ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇರುವುದರಿಂದಲೇ ನೆರೆಯ ದೇಶಗಳಂತಹ ಪರಿಸ್ಥಿತಿ ಭಾರತದಲ್ಲಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್ ಬಂದ ಮೇಲೆ ಗಲಾಟೆ ಹೆಚ್ಚಿದೆ ಎಂದು ಕೂಡ ಅವರು ಆರೋಪಿಸಿದ್ದಾರೆ.
ಮೈಸೂರು ಸೆ.12): ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಇರುವುದರಿಂದಲೇ ನೆರೆಯ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದಂತಹ ಪರಿಸ್ಥಿತಿ ಇಲ್ಲಿ ಸೃಷ್ಟಿಯಾಗಿಲ್ಲ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಮೋದಿ ಮತ್ತು ಅಮಿತ್ ಶಾ ಅವರಿಂದ ದೇಶ ಇಬ್ಭಾಗವಾಗುತ್ತಿದೆ ಎಂಬ ಕಾಂಗ್ರೆಸ್ಸಿಗರ ಹೇಳಿಕೆಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ದೇಶದ ರಕ್ಷಣೆಗಾಗಿ ಮೋದಿಯವರಂತಹ ಸಮರ್ಥ ನಾಯಕರಿದ್ದಾರೆ. ಮೋದಿ-ಶಾ ಇಲ್ಲದಿದ್ದರೇ ಕಾಂಗ್ರೆಸ್‌ನವರು ನೆರೆಯ ದೇಶಗಳಲ್ಲಿ ಆಗಿರುವಂತೆಯೇ ಮಾಡುತ್ತಿದ್ದರು ಎಂದು ಹರಿಹಾಯ್ದರು.
ಇದನ್ನೂ ಓದಿ: ಜೆಸಿಬಿ ಚಿಹ್ನೆ ಅಡಿ ಕರ್ನಾಟಕ ಹಿಂದೂ ಪಕ್ಷ ಕಟ್ಟಿ ಸಿಎಂ ಆಗುವೆ: ವಕ್ಫ್ ಹಣ ಗೋರಕ್ಷಣೆಗೆ: ಯತ್ನಾಳ್
ಮಂಡ್ಯದಲ್ಲಿ ಕಾಂಗ್ರೆಸ್ ಬಂದ ಮೇಲೆ ಗಲಾಟೆ ಹೆಚ್ಚಿದೆ
ಬಿಜೆಪಿ ನೆಲೆ ವಿಸ್ತರಣೆಗಾಗಿ ಮದ್ದೂರಿನಲ್ಲಿ ಗಲಭೆ ಸೃಷ್ಟಿಸಿದೆ ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಚಲುವರಾಯಸ್ವಾಮಿ ಅವರು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಕೆರಗೋಡಿನಲ್ಲಿ ತ್ರಿವರ್ಣ ಧ್ವಜ ಕೆಳಗಿಳಿಸುವ ಕೆಲಸ ಮಾಡಿದರು. ನಾಗಮಂಗಲದಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಯಿತು. ಈಗ ಮದ್ದೂರಿನಲ್ಲಿ ಗಲಭೆಯಾಗಿದೆ. ಈ ಮೊದಲು ಜೆಡಿಎಸ್ ಶಾಸಕರಿದ್ದಾಗ ಯಾವುದೇ ಗಲಭೆ ನಡೆದಿರಲಿಲ್ಲ. ಕಾಂಗ್ರೆಸ್ ಶಾಸಕರು ಬಂದ ನಂತರ ಗಲಾಟೆಗಳಾಗುತ್ತಿವೆ ಎಂದು ಆರೋಪಿಸಿದರು.
