ನಟ ದರ್ಶನ್‌ ಕುರಿತಾದ ಸಾಮಾಜಿಕ ಜಾಲತಾಣದ ವಿವಾದಕ್ಕೆ ಹೊಸ ತಿರುವು. ರಮ್ಯಾ ಅವರ ಪೋಸ್ಟ್‌ಗೆ ಕೆ. ಮಂಜು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದಲ್ಲಿರುವ ಪ್ರಕರಣದ ಬಗ್ಗೆ ಮಾತನಾಡಬಾರದಿತ್ತು ಎಂದಿದ್ದಾರೆ.

ಬೆಂಗಳೂರು, (ಜುಲೈ.31): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ ಕುರಿತಾದ ಸಾಮಾಜಿಕ ಜಾಲತಾಣದ ವಿವಾದಕ್ಕೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ಬಗ್ಗೆ ನಿರ್ಮಾಪಕ ಕೆ. ಮಂಜು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಟಿ ರಮ್ಯಾ ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ದರ್ಶನ್‌ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವಾಗ ರಮ್ಯಾ ಆ ರೀತಿಯ ಪೋಸ್ಟ್‌ ಮಾಡಿದ್ದು ತಪ್ಪು’ ಎಂದು ಕೆ. ಮಂಜು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ರಮ್ಯಾ ಪೋಸ್ಟ್ ಮಾಡುವ ಮುನ್ನ ಯೋಚಿಸಬೇಕಿತ್ತು:

‘ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ದರ್ಶನ್‌ ಕುರಿತು ರಮ್ಯಾ ಪೋಸ್ಟ್‌ ಮಾಡುವ ಮುನ್ನ ಸ್ವಲ್ಪ ಯೋಚನೆ ಮಾಡಬೇಕಿತ್ತು. ಪ್ರಕರಣವು ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಈ ಘಟನೆ ನಡೆದಾಗ ಎಲ್ಲರೂ ಖಂಡಿಸಿ ಮಾತನಾಡಿದ್ದೇವೆ. ಆದರೆ, ಈಗ ಕೇಸ್‌ ನ್ಯಾಯಾಲಯದಲ್ಲಿರುವಾಗ ರಮ್ಯಾ ಯಾಕೆ ಅಂತಹ ಪೋಸ್ಟ್‌ ಮಾಡಿದರು? ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿರುವ ವಿಷಯದ ಬಗ್ಗೆ ಮಾತನಾಡಬಾರದಿತ್ತು’ ಎಂದು ಕೆ. ಮಂಜು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಮ್ಯಾ vs ದರ್ಶನ್ ಫ್ಯಾನ್

ರಮ್ಯಾ ಮತ್ತು ದರ್ಶನ್‌ ಅಭಿಮಾನಿಗಳ ನಡುವಿನ ಜಗಳ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆ. ಮಂಜು ಅವರ ಈ ಹೇಳಿಕೆಯಿಂದ ವಿವಾದ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ. ರಮ್ಯಾ ಈ ಬಗ್ಗೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಪ್ರಕರಣದ ವಿಚಾರಣೆ ಮುಂದುವರಿಯುತ್ತಿದ್ದಂತೆ, ಈ ವಿವಾದ ಚಿತ್ರರಂಗದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸುವ ಸಾಧ್ಯತೆಯಿದೆ.