ಪಕ್ಷದಲ್ಲಿ ಗೊಂದಲಗಳು ಇರುವುದು ಸರಿಯಲ್ಲ. ಒಂದು ಮನೆ ಎಂದರೆ ಗೊಂದಲ ಇದ್ದೇ ಇರುತ್ತದೆ. ಎಲ್ಲರ ಮನೆಯ ದೋಸೆಯೂ ತೂತೆ. ಆದರೆ, ಅದನ್ನು ಬಗೆಹರಿಸಿಕೊಳ್ಳಬೇಕು. ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರು (ಡಿ.27): ‘ಪಕ್ಷದಲ್ಲಿನ ಗೊಂದಲ ಸರಿಯಲ್ಲ. ಬೇರು ಮಟ್ಟದಲ್ಲಿರಬಹುದು, ಪಕ್ಷ ಅಥವಾ ಸರ್ಕಾರ ಸೇರಿದಂತೆ ಯಾವುದೇ ಹಂತದಲ್ಲೂ ಗೊಂದಲ ಇರಬಾರದು. ಇದನ್ನು ಬಗೆಹರಿಸಲು ಸಂಬಂಧಪಟ್ಟವರನ್ನು ಕರೆದು ಮಾತನಾಡುವುದಾಗಿ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಗೊಂದಲಗಳು ಇರುವುದು ಸರಿಯಲ್ಲ. ಒಂದು ಮನೆ ಎಂದರೆ ಗೊಂದಲ ಇದ್ದೇ ಇರುತ್ತದೆ. ಎಲ್ಲರ ಮನೆಯ ದೋಸೆಯೂ ತೂತೆ. ಆದರೆ, ಅದನ್ನು ಬಗೆಹರಿಸಿಕೊಳ್ಳಬೇಕು. ಸಿಎಂ ಬದಲಾವಣೆ ವಿಚಾರದಲ್ಲಿ ನಿರ್ಧಾರ ಮಾಡುವುದಾಗಿ ಹೈಕಮಾಂಡ್ ಈಗಾಗಲೇ ಸ್ಪಷ್ಟಪಡಿಸಿದೆ. ಎಲ್ಲರೂ ಕೂಡ ಹೈಕಮಾಂಡ್ ಮಾತಿಗೆ ಒಪ್ಪಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರೂ ಸಂಬಂಧಪಟ್ಟವರನ್ನು ಕರೆದು ಮಾತನಾಡುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಿದ್ದರೂ, ಹೈಕಮಾಂಡ್ ನತ್ತ ಬೊಟ್ಟು ಮಾಡೋದು ಸರಿಯಲ್ಲ ಎಂದು ಹೇಳಿದರು.---
‘ರಾಗಾ ಭೇಟಿಗೆ ಅವಕಾಶ ಕೇಳದ ಡಿಕೆ’: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಹುಲ್ ಗಾಂಧಿ ಭೇಟಿಗೆ ಸಮಯಾವಕಾಶವನ್ನೇ ಕೇಳಿರಲಿಲ್ಲ. ರಾಹುಲ್ ಗಾಂಧಿ ಅವರೂ ಸಹ ದೆಹಲಿಯಲ್ಲಿ ಇರಲಿಲ್ಲ. ದೆಹಲಿಗೆ ಹೋದವರೆಲ್ಲರೂ ರಾಹುಲ್‌ಗಾಂಧಿ ಭೇಟಿ ಮಾಡಲೇ ಹೋಗಿದ್ದಾರೆ ಎಂದು ಬಿಂಬಿಸಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷಕ್ಕಾಗಿ ನಾನು ಕಸ ಗುಡಿಸಿದ್ದೇನೆ, ಬ್ಯಾನರ್ ಕಟ್ಟಿದ್ದೇನೆ’ ಎಂದು ಡಿಕೆಶಿ ಹೇಳಿರುವುದರಲ್ಲಿ ತಪ್ಪಿಲ್ಲ. ಅವರು ಹಿರಿಯ ನಾಯಕರು. ಬಂದ ಹಾದಿಯ ಬಗ್ಗೆ ಮಾತನಾಡಿದ್ದಾರೆ. ಲಕ್ಷಾಂತರ ಜನರ ಶ್ರಮದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ದುಡಿಮೆಗೆ ತಕ್ಕ ಪ್ರತಿಫಲ ಎಲ್ಲರಿಗೂ ಸಿಗುತ್ತದೆ. ಯಾರನ್ನೂ ಕಡೆಗಣಿಸಲಾಗಲ್ಲ ಎಂದು ಹೇಳಿದರು.
ಜಿ ರಾಮ್ ಜಿ ಕಾಯ್ದೆ ರಾಜ್ಯಗಳಿಗೆ ಮಾರಕ
ಜನರಿಗೆ ಉದ್ಯೋಗ ಖಾತ್ರೆ ನೀಡುವ ಜಿ ರಾಮ್ ಜಿ ಕಾಯ್ದೆಯು ಪಂಚಾಯಿತ್ ರಾಜ್‌ಗೆ ಮಾರಕವಾಗಿದೆ ಎಂದು ಹರಿಹಾಯ್ದಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರವು ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನರೇಗಾ ಹೆಸರನ್ನು ಬದಲಿಸಿ ತಂದಿರುವ ಜಿ ರಾಮ್ ಜಿ ಕಾಯ್ದೆಯಲ್ಲಿ ರಾಜ್ಯ ಸರ್ಕಾರಗಳು ಇನ್ನು ಮುಂದೆ ಶೇಕಡ 40 ಹಣ ನೀಡಬೇಕಿದೆ. ಇದರಿಂದ ರಾಜ್ಯದ ಖಜಾನೆಗೆ ಮಾರಕವಾಗಲಿದೆ. ಕೇಂದ್ರವು ರಾಜ್ಯದ ಫಂಡಿಂಗ್ ಕಸಿದುಕೊಂಡಿದೆ. ತನ್ನ ಜವಾಬ್ದಾರಿಯಿಂದ ಕೇಂದ್ರ ನುಣಿಚಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದರ ವಿರುದ್ಧ ತಜ್ಞರ ಜೊತೆ ಸಭೆ ನಡೆಸಿ ಮುಂದಿನ ಹೆಜ್ಜೆ ಕುರಿತು ತೀರ್ಮಾನಿಸುವುದಾಗಿ ತಿಳಿಸಿದರು. ಅಲ್ಲದೆ ಮನರೇಗಾ ಒಕ್ಕೂಟ, ಕಾರ್ಮಿಕರ ಜೊತೆ ಸಭೆ ಮಾಡುವ ಉದ್ದೇಶ ಇದೆ ಎಂದು ಮಾಹಿತಿ ನೀಡಿದರು. ಅಲ್ಲದೆ ಪ್ರಿಯಾಂಕ್ ಖರ್ಗೆ ಕರ್ನಾಟಕ ಭವನದಲ್ಲಿ ಆಯೋಜಿಸಿದ್ದ ಕಳೆದ 20 ವರ್ಷಗಳಿಂದ ಮನರೇಗಾ ರಚನೆ, ಅನುಷ್ಠಾನ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೆಲಸ ಮಾಡಿದ ಎಲ್ಲಾ ಸಂಬಂಧಿತ ಪಾಲುದಾರರು ಮತ್ತು ತಜ್ಞರೊಂದಿಗೆ ದುಂಡು ಮೇಜಿನ ಸಭೆ ನಡೆಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದರಾದ ಶ್ರೇಯಸ್ ಪಟೇಲ್, ಕುಮಾರ ನಾಯಕ್ ಭಾಗವಹಿಸಿದ್ದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ರದ್ದುಗೊಳಿಸಿದೆ, ಇನ್ನು ಮುಂದೆ ಕೈಗೊಳ್ಳಬೇಕಿರುವ ಕ್ರಮಗಳು, ಜಿ ರಾಮ್ ಜಿ ಕಾಯ್ದೆ ಅನ್ನು ವಿರೋಧಿಸುವ ಪ್ರಕ್ರಿಯೆಯನ್ನು ರೂಪುಗೊಳಿಸಲು ಸಭೆಯಲ್ಲಿ ಚರ್ಚೆ ನಡೆಸಲಾಯಿತು.


