*   ಸಿದ್ದುಗೌಡ ಎಂಬಾತನ ವಿರುದ್ಧ ಜ.28ರಂದು ಡಿಸಿ-ಎಸ್ಪಿಗೆ ದೂರು*   ಸುಳಿವು ನೀಡಿದ್ದರೂ ಮೌನವಾಗಿದ್ದ ಜಿಲ್ಲಾಡಳಿತ *  ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾದ ಪಿಎಸೈ ಅಕ್ರಮ  

ಆನಂದ್‌ ಎಂ. ಸೌದಿ

ಯಾದಗಿರಿ(ಮೇ.11):  ಪಿಎಸೈ ಅಕ್ರಮದ(PSI Recruitment Scam) ಕುರಿತು ಸುಳಿವುಗಳ ಸಮೇತ ಜನವರಿ 28ರಂದು ತಮ್ಮ ತಮ್ಮ ಕಚೇರಿಗಳಿಗೆ ಬಂದಿದ್ದ ದೂರನ್ನು ಯಾದಗಿರಿ(Yadgir) ಡಿಸಿ ಹಾಗೂ ಎಸ್ಪಿ ಗಂಭೀರವಾಗಿ ಪರಿಗಣಿಸಿದ್ದರೆ, 4 ತಿಂಗಳುಗಳ ಹಿಂದೆಯೇ ಇದು ಬಯಲಿಗೆ ಬರುತ್ತಿತ್ತೇ ಅನ್ನೋ ಪ್ರಶ್ನೆಗಳೀಗ ಕೇಳೀಬರುತ್ತಿವೆ.

ಕಚೇರಿಗಳಿಗೆ ಬಂದ ದೂರುಪತ್ರಗಳನ್ನು ಗಂಭೀರವಾಗಿ ಪರಿಗಣಿಸದೆ, ‘ಕ್ಯಾರೇ’ ಅನ್ನದ ಅಧಿಕಾರಿಗಳ ಇಂತಹ ಬೇಜವಾಬ್ದಾರಿಯಿಂದಾಗಿ ಸರ್ಕಾರವೀಗ(Government of Karnataka) ಮುಜುಗರದ ಸನ್ನಿವೇಶ ಎದುರಿಸುವಂತಾಯ್ತೇ ಎಂಬುದರ ಜೊತೆಗೆ, ಈ ಅಕ್ರಮದ ಬಗ್ಗೆ ಸಿಐಡಿ(CID) ತನಿಖೆ ನಡೆಯುತ್ತಿದ್ದರೂ ಕೂಡ ಈವರೆಗೆ ಇಂತಹುದ್ದೊಂದು ದೂರಿನ ಬಗ್ಗೆ ಮೌನ ಮುರಿಯದ ಯಾದಗಿರಿ ಜಿಲ್ಲಾ ಪೊಲೀಸ್‌(Police) ಕ್ರಮ ಅನುಮಾನಗಳನ್ನೂ ಮೂಡಿಸಿದೆ.

11 ಮಂದಿಗೆ ನ್ಯಾಯಾಂಗ ಬಂಧನ

ಹೌದು, ಈಗ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾದ ಪಿಎಸೈ ಅಕ್ರಮದ ಬಗ್ಗೆ ನಾಲ್ಕು ತಿಂಗಳುಗಳ (ಜ.28) ಮೊದಲೇ ನೊಂದ ಅಭ್ಯರ್ಥಿಯೊಬ್ಬರು(Candidate) ಯಾದಗಿರಿಯ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಕಚೇರಿಗಳಿಗೆ ದೂರು ನೀಡಿದ್ದರು. ಕಲಬುರಗಿ ಜಿಲ್ಲೆ ಅಫಜಲ್ಪೂರದ ಸಿದ್ದುಗೌಡ ಎಂಬಾತನ ವಿರುದ್ಧ ಬರೆದಿದ್ದ ಆ ದೂರಿನಲ್ಲಿ ಬ್ಲೂಟೂತ್‌ ಸೇರಿದಂತೆ ಅಕ್ರಮ ನಡೆದಿರಬಹುದಾದ ಪ್ರಾಕಾರಗಳ ಬಗ್ಗೆ ಒಂದಿಷ್ಟುಸುಳಿವುಗಳನ್ನು ನೀಡಲಾಗಿತ್ತು.

ಯಾದಗಿರಿ ಡಿಸ್ಟ್ರಿಕ್‌ ರಿಜರ್ವ್‌ ಪೊಲೀಸ್‌ ಪಡೆಯ ಈ ವ್ಯಕ್ತಿ, ಎಫ್‌ಡಿಎ ಪರೀಕ್ಷೆಯಲ್ಲಿ(FDA Exam) ಪಾಸಾಗಿದ್ದು, ಈಗ ಪಿಎಸೈ ಆಗಿಯೂ ಆಯ್ಕೆಯಾಗಿದ್ದಾನೆ. ಫಲಿತಾಂಶ ಪ್ರಕಟಣೆಗೂ ಮುನ್ನ ಈತ ತನ್ನ ಪಿಎಸೈ ನೇಮಕ ಕುರಿತು ಖಾತ್ರಿಪಡಿಸಿದ್ದನ್ನಲ್ಲದೆ, ಇಲ್ಲಿ ಯಾವುದೇ ಸಾಕ್ಷಿಗಳು ಸಿಗೋಲ್ಲ, ದೊಡ್ಡ ದೊಡ್ಡವರು ಶಾಮೀಲಾಗಿದ್ದಾರೆ ಎಂದು ಅಂದಾಡಿಕೊಳ್ಳುತ್ತಿದ್ದಾನೆಂದು ಕೆಲವು ಸುಳಿವುಗಳ ಮೂಲಕ ದೂರಿನಲ್ಲಿ ತಿಳಿಸಲಾಗಿತ್ತು.

Yadgir: ತಾಯಿಗಾಗಿ ದೇವಸ್ಥಾನ ಕಟ್ಟಿದ ಶಾಸಕ ರಾಜೂಗೌಡ: ಅಮೃತ ಶಿಲೆಯಿಂದ ನಿರ್ಮಾಣ

ಇದೇ ಫೆ.1 ರಂದು ‘ಕನ್ನಡಪ್ರಭ’ದಲ್ಲಿ(Kannada Prabha) ಪ್ರಕಟಗೊಂಡಿದ್ದ ಇಂತಹ ದೂರಿನ ಬಗ್ಗೆ ಸುದ್ದಿ ಗಮನ ಸೆಳೆದಿತ್ತು. ಗಂಭೀರ ಆರೋಪಗಳ ಈ ದೂರು ಕುರಿತು ಆಗಲೇ ತನಿಖೆ(Investigation) ನಡೆಸಿದ್ದರೆ, ಬಹುದೊಡ್ಡ ಅಕ್ರಮವೊಂದನ್ನು ಬಯಲಿಗೆಳೆದ ಕೀರ್ತಿಯೂ ಇಲ್ಲಿನವರ ಮುಡಿಗೇರುತ್ತಿತ್ತು. ಆದರೆ, ಇದನ್ನು ಹಗುರವಾಗಿ ತೆಗೆದುಕೊಂಡಂತಿದ್ದ ಆಡಳಿತದ ನಿಷ್ಕಾಳಜಿಯಿಂದಾಗಿ ಸರ್ಕಾರದ ಮುಜುಗರದ ಸನ್ನಿವೇಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ದೂರಿನ ಬಗ್ಗೆ ಪರಿಶೀಲಿಸುತ್ತೇನೆ

ಹೌದು, ಈ ಬಗ್ಗೆ ಈಗ ಪರಿಶೀಲಿಸುತ್ತೇನೆ. ದೂರು ಪತ್ರದಲ್ಲಿನ ಅಂಶಗಳನ್ನು ನೋಡಿ, ಸಂಬಂಧಿತರ ಗಮನಕ್ಕೆ ತರುತ್ತೇನೆ ಅಂತ ಯಾದಗಿರಿ ಎಸ್ಪಿ ಡಾ. ವೇದಮೂರ್ತಿ ತಿಳಿಸಿದ್ದಾರೆ.