ಕೇರಳದಲ್ಲಿ ದಲಿತ ಯುವಕನ ಮೇಲೆ ಹಲ್ಲೆಯಾಗಿದ್ದು, ಆ ಬಗ್ಗೆ ಮಾತನಾಡದೆ ಚುನಾವಣೆ ದೃಷ್ಟಿ ಹಾಗೂ ರಾಜಕೀಯಕ್ಕೆ ಬೆಂಗಳೂರಿನ ಶೆಡ್‌ ತೆರವು ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಾತನಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ.

ಬೆಂಗಳೂರು (ಡಿ.28): ಕೇರಳದಲ್ಲಿ ದಲಿತ ಯುವಕನ ಮೇಲೆ ಹಲ್ಲೆಯಾಗಿದ್ದು, ಆ ಬಗ್ಗೆ ಮಾತನಾಡದೆ ಚುನಾವಣೆ ದೃಷ್ಟಿ ಹಾಗೂ ರಾಜಕೀಯಕ್ಕೆ ಬೆಂಗಳೂರಿನ ಶೆಡ್‌ ತೆರವು ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಾತನಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರ ಶೆಡ್‌ ತೆರವು ಮಾಡಲಾಗಿದೆ. ಕಾನೂನು ಬಿಟ್ಟು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.

ಕೇರಳದಲ್ಲಿ ದಲಿತ ಯುವಕನನ್ನ ಹೊಡೆದಿದ್ದಾರೆ. ಅದರ ಬಗ್ಗೆ ಅವರು ಮಾತನಾಡಲ್ಲ. ಅವರ ಅಂಗಳದಲ್ಲಿ ಆದ ಘಟನೆಗಳ ಬಗ್ಗೆ ಮಾತನಾಡುತ್ತಿಲ್ಲ. ಪಕ್ಕದವರ ಮನೆಯ ಅಂಗಳದ ವಿಚಾರಗಳಿಗೆ ಮಾತನಾಡುತ್ತಾರೆ. ಸಹಜವಾಗಿ ರಾಜಕೀಯ ಅಲ್ವಾ ಇದು? ಅವರು ಹಿರಿಯ ಮುಖ್ಯಮಂತ್ರಿ ಆಗಿದ್ದಾರೆ. ಅವರು ಯಾಕೆ ನಮ್ಮ ರಾಜ್ಯದ ಬಗ್ಗೆ ಮಾತನಾಡ್ತಾ ಇದ್ದಾರೆ? ಕೇರಳದ ಚುನಾವಣೆ ದೃಷ್ಟಿಯಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ಕೇರಳ ವರ್ಸಸ್‌ ಕರ್ನಾಟಕ: ರಾಜಧಾನಿ ಬೆಂಗಳೂರಿನ ಅಕ್ರಮ ಶೆಡ್‌ ತೆರವು ಕಾರ್ಯಾಚರಣೆ ವಿಚಾರದಲ್ಲಿ ಮೂಗು ತೂರಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ‘ಬುಲ್ಡೋಜರ್‌ ನ್ಯಾಯಕ್ಕೂ ಅಕ್ರಮ ಒತ್ತುವರಿ ತೆರವಿಗೂ ಇರುವ ಅಂತರದ ಪರಿಜ್ಞಾನವಿಲ್ಲದ ರಾಜಕಾರಣಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ರಾಜ್ಯ ನಾಯಕರು ತೀವ್ರ ತಿರುಗೇಟು ನೀಡಿದ್ದು, ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡದಂತೆ ತಾಕೀತು ಮಾಡಿದ್ದಾರೆ.

ಪಿಣರಾಯಿ ವಿಜಯನ್‌ ವಿರುದ್ಧ ಹರಿಹಾಯ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ರಾಜ್ಯ ನಾಯಕರು, ಬುಲ್ಡೋಜರ್ ನ್ಯಾಯಕ್ಕೂ ಅಕ್ರಮ ಒತ್ತುವರಿ ತೆರವಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಪಿಣರಾಯಿ ವಿಜಯನ್ ಅವರಿಗೆ ವಾಸ್ತವ ಸಂಗತಿಗಳ ಅರಿವಿಲ್ಲ ಎಂದು ಟೀಕಿಸಿದ್ದಾರೆ. ಅಲ್ಲದೆ, ಸತ್ಯಾಸತ್ಯತೆ ಅರಿವಿಲ್ಲದೇ ಕೇರಳ ಮುಖ್ಯಮಂತ್ರಿ ನಮ್ಮ ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜಕೀಯ ಕಾರಣಕ್ಕೆ ಟೀಕೆ

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಸ್ತವ ಸಂಗತಿ ಬಗ್ಗೆ ಅರಿವಿಲ್ಲದೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಬುಲ್ಡೋಜರ್ ನ್ಯಾಯಕ್ಕೂ ಅಕ್ರಮ ಒತ್ತುವರಿ ತೆರವಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ತಿಳಿ ಹೇಳಿದ್ದಾರೆ. ಜತೆಗೆ, ಅಕ್ರಮ ವಾಸಿಗಳಿಗೆ ತಾತ್ಕಾಲಿಕವಾಗಿ ಆಶ್ರಯ, ಊಟ ಇನ್ನಿತರೆ ವ್ಯವಸ್ಥೆ ಮಾಡಿಕೊಡುವಂತೆ ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.