ಬೆಂಗಳೂರಿನ ಸದಾಶಿವನಗರದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಸಚಿವ ಪ್ರಿಯಾಂಕ್ ಖರ್ಗೆಯವರು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಾಳು ವ್ಯಕ್ತಿಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದರು.

ಬೆಂಗಳೂರು (ಜ.19): ಬೆಂಗಳೂರಿನ ಸದಾಶಿವನಗರದ ಜನಸಂಚಾರ ವಿರಳವಾಗಿದ್ದ ರಸ್ತೆಯೊಂದರಲ್ಲಿ ಭೀಕರ ಬೈಕ್ ಅಪಘಾತ ಸಂಭವಿಸಿದ್ದು. ಅಪಘಾತದ ರಭಸಕ್ಕೆ ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡು, ರಸ್ತೆ ಬದಿಯಲ್ಲಿ ನಿತ್ರಾಣ ಸ್ಥಿತಿಯಲ್ಲಿ ಬಿದ್ದಿದ್ದರು. ಇದೇ ವೇಳೆ ಅದೇ ರಸ್ತೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ವಿಷಯ ತಿಳಿದು ತಕ್ಷಣ ಕಾರು ನಿಲ್ಲಿಸಿದರು.

ತಕ್ಷಣವೇ ಸ್ಪಂದಿಸಿದ ಐಟಿ-ಬಿಟಿ ಸಚಿವ

ರಸ್ತೆ ಬದಿಯಲ್ಲಿ ನಿತ್ರಾಣ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಗಮನಿಸಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರು, ತಕ್ಷಣ ತಮ್ಮ ಕಾರನ್ನು ನಿಲ್ಲಿಸಲು ಸೂಚಿಸಿದರು. ಭದ್ರತಾ ಸಿಬ್ಬಂದಿಯ ನೆರವಿನೊಂದಿಗೆ ಗಾಯಾಳುವನ್ನು ತಾವೇ ಖುದ್ದಾಗಿ ಉಪಚರಿಸಿ, ಅಂಬ್ಯುಲೆನ್ಸ್‌ಗೆ ಕಾಯುವ ಬದಲು ತಮ್ಮದೇ ಸರ್ಕಾರಿ ಕಾರಿನಲ್ಲಿ ಗಾಯಾಳುವನ್ನು ಕರೆದುಕೊಂಡು ಹೋಗುವ ಮೂಲಕ ಮಾದರಿಯಾದರು.

ಖುದ್ದಾಗಿ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆಗೆ ವ್ಯವಸ್ಥೆ

ಗಾಯಾಳುವನ್ನು ಕೂಡಲೇ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ ಸಚಿವರು, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ಚರ್ಚಿಸಿ,. ಗಾಯಾಳು ವ್ಯಕ್ತಿಗೆ ಯಾವುದೇ ವಿಳಂಬವಿಲ್ಲದೆ ತುರ್ತು ಚಿಕಿತ್ಸೆ ದೊರೆಯುವಂತೆ ನೋಡಿಕೊಂಡರು. ಸಚಿವರ ಈ ಸಮಯಪ್ರಜ್ಞೆ ಮತ್ತು ಮಾನವೀಯ ನಡೆಯಿಂದಾಗಿ ವ್ಯಕ್ತಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತಂತಾಗಿದೆ.

ಸಾರ್ವಜನಿಕ ವಲಯದಲ್ಲಿ ಸಚಿವರ ಕಾರ್ಯಕ್ಕೆ ಮೆಚ್ಚುಗೆ

ಸಾಮಾನ್ಯವಾಗಿ ವಿಐಪಿಗಳು ಸಂಚರಿಸುವಾಗ ಇಂತಹ ಘಟನೆಗಳಿದ್ದರೂ ಭದ್ರತೆಯ ಕಾರಣ ನೀಡಿ ಮುಂದೆ ಸಾಗುತ್ತಾರೆ. ಆದರೆ, ಅಧಿಕಾರದ ಹಮ್ಮು ಬಿಟ್ಟು ಸಾಮಾನ್ಯ ನಾಗರಿಕನ ಪ್ರಾಣ ಉಳಿಸಲು ಧಾವಿಸಿದ ಪ್ರಿಯಾಂಕ್ ಖರ್ಗೆಯವರ ನಡೆಯನ್ನು ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 'ಮಾನವೀಯತೆಗಿಂತ ಮಿಗಿಲಾದ ಅಧಿಕಾರವಿಲ್ಲ' ಎಂಬುದನ್ನು ಸಚಿವರು ಸಾಬೀತುಪಡಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.