PSI Recruitment Scam: 11 ಮಂದಿಗೆ ನ್ಯಾಯಾಂಗ ಬಂಧನ
* ಪ್ರಶ್ನೆ ಪತ್ರಿಕೆ ಸೋರಿಕೆ ಒಪ್ಪಿಕೊಂಡ ಕಾಶಿನಾಥ್
* ಜ್ಞಾನಜ್ಯೋತಿ ಶಾಲೆಯಿಂದ ಪ್ರಶ್ನೆ ಲೀಕ್ ಮಾಡಿ ಉತ್ತರ ತರಿಸುತ್ತಿದ್ದ ಹೆಡ್ ಮಾಸ್ಟರ್
* ಮೇಲ್ವಿಚಾರಕರಿಂದ ಆ ಉತ್ತರ ಬರೆಸುತ್ತಿದ್ದ ಆರೋಪಿ
ಕಲಬುರಗಿ(ಮೇ.10): ಪಿಎಸ್‌ಐ ಪರೀಕ್ಷೆ(PSI Recruitment Scam) ಹಗರಣದ ರೂವಾರಿ ದಿವ್ಯಾ ಹಾಗರಗಿಗೆ(Divya Hagaragi) ಸೇರಿದ ಜ್ಞಾನಜ್ಯೋತಿ ಶಾಲೆಯ ಹೆಡ್‌ಮಾಸ್ಟರ್ ಕಾಶೀನಾಥ್(Kashinath) ಪಿಎಸ್‌ಐ ಪರೀಕ್ಷೆ ಪ್ರಶ್ನೆ ಪತ್ರಿಕೆಗಳನ್ನೆಲ್ಲ ತಾನಿರುವ ಶಾಲಾ ಕೇಂದ್ರದಿಂದಲೇ ಸೋರಿಕೆ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಈತನನ್ನು ಸಿಐಡಿ(CID) ದಿವ್ಯಾ ಹಾಗರಗಿ ಜೊತೆಗೆ ಭಾನುವಾರ ಶಾಲೆಗೆ ಸ್ಥಳ ಮಹಜರಿಗಾಗಿ ಕರೆ ತಂದಾಗ ತನ್ನ ಮೊಬೈಲ್‌ನಲ್ಲಿ ಪ್ರಶ್ನೆ ಪತ್ರಿಕೆಗಳ ಫೋಟೋ ತೆಗೆದು ಅವುಗಳನ್ನೆಲ್ಲ ಅಕ್ರಮದ ತಜ್ಞರ ಬಳಿ ಕಳುಹಿಸಿ ಸರಿ ಉತ್ತರ ಬರೆಸುತ್ತಿದ್ದುದು ಹಾಗೂ ಶಾಲೆಯ ಮೇಲ್ವಿಚಾರಕಿಯರಿಗೆ ಪೂರೈಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಮೇಲ್ವಿಚಾರಕಿಯರು ಸರಿ ಉತ್ತರ ಬರೆಯುತ್ತಿದ್ದರು ಎಂದು ಹೇಳಿಕೊಂಡಿದ್ದಾನೆ.
ಜೈಲಿನಲ್ಲಿದ್ರೂ ಸರಕಾರದ ಸಂಬಳ, ಇದು ಇಂಜಿನಿಯರ್ ಮಂಜುನಾಥನ ಮಹಾತ್ಮೆ!
ಇದಕ್ಕೆಲ್ಲ ಬಳಸುತ್ತಿದ್ದ ಝರಾಕ್ಸ್ ಯಂತ್ರ, ಕಂಪ್ಯೂಟರ್, ಪ್ರಿಂಟರ್ ಸೇರಿ ಅನೇಕ ಪರಿಕರಗಳನ್ನು ಸ್ಥಳ ಮಹಜರು ಸಂದರ್ಭದಲ್ಲೇ ಸಿಐಡಿ ವಶಕ್ಕೆ ಪಡೆದಿದೆ. ಹೊರಗಿನಿಂದ ಉತ್ತರಗಳು ಬಂದ ತಕ್ಷಣ ಅವುಗಳನ್ನು ಪ್ರಿಂಟ್ ಹಾಕಿ ಆಯಾ ಕೋಣೆಯಲ್ಲಿರುವ ಡೀಲ್ ಆದ ಅಭ್ಯರ್ಥಿಗಳಿಗೆ ರವಾನೆಯಾಗುವಂತೆಯೂ ಕಾಶೀನಾಥನೇ ನೋಡಿಕೊಂಡಿದ್ದ ಎನ್ನಲಾಗಿದೆ.
ಮೇಲ್ವಿಚಾರಕರಿಗೆ ಭತ್ಯೆ:
ಪಿಎಸ್‌ಐ ಪರೀಕ್ಷೆ ಮುಗಿದ ನಂತರ ಖುಷಿಯಲ್ಲಿದ್ದ ಕಾಶಿನಾಥ್ ಪರೀಕ್ಷೆಯ ನಂತರ ಶಾಲಾ ಅಂಗಳದಲ್ಲೇ ಒಡತಿ ದಿವ್ಯಾ ಹಾಗರಗಿ ಜೊತೆಗೂಡಿ ಪರೀಕ್ಷೆ ಕೆಲಸಕ್ಕೆ ನಿಯೋಜಿತರಾಗಿದ್ದ ಡಿವೈಎಸ್ಪಿ ಸೇರಿ ಸಿಪಿಐಗಳು, ಪಿಎಸ್‌ಐ, ಮೇಲ್ವಿಚಾರಕಿಯರು ಸೇರಿ ಎಲ್ಲರಿಗೂ ದಿನದ ಭತ್ಯೆರೂಪದಲ್ಲಿ ತಲಾ .4 ಸಾವಿರ ನೀಡಿದ್ದ ಎಂಬುದು ಸಿಐಡಿ ತನಿಖೆಯಲ್ಲಿ ತಿಳಿದುಬಂದಿದೆ.
ಪಿಎಸ್‌ಐ ಪರೀಕ್ಷೆ ಅಕ್ರಮ: 11 ಮಂದಿಗೆ ನ್ಯಾಯಾಂಗ ಬಂಧನ
ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ಸಿಐಡಿಯಿಂದ ಬಂಧನಕ್ಕೆ ಒಳಗಾಗಿದ್ದ 11 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ(Judicial Custody) ಒಪ್ಪಿಸಿ ನಗರದ ಎಸಿಎಂಎಂ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ 14 ಮಂದಿ ಬಂಧಿತ ಆರೋಪಿಗಳನ್ನು(Accused) ಸೋಮವಾರ ನಗರದ 19ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಆರೋಪಿಗಳ ಹಾಜರಾತಿ ದಾಖಲಿಸಿಕೊಂಡ ನ್ಯಾಯಪೀಠ, ತನಿಖಾಧಿಕಾರಿಗಳ ಮನವಿ ಮೇರೆಗೆ ಎಂಟನೇ ಆರೋಪಿ ಮನುಕುಮಾರ್‌ನನ್ನು ನಾಲ್ಕು ದಿನ ಮತ್ತು ಭಾನುವಾರ ಬಂಧನಕ್ಕೆ ಒಳಗಾಗಿದ್ದ ಶಶಿಧರ್ ಹಾಗೂ ಕೇಶವಮೂರ್ತಿ ಅವರನ್ನು 10 ದಿನ ಸಿಐಡಿ ವಶಕ್ಕೆ ನೀಡಿ ಆದೇಶಿಸಿತು. ಉಳಿದ 11 ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿತು.
ಈ ಸಂದರ್ಭದಲ್ಲಿ ನ್ಯಾಯಾಧೀಶರ ಮುಂದೆ ಆರೋಪಿಗಳು ಸಿಐಡಿ ತನಿಖಾಧಿಕಾರಿಗಳ ವಿರುದ್ಧ ಆರೋಪ ಮಾಡಿದರು. ವಿಚಾರಣೆ ವೇಳೆ ತನಿಖಾಧಿಕಾರಿಗಳು ತಮಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಬಿಳಿಯ ಖಾಲಿ ಕಾಗದ ಮೇಲೆ ತಮ್ಮ ಸಹಿ ಪಡೆದಿದ್ದಾರೆ ಎಂದು ಆರೋಪ ಮಾಡಿದರು. ಪಿಎಸ್‌ಐ ನೇಮಕಾತಿ ವೇಳೆ ಲಿಖಿತ ಪರೀಕ್ಷೆಯ ಒಎಂಆರ್ ಹಾಗೂ ಕಾರ್ಬನ್ ಕಾಪಿ ವ್ಯತ್ಯಾಸ ಹಿನ್ನೆಲೆಯಲ್ಲಿ ಈ ಆರೋಪಿಗಳ ವಿರುದ್ಧ ನಗರದ ಹೈಗ್ರೌಂಡ್ಸ್ ಠಾಣಾ ಪೊಲೀಸರು ಎಫ್‌ಐಆರ್(FIR) ದಾಖಲಿಸಿ ಬಂಧಿಸಿದ್ದರು.
ಯಾದಗಿರಿ ಡೀಸಿ, ಎಸ್ಪಿಗೆ ಜನವರಿಯಲ್ಲೇ ದೂರು
ಯಾದಗಿರಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಪಿಎಸ್‌ಐ ನೇಮಕಾತಿ ಅಕ್ರಮದ ಕುರಿತು ಸುಳಿವುಗಳ ಸಮೇತ ಜ.28ರಂದೇ ನೊಂದ ಅಭ್ಯರ್ಥಿಯೊಬ್ಬರು ಯಾದಗಿರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಆ ವೇಳೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದರೆ, 4 ತಿಂಗಳುಗಳ ಹಿಂದೆಯೇ ಇದು ಬಯಲಿಗೆ ಬರುತ್ತಿತ್ತು ಎಂಬ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿವೆ.
PSI Recruitment Scam: ಕಲಬುರಗಿ, ಬೆಂಗ್ಳೂರಿಂದ ಪಿಎಸ್‌ಐ ಪ್ರಶ್ನೆಪತ್ರಿಕೆ ಲೀಕ್
ಯಾದಗಿರಿ ಡಿಸ್ಟ್ರಿಕ್ ರಿಜರ್ವ್ ಪೊಲೀಸ್ ಪಡೆಯಲ್ಲಿರುವ ಅಫಜಲಪುರದ ಸಿದ್ದುಗೌಡ ಎಂಬ ವ್ಯಕ್ತಿ ಎಫ್‌ಡಿಎ ಪರೀಕ್ಷೆಯಲ್ಲಿ ಪಾಸಾಗಿದ್ದು, ಈಗ ಪಿಎಸೈ ಆಗಿಯೂ ಆಯ್ಕೆಯಾಗಿದ್ದಾನೆ. ಫಲಿತಾಂಶ ಪ್ರಕಟಣೆಗೂ ಮುನ್ನವೇ ಈತ ತನ್ನ ಪಿಎಸೈ ನೇಮಕ ಕುರಿತು ಖಾತ್ರಿಪಡಿಸಿದ್ದ. ಜೊತೆಗೆ ಇಲ್ಲಿ ಯಾವುದೇ ಸಾಕ್ಷಿಗಳು ಸಿಗೋಲ್ಲ, ದೊಡ್ಡ ದೊಡ್ಡವರು ಶಾಮೀಲಾಗಿದ್ದಾರೆ ಎಂದು ಆಡಿಕೊಳ್ಳುತ್ತಿದ್ದಾನೆಂದು ಕೆಲವು ಸುಳಿವುಗಳ ಮೂಲಕ ದೂರಿನಲ್ಲಿ ತಿಳಿಸಲಾಗಿತ್ತು. ಇದಾದ ಬೆನ್ನಲ್ಲೇ ಫೆ.1ರಂದು ‘ಕನ್ನಡಪ್ರಭ’ ಸಹ ಈ ಬಗ್ಗೆ ಸುದ್ದಿ ಪ್ರಕಟಿಸಿ ಗಮನ ಸೆಳೆದಿತ್ತು.
ಹೌದು. ಈ ಬಗ್ಗೆ ಈಗ ಪರಿಶೀಲಿಸುತ್ತೇನೆ. ದೂರು ಪತ್ರದಲ್ಲಿನ ಅಂಶಗಳನ್ನು ನೋಡಿ, ಸಂಬಂಧಿತರ ಗಮನಕ್ಕೆ ತರುತ್ತೇನೆ ಅಂತ ಯಾದಗಿರಿ ಎಸ್ಪಿ ಡಾ.ವೇದಮೂರ್ತಿ ತಿಳಿಸಿದ್ದಾರೆ.