*  ಈಗ ಬಂಧಿತ ಪ್ರಕಾಶ ಆಗ ಕಾನ್ಸಟೇಬಲ್‌ ಅಕ್ರಮದ ಮೊದಲ ಆರೋಪಿ*  ಕಳೆದ ಅ.24 ರಂದು ನಡೆದಿದ್ದ ಪಿಸಿ ಪರೀಕ್ಷೆ *  ಹಿಂದಿನ ದಿನ ನಡೆದಿದ್ದ ದಾಳಿ 

ಆನಂದ್‌ ಎಂ. ಸೌದಿ

ಯಾದಗಿರಿ(ಜೂ.09): ಈಗ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌(ಪಿಎಸೈ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ತಂಡ, ಕಳೆದ ವರ್ಷ ನಡೆದ ಪೊಲೀಸ್‌ ಕಾನ್ಸಟೇಬಲ್‌(ಪಿಸಿ) ಪರೀಕ್ಷೆಯ ತನಿಖೆಯನ್ನೂ ನಡೆಸುವ ಸಾಧ್ಯತೆಗಳಿವೆ. ಆರೋಪಿಯೊಬ್ಬನ ವಿಚಾರಣೆ ವೇಳೆ ಕಾನ್ಸ್‌ಟೇಬಲ್‌ ಪರೀಕ್ಷೆಯಲ್ಲಿಯೂ ಬ್ಲೂಟೂತ್‌ ಅಕ್ರಮ ನಡೆದಿರುವ ಬಗ್ಗೆ ಸುಳಿವು ಸಿಕ್ಕಿದೆ. ಹೀಗಾಗಿ, ಸಿಐಡಿ ಅಧಿಕಾರಿಗಳು ಕಾನ್ಸಟೇಬಲ್‌ ಪ್ರಕರಣದತ್ತಲೂ ಕಣ್ಣು ಹಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಿಎಸೈ ಅಕ್ರಮ ವಿಚಾರವಾಗಿ ವಾರದ ಹಿಂದೆ ಕಲಬುರಗಿಯಲ್ಲಿ ಮೂವರನ್ನು ಬಂಧಿಸಲಾಗಿದೆ. ಅದರಲ್ಲೊಬ್ಬ, ಕಳೆದ ವರ್ಷ ನಡೆದಿದ್ದ ಕಾನ್ಸಟೇಬಲ್‌ ಪರೀಕ್ಷೆಯಲ್ಲಿ ಅಕ್ರಮ ಸಂಚಿನ ಪ್ರಕರಣದ ಮೊದಲ ಆರೋಪಿಯಾಗಿದ್ದ ಅನ್ನುವುದು ಪತ್ತೆಯಾಗಿದೆ. ಈ ಬಗ್ಗೆ ಮಹತ್ವದ ಮಾಹಿತಿಗಳ ಸಂಗ್ರಹಕ್ಕೆ ಸಿಐಡಿ ತಂಡ ಮುಂದಾಗಿದೆ.

PSI Recruitment Scam: ಜನವರಿಯಲ್ಲೇ ದೂರು ಬಂದರೂ ಮುಚ್ಚಿಟ್ಟರೇ?

ಏನಿದು ಅಕ್ರಮ?: 

ಪಿಎಸೈ ಅಕ್ರಮ ವಿಚಾರವಾಗಿ, ಕಲಬುರಗಿ ಜಿಲ್ಲೆಯ ಅಫಜಲ್ಪುರದ ಅಸ್ಲಂ, ಮುನಾಫ್‌ ಹಾಗೂ ಆಳಂದ ತಾಲೂಕಿನ ಪ್ರಕಾಶ ಎಂಬ ಮೂವರನ್ನು ಜೂನ್‌ 1 ರಂದು ಸಿಐಡಿ ತಂಡ ಬಂಧಿಸಿದೆ. ವಿಚಾರಣೆ ವೇಳೆ ಪ್ರಕಾಶ ಎಂಬಾತ ಕಳೆದ ವರ್ಷ ನಡೆದ ಕಾನ್ಸಟೇಬಲ್‌ ಪರೀಕ್ಷೆ ವೇಳೆ ಕಲಬುರಗಿಯಲ್ಲಿ ನಡೆದ ಸೈಬರ್‌ ಕ್ರೈಂ ಪೊಲೀಸರ ದಾಳಿ ಪ್ರಕರಣದಲ್ಲಿ (23/2021) ಮೊದಲ (ಎ-1) ಆರೋಪಿಯಾಗಿದ್ದ ಅನ್ನುವುದು ಗೊತ್ತಾಗಿದೆ. ಈತನನ್ನು ವಿಚಾರಣೆಗೊಳಪಡಿಸಿದಾಗ ಕಾನ್ಸ್‌ಟೇಬಲ್‌ ಪರೀಕ್ಷೆಯ ಈ ಮಾಹಿತಿ ಹೊರಬಿದ್ದಿದೆ.

ಕಳೆದ ಅ.3ರಂದು 545 ಪಿಎಸೈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆದರೆ, ಅ.24ರಂದು ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆದಿತ್ತು. ಪಿಎಸೈ ಪರೀಕ್ಷೆಯಲ್ಲಿ ಬ್ಲೂಟೂತ್‌ ಅಕ್ರಮ ನಡೆದಿದ್ದು, ಈಗ ಕಾನ್ಸಟೇಬಲ್‌ ಪರೀಕ್ಷೆಯಲ್ಲೂ ಇಂತಹ ಅಕ್ರಮ ನಡೆಯಬಹುದು ಎಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು.

PSI Recruitment Scam: 11 ಮಂದಿಗೆ ನ್ಯಾಯಾಂಗ ಬಂಧನ

ಹೀಗಾಗಿ, ಕಾನ್ಸ್‌ಟೇಬಲ್‌ ಪರೀಕ್ಷೆಯ ಹಿಂದಿನ ದಿನ(ಅ.23) ರಂದು ಕಲಬುರಗಿ ಸೈಬರ್‌ ಕ್ರೈಂ ಪೊಲೀಸರು ಅಲ್ಲಿನ ಲಾಡ್ಜೊಂದರ ಮೇಲೆ ದಾಳಿ ನಡೆಸಿದ್ದರು. ಅಕ್ರಮದ ಸಂಚಿನ ಆರೋಪದಡಿ ಆಗ 9 ಆರೋಪಿಗಳನ್ನು ಬಂಧಿಸಿ, ಬ್ಲೂಟೂತ್‌ ಉಪಕರಣಗಳು ಹಾಗೂ ವಿವಿಧ ಸಿಮ್‌ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿತ್ತು.

ಇದೇ ಸಂದರ್ಭದಲ್ಲಿ ಬೆಳಗಾವಿಯಲ್ಲಿಯೂ ವಿವಿಧ ಅತ್ಯಾಧುನಿಕ ಉಪಕರಣಗಳ ಜೊತೆಗೆ 14 ಜನರನ್ನು ಬಂಧಿಸಲಾಗಿತ್ತು. ಈ ಪ್ರಕರಣಗಳನ್ನು ಸರ್ಕಾರ ಇದೇ ಜನವರಿಯಲ್ಲಿ ಸಿಓಡಿಗೆ ವಹಿಸಿತ್ತಾದರೂ, ತನಿಖೆ ತೆರೆಮರೆಗೆ ಸರಿದಂತಿತ್ತು.
ತನಿಖೆಯ ಆಳಕ್ಕಿಳಿಯಲಾಗುವುದು

545 ಪಿಎಸೈ ಅಷ್ಟೇ ಅಲ್ಲ, ನಂತರ ನಡೆದಿದ್ದ ಕಾನ್ಸಟೇಬಲ್‌ ಪರೀಕ್ಷೆಯಲ್ಲೂ ಸಹ ಅಕ್ರಮದ ಮಾಹಿತಿಗಳು ತನಿಖೆಯ ವೇಳೆ ಗೊತ್ತಾಗುತ್ತಿವೆ. ತನಿಖೆಯ ಆಳಕ್ಕೆ ಇಳಿಯಲಾಗುವುದು ಅಂತ ಹೆಸರು ಹೇಳಲಿಚ್ಛಿಸದ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.