ವರದಿ : ಶ್ರೀಕಾಂತ್‌ ಎನ್‌. ಗೌಡಸಂದ್ರ

 ಬೆಂಗಳೂರು (ಮೇ.31):  ಕೋವಿಡ್‌ ಲಸಿಕೆಗೆ ಭರ್ಜರಿ ಬೇಡಿಕೆ ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ಒಟ್ಟು ಲಸಿಕೆ ಪೈಕಿ ಶೇ.25ರಷ್ಟನ್ನು ಮಾತ್ರ ಖಾಸಗಿ ಕಂಪನಿಗಳಿಗೆ ಪೂರೈಸಬೇಕು ಎಂಬ ಮಿತಿ ತೆಗೆದು ಹಾಕಿಸುವ ಪ್ರಬಲ ಪ್ರಯತ್ನವನ್ನು ಖಾಸಗಿ ಆಸ್ಪತ್ರೆಗಳು ಆರಂಭಿಸಿವೆ. ಅಷ್ಟೇ ಅಲ್ಲ, ಲಸಿಕಾ ಉತ್ಪಾದನಾ ಕಂಪನಿಗಳು ಬೇಡಿಕೆಯಷ್ಟು ಲಸಿಕೆ ಪೂರೈಸುತ್ತಿಲ್ಲವಾದ ಕಾರಣ ವಿದೇಶಗಳಿಂದಲೂ ಲಸಿಕೆ ಆಮದು ಮಾಡಿಕೊಳ್ಳಲು ಮುಂದಾಗಿವೆ!

ಲಸಿಕೆ ಉತ್ಪಾದನಾ ಸಂಸ್ಥೆಗಳು ದೇಶದಲ್ಲಿ ಉತ್ಪಾದಿಸುವ ಲಸಿಕೆಯಲ್ಲಿ ಶೇ. 75ರಷ್ಟನ್ನು ಸರ್ಕಾರಕ್ಕೂ ಹಾಗೂ ಶೇ. 25ರಷ್ಟನ್ನು ಖಾಸಗಿಯವರಿಗೆ ನೀಡಬೇಕು. ರಾಜ್ಯ ಸರ್ಕಾರ ಮಾತ್ರವೇ ಲಸಿಕೆ ಅಭಿಯಾನ ನಡೆಸಿದರೆ ವರ್ಷಗಳೇ ಕಳೆದರೂ ಎಲ್ಲರಿಗೂ ವ್ಯಾಕ್ಸಿನ್‌ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗಳಿಗೆ ವಿಧಿಸಿರುವ ಶೇ.25ರ ಪೂರೈಕೆ ಮಿತಿಯನ್ನು ತೆಗೆಯಬೇಕು ಎಂಬುದು ಖಾಸಗಿ ಆಸ್ಪತ್ರೆಗಳ ವಾದ.

ನಿರ್ಲಕ್ಷ್ಯದ ಪರಮಾವಧಿ: ಕೊರತೆ ಇದ್ದರೂ ಲಸಿಕೆ ಹಾಳು ಮಾಡುತ್ತಿವೆ ರಾಜ್ಯಗಳು!

ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸದಾನಂದಗೌಡ ಅವರನ್ನು ಭೇಟಿ ಮಾಡಿದ್ದ ಖಾಸಗಿ ಆಸ್ಪತ್ರೆಗಳ ಸಂಘ (ಫನಾ)ದ ನಿಯೋಗ ಈ ಕುರಿತು ಮನವಿಯೊಂದನ್ನು ಸಲ್ಲಿಸಿದೆ. ಇದಕ್ಕೆ ಸದಾನಂದಗೌಡರು ಮಿತಿಯನ್ನು ತೆಗೆಯಲು ಕೇಂದ್ರದ ಜತೆ ಮಾತನಾಡಿ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಫನಾ ಅಧ್ಯಕ್ಷ ಡಾ. ಪ್ರಸನ್ನ ಹೇಳಿದ್ದಾರೆ.

ಇನ್ನು ಖಾಸಗಿ ಆಸ್ಪತ್ರೆಗಳಿಗೆ ತ್ವರಿತವಾಗಿ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಸಿಕೆ ಪೂರೈಸಲು ಸೀರಂ ಇನ್‌ಸ್ಟಿಟ್ಯೂಟ್‌ ಹಾಗೂ ಭಾರತ್‌ ಬಯೋಟೆಕ್‌ ನಿರಾಕರಿಸಿವೆ. ಕನಿಷ್ಠ ಎರಡು ತಿಂಗಳು ಕಾಯುವಂತೆ ತಿಳಿಸಿವೆ. ಈ ಹಿನ್ನೆಲೆಯಲ್ಲಿ ಫನಾ ಕೋವಿಶೀಲ್ಡ್‌ನ ಸಂಶೋಧಕರಾಗಿರುವ ಆಕ್ಸ್‌ಫರ್ಡ್‌- ಆಸ್ಟ್ರಾಜೆನೆಕಾ ಜತೆ ಮಾತುಕತೆ ನಡೆಸಿದೆ. ಈ ಮಾತುಕತೆಯ ಫಲಶ್ರುತಿಯಾಗಿ ಆಸ್ಟ್ರಾಜೆನೆಕಾ ಸಂಸ್ಥೆಯು ಕೇವಲ ಎರಡು ವಾರದಲ್ಲಿ 10 ಲಕ್ಷ ಕೋವಿಶೀಲ್ಡ್‌ ಲಸಿಕೆ ಪೂರೈಸುವ ಭರವಸೆ ನೀಡಿದೆ. ಜತೆಗೆ, ಮುಂದಿನ ದಿನಗಳಲ್ಲಿ 50 ಲಕ್ಷ ಡೋಸ್‌ ಲಸಿಕೆ ಪೂರೈಸಲು ತಾನು ಸಿದ್ಧವಿರುವುದಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಫನಾ ಮತ್ತು ಆಸ್ಟ್ರಾಜೆನೆಕಾ ಮುಂದಿನ ವಾರದಲ್ಲಿ 10 ಲಕ್ಷ ಡೋಸ್‌ ಲಸಿಕೆ ಮಾರಾಟ ಬಗ್ಗೆ ಒಪ್ಪಂದ ಮಾಡಿಕೊಳ್ಳಲಿವೆ.

3 ಲಕ್ಷ ಮಂದಿ ಕೋವ್ಯಾಕ್ಸಿನ್‌ಗೆ ಕಾಯುತ್ತಿದ್ದಾರೆ:

ಕೋವ್ಯಾಕ್ಸಿನ್‌ ಉತ್ಪಾದನೆ ಕಡಿಮೆ ಇದ್ದು ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ತೀವ್ರ ಕೊರತೆ ಕಾಡುತ್ತಿದೆ. ರಾಜ್ಯದಲ್ಲಿ ಬರೋಬ್ಬರಿ 3 ಲಕ್ಷ ಮಂದಿ ಕೋವ್ಯಾಕ್ಸಿನ್‌ ಲಸಿಕೆ ಸಿಗದೆ ಪರದಾಡುತ್ತಿದ್ದಾರೆ. ಇವರು ಕನಿಷ್ಠ ಇನ್ನೂ ಒಂದು ವಾರ ಲಸಿಕೆಗೆ ಕಾಯಬೇಕಿದೆ. ಅ ನಂತರವೂ ಎಲ್ಲರಿಗೂ ಸಿಗುವುದು ಅನುಮಾನ. ಕೋವ್ಯಾಕ್ಸಿನ್‌ ಲಸಿಕೆ ಮೊದಲ ಡೋಸ್‌ ಪಡೆದು ನಾಲ್ಕರಿಂದ ಆರು ವಾರದೊಳಗೆ (28-42 ದಿನ) ಒಳಗಾಗಿ ಎರಡನೇ ಡೋಸ್‌ ಪಡೆಯಬೇಕು. ಸದ್ಯ ರಾಜ್ಯದಲ್ಲಿ ಮೊದಲ ಡೋಸ್‌ ಪಡೆದು ಏಳು ವಾರ ಪೂರ್ಣಗೊಂಡವರ ಸಂಖ್ಯೆ 2,95,795 ಇದೆ. ಈ ಪೈಕಿ 1 ಲಕ್ಷ ಮಂದಿಗೆ 8 ವಾರ ಪೂರ್ಣಗೊಂಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಖಾಸಗಿ ಕಂಪನಿಗಳಿಂದ ಪ್ರತಿ ಡೋಸ್‌ಗೆ 1200 ರು. ವಸೂಲಿ

ಕೇಂದ್ರ ಸರ್ಕಾರದ ಅನುಮತಿಯಂತೆ ಈಗಾಗಲೇ ಲಸಿಕಾ ಉತ್ಪಾದಕ ಕಂಪನಿಗಳು ವ್ಯಾಕ್ಸಿನ್‌ ದರ ನಿಗದಿ ಮಾಡಿವೆ. ಸೀರಂ ಇನ್‌ಸ್ಟಿಟ್ಯೂಟ್‌ (ಕೋವಿಶೀಲ್ಡ್‌) ತನ್ನ ಲಸಿಕೆಗೆ ಖಾಸಗಿಯವರಿಗೆ ಪ್ರತಿ ಡೋಸ್‌ಗೆ 600 ರು. ಹಾಗೂ ರಾಜ್ಯ ಸರ್ಕಾರಗಳಿಗೆ ಡೋಸ್‌ಗೆ 400 ರು. ನಿಗದಿ ಮಾಡಿದೆ.

ಇನ್ನು ಭಾರತ್‌ ಬಯೋಟೆಕ್‌ (ಕೋವ್ಯಾಕ್ಸಿನ್‌) ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್‌ಗೆ 1,200 ರು. ಹಾಗೂ ರಾಜ್ಯ ಸರ್ಕಾರಗಳಿಗೆ 600 ರು. ನಿಗದಿ ಮಾಡಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ಈವರೆಗೆ ತಮಗೆ ಕಂಪನಿಗಳು ನೀಡುವ ಮೊತ್ತಕ್ಕೆ 100 ರು. ಮಾತ್ರ ಸೇವಾ ಶುಲ್ಕ ಪಡೆಯಲು ಅವಕಾಶವಿತ್ತು. ಇದೀಗ ಮೊತ್ತವನ್ನು 200 ರು.ಗೆ ಪರಿಷ್ಕರಿಸಲಾಗಿದೆ. ಆದರೆ, ಬಹುತೇಕ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್‌ ಲಸಿಕೆಗೆ 950 ರು.ಗಳಿಂದ 1,200 ರು.ವರೆಗೆ ವಸೂಲಿ ಮಾಡಲಾಗುತ್ತಿದೆ. ಲಸಿಕೆ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.

ದುಬಾರಿ ಶುಲ್ಕ ಸ್ವೀಕರಿಸದಂತೆ ಮಾರ್ಗಸೂಚಿ- ಫನಾ

ಈ ಹಿನ್ನೆಲೆಯಲ್ಲಿ ಲಸಿಕೆಗೆ ದುಬಾರಿ ಶುಲ್ಕ ವಿಧಿಸದಂತೆ ಖಾಸಗಿ ಆಸ್ಪತ್ರೆಗಳಿಗೆ ಸೋಮವಾರ ಸಲಹಾ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಲಸಿಕೆ ಉತ್ಪಾದಕರಿಂದ ನೀವು ಖರೀದಿಸಿರುವ ಮೊತ್ತಕ್ಕೆ 200 ರು. ಸೇವಾ ಶುಲ್ಕ ಸೇರಿಸಿ ಮಾತ್ರ ಲಸಿಕೆ ನೀಡಬೇಕು ಎಂದು ಸ್ಪಷ್ಟಮಾರ್ಗಸೂಚಿ ಹೊರಡಿಸಲಾಗುವುದು ಎಂದು ಪ್ರಸನ್ನ ಸ್ಪಷ್ಟಪಡಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona