ಖಾಸಗಿ ಕೋಟಾ ವೈದ್ಯ ಶುಲ್ಕ 10% ದುಬಾರಿ, ಹಾಗಾದ್ರೆ ಈಗ ಫೀ ಎಷ್ಟು?
ರಾಜ್ಯದ ಅಲ್ಪಸಂಖ್ಯಾತ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ವೈದ್ಯಕೀಯ- ದಂತ ವೈದ್ಯಕೀಯ ಕಾಲೇಜುಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಖಾಸಗಿ ಕೋಟಾದ ಸೀಟುಗಳ ಶುಲ್ಕವನ್ನು ಶೇ.10ರಷ್ಟುಹೆಚ್ಚಳ ಮಾಡಲು ಅನುಮತಿಸಿ ಸರ್ಕಾರ ಆದೇಶಿಸಿದೆ.
ಬೆಂಗಳೂರು ಆ.7) : ರಾಜ್ಯದ ಅಲ್ಪಸಂಖ್ಯಾತ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ವೈದ್ಯಕೀಯ- ದಂತ ವೈದ್ಯಕೀಯ ಕಾಲೇಜುಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಖಾಸಗಿ ಕೋಟಾದ ಸೀಟುಗಳ ಶುಲ್ಕವನ್ನು ಶೇ.10ರಷ್ಟುಹೆಚ್ಚಳ ಮಾಡಲು ಅನುಮತಿಸಿ ಸರ್ಕಾರ ಆದೇಶಿಸಿದೆ.
ಆದರೆ, ಸರ್ಕಾರಿ ಕಾಲೇಜುಗಳು ಹಾಗೂ ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ಯಾವುದೇ ಶುಲ್ಕ ಹೆಚ್ಚಳ ಮಾಡಿಲ್ಲ.
ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸುಗಳ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಪ್ರತೀ ವರ್ಷದಂತೆ ಈ ವರ್ಷವೂ ಆಗಿರುವ ಒಪ್ಪಂದದ ಪ್ರಕಾರ 2023-24ನೇ ಸಾಲಿನ ಶುಲ್ಕ ನಿಗದಿ ಕುರಿತು ಇತ್ತೀಚೆಗೆ ಆದೇಶ ಮಾಡಲಾಗಿದೆ. ಆ ಪ್ರಕಾರ, ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನದ (ಕೆಪಿಸಿಎಫ್) ಸದಸ್ಯ ಕಾಲೇಜುಗಳಲ್ಲಿನ ಖಾಸಗಿ ಕೋಟಾದ ಸೀಟುಗಳ ಶುಲ್ಕದಲ್ಲಿ ಮಾತ್ರ ಶೇ. 10 ಏರಿಕೆ ಮಾಡಲಾಗಿದೆ. ಇದರಿಂದ ಕಳೆದ ಸಾಲಿನಲ್ಲಿ 9,81,956 ರು. ಇದ್ದ ಖಾಸಗಿ ಕೋಟಾದ ವೈದ್ಯಕೀಯ ಸೀಟುಗಳ ಶುಲ್ಕ ಈಗ 10,80,152 ರು.ಗೆ ಏರಿಕೆಯಾಗಿದೆ. ಅದೇ ರೀತಿ 6,66,023 ರು. ಇದ್ದ ಖಾಸಗಿ ಕೋಟಾದ ದಂತ ವೈದ್ಯಕೀಯ ಕೋರ್ಸುಗಳ ಶುಲ್ಕ ಈಗ 7,32,625 ರು.ಗೆ ಏರಿಕೆಯಾಗಿದೆ.
ಯುವ ನಿಧಿ ಯೋಜನೆಗೆ ಬಜೆಟ್‌ನಲ್ಲಿ 2500 ಕೋಟಿ ಬೇಕು: ಸಚಿವ ಶರಣ ಪ್ರಕಾಶ್ ಪಾಟೀಲ್
ಹಿಂದಿನ ವರ್ಷ ಖಾಸಗಿ ಕೋಟಾ ಸೀಟುಗಳ ಶುಲ್ಕವನ್ನು ಏರಿಕೆ ಮಾಡದ ಹಿನ್ನೆಲೆಯಲ್ಲಿ ಈ ವರ್ಷ ಶೇ.20ರಷ್ಟುಶುಲ್ಕ ಹೆಚ್ಚಳಕ್ಕೆ ಕಾಲೇಜುಗಳು ಬೇಡಿಕೆ ಇಟ್ಟಿದ್ದವು. ಆದರೆ, ಸರ್ಕಾರ ಶೇ.10ರಷ್ಟುಶುಲ್ಕ ಹೆಚ್ಚಳಕ್ಕೆ ಒಪ್ಪಿಗೆ ನೀಡಿತ್ತು. ಅದರಂತೆ ಆದೇಶ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸರ್ಕಾರಿ ಕೋಟಾ ಸೀಟುಗಳ ಶುಲ್ಕ ಏರಿಕೆ ಇಲ್ಲ:
ಉಳಿದಂತೆ, ಸರ್ಕಾರಿ ಕಾಲೇಜುಗಳಲ್ಲಿನ ಸೀಟುಗಳು ಹಾಗೂ ಇನ್ನುಳಿದ ಎಲ್ಲಾ ಮಾದರಿ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಸರ್ಕಾರಿ ಕೋಟಾದ ವೈದ್ಯಕೀಯ, ದಂತ ವೈದ್ಯಕೀಯ ಸೀಟುಗಳ ಶುಲ್ಕದಲ್ಲಿ ಯಥಾಸ್ಥಿತಿ ಕಾಪಾಡಲಾಗಿದೆ.
ಹಾಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳಿಗೆ ಕಳೆದ ಸಾಲಿನಂತೆ 50 ಸಾವಿರ ರು. ಮತ್ತು ದಂತ ವೈದ್ಯಕೀಯ ಸೀಟುಗಳಿಗೆ 40 ಸಾವಿರ ರು. ಇರಲಿದೆ. ಅದೇ ರೀತಿ, ಇತರೆ ಖಾಸಗಿ ಕಾಲೇಜುಗಳು ಮತ್ತು ಖಾಸಗಿ ವಿವಿಗಳಲ್ಲಿನ ಸರ್ಕಾರಿ ಕೋಟಾದ ವೈದ್ಯ ಸೀಟುಗಳಿಗೆ 1,28,746 ರು. ಮತ್ತು ದಂತ ವೈದ್ಯ ಸೀಟುಗಳ ಶುಲ್ಕ 83,358 ರು. ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.
ಖಾಸಗಿ ವಿವಿಗಳ ಶುಲ್ಕ ಎಷ್ಟು?
ಇನ್ನು ರಾಜ್ಯ ಸರ್ಕಾರದೊಂದಿಗೆ ಯಾವುದೇ ಒಡಂಬಡಿಕೆಗೆ ಒಳಪಡದ ವಿವಿಧ ಖಾಸಗಿ ವಿಶ್ವವಿದ್ಯಾಲಯಗಳ ಖಾಸಗಿ ಕೋಟಾ, ಎನ್‌ಆರ್‌ಐ ಮತ್ತು ಇತರೆ ಕೋಟಾ ಸೀಟುಗಳ ಶುಲ್ಕವನ್ನೂ ಆಯಾ ವಿವಿಗಳು ನಿಗದಿಪಡಿಸಿ ನೀಡಿರುವಂತೆ ಸರ್ಕಾರ ಪ್ರಕಟಿಸಿದೆ.
ಚಿತ್ರದುರ್ಗ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ಲಾನ್ ರೂಪಿಸಿ: ಅಧಿಕಾರಿಗಳಿಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ಖಡಕ್ ವಾರ್ನ್
ಅದರಂತೆ ಬೆಂಗಳೂರಿನ ಸೇಂಟ್ ಜಾನ್ಸ್ ವಿವಿಯ ಖಾಸಗಿ ಕೋಟಾ ಸೀಟುಗಳ ಶುಲ್ಕ 7.76 ಲಕ್ಷ ರು., ನಾಗಮಂಗಲದ ಆದಿಚುಂಚನಗಿರಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಎಂಎಸ್)ನ ಖಾಸಗಿ ಕೋಟಾ ಸೀಟುಗಳ ಶುಲ್ಕ 20 ಲಕ್ಷ ರು., ಎನ್‌ಆರ್‌ಐ ಹಾಗೂ ಇತರೆ ಕೋಟಾ ಸೀಟಿಗೆ 36 ಲಕ್ಷ ರು., ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಮೆಡಿಕಲ್‌ನಲ್ಲಿ(ಎಸ್‌ಡಿಎಂ) ಖಾಸಗಿ ಕೋಟಾ ಸೀಟಿಗೆ 20 ಲಕ್ಷ ರು., ಎನ್‌ಆರ್‌ಐ ಹಾಗೂ ಇತರೆ ಕೋಟಾಗೆ 30 ಲಕ್ಷ ರು., ಕಲಬುರಗಿಯ ಖಾಜಾ ಬಂದನವಾಜ್ ವಿಶ್ವವಿದ್ಯಾಲಯದಲ್ಲಿ ಖಾಸಗಿ ಕೋಟಾ ಸೀಟಿಗೆ 16.14 ಲಕ್ಷ ರು., ಎನ್‌ಆರ್‌ಐ ಮತ್ತು ಇತರೆ ಕೋಟಾ ಸೀಟಿಗೆ 32 ಲಕ್ಷ ರು., ಬೆಂಗಳೂರಿನ ಡಾ.ಚಂದ್ರಮ್ಮ ದಯಾನಂದಸಾಗರ್ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸಚ್‌ರ್‍ನಲ್ಲಿ (ಸಿಡಿಎಸ್‌ಎನ್‌ಇಆರ್) ಖಾಸಗಿ ಕೋಟಾ ಸೀಟಿಗೆ 20 ಲಕ್ಷ ರು., ಎನ್‌ಆರ್‌ಐ ಹಾಗೂ ಇತರೆ ಕೋಟಾ ಸೀಟಿಗೆ 40 ಲಕ್ಷ ರು. ಶುಲ್ಕ ನಗದಿಪಡಿಸಲಾಗಿದೆ. ಉಳಿದಂತೆ ಈ ವಿವಿಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ಶುಲ್ಕ ಇತರೆ ಖಾಸಗಿ ವಿವಿಗಳಂತೆ 1,28,746 ರು. ಇರಲಿದೆ ಎಂದು ತಿಳಿಸಿದೆ.