ್ಲಿ ಈ ಜಂಕ್ಷನ್ ದಾಟಬಹುದಾಗಿದೆ. ಒಟ್ಟಿನಲ್ಲಿ ಬೆಂಗಳೂರಿನ ಉತ್ತರ ಭಾಗದ ಸಾರಿಗೆ ವ್ಯವಸ್ಥೆಯಲ್ಲಿ ಈ ಸುರಂಗ ರಸ್ತೆ ಒಂದು ದೊಡ್ಡ ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ.


