ಬಿಜೆಪಿ ತಮ್ಮನ್ನು ಗೌರವಿಸದಿದ್ದರೆ ಹೊಸ ಪಕ್ಷ ಕಟ್ಟುವುದಾಗಿ ಶಾಸಕ ಯತ್ನಾಳ್ ಬೆದರಿಕೆ ಹಾಕಿದ್ದಾರೆ. ಸಿಎಂ ಆದರೆ ಮುಸ್ಲಿಮರ ಮೀಸಲಾತಿ ರದ್ದು ಮಾಡಿ ಹಿಂದೂಗಳಿಗೆ ಹಂಚುವುದಾಗಿಯೂ ಹೇಳಿದ್ದಾರೆ. ಅಕ್ರಮ ಮಸೀದಿಗಳನ್ನು ಕೆಡವುವುದಾಗಿಯೂ ಘೋಷಿಸಿದ್ದಾರೆ.
ಮಂಡ್ಯ/ಮದ್ದೂರು (ಸೆ.12): ಬಿಜೆಪಿಯವರು ನಮ್ಮನ್ನು ಗೌರವಯುತವಾಗಿ ತೆಗೆದುಕೊಳ್ಳದಿದ್ದರೆ ಜೆಸಿಬಿ ಗುರುತಿನ ಕರ್ನಾಟಕ ಹಿಂದೂ ಪಕ್ಷ ಹೆಸರಿನಲ್ಲಿ ಹೊಸ ಪಕ್ಷ ಕಟ್ಟುವೆ. ನಾವು ಅಧಿಕಾರಕ್ಕೆ ಬಂದರೆ ನಾನು ಸಿಎಂ ಆಗಿ ಮುಸ್ಲಿಮರ ಮೀಸಲಾತಿ ತೆಗೆದು ಹಿಂದೂಗಳಿಗೆ ಹಂಚುತ್ತೇನೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಗುರುವಾರ ಮದ್ದೂರಿಗೆ ಭೇಟಿ ನೀಡಿದಾಗ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಕರ್ನಾಟಕ ಬಿಜೆಪಿಯವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅದಕ್ಕೇ ಅವರು ಹಿಂದೂಗಳ ಪರ ಗಟ್ಟಿಯಾಗಿ ಮಾತನಾಡುವುದಿಲ್ಲ. ಮಾಜಿ ಸಂಸದ ಪ್ರತಾಪ್ ಸಿಂಹ ನಾವೆಲ್ಲಾ ಹಿಂದೂಗಳ ಪರವಾಗಿ ಗಟ್ಟಿಯಾಗಿ ಮಾತಾನಾಡುತ್ತೇವೆ. ನಾವು ಪ್ರತಾಪ್ ಒಂದಾಗಿ ಹೊಸ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಗಳ ಪರವಾಗಿ ಹೋರಾಡುವವನು ಮುಂದಿನ ಕರ್ನಾಟಕದ ಸಿಎಂ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅಕ್ರಮವಾಗಿ ಕಟ್ಟಿದ ಮಸೀದಿಗಳನ್ನೆಲ್ಲಾ ಕೆಡವಲಾಗುವುದು. ಮಸೀದಿ ಮುಂದೆ ಒಂದು ಗಂಟೆ ಡ್ಯಾನ್ಸ್ ಮಾಡಲು ಅವಕಾಶ ಕೊಡುತ್ತೇನೆ. 2028ಕ್ಕೆ ಎಲ್ಲರೂ ವಿಧಾನಸೌಧದ ಮುಂದೆ ಭಗವಧ್ವಜ ತರ್ತೀರಾ? ನನ್ನನ್ನು ಕರ್ನಾಟಕ ಸಿಎಂ ಮಾಡ್ತೀರಾ? ಎಂದು ನೆರೆದಿದ್ದ ಕಾರ್ಯಕರ್ತರನ್ನು ಪ್ರಶ್ನಿದರು.
ಅಂಬೇಡ್ಕರ್ ಹೇಳಿದ್ದು ಸತ್ಯ:
ನಾನು ಅಧಿಕಾರಕ್ಕೆ ಬಂದರೆ ಗೋ ಹತ್ಯೆ ಮಾಡುವವರನ್ನು ಜೈಲಿಗಟ್ಟುತ್ತೇನೆ. ವಕ್ಫ್‌ಗೆ ನೀಡುವ ಅನುದಾನವನ್ನು ಗೋರಕ್ಷಕರಿಗೆ ನೀಡುತ್ತೇನೆ. ಹಿಂದೂಗಳ ಹಣ ಹಿಂದೂಗಳ ದೇವಾಲಯ ಅಭಿವೃದ್ಧಿಗೆ ಮಾತ್ರ ಮೀಸಲಿರಬೇಕು. ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನಕ್ಕೆ, ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ಭಾರತಕ್ಕೆ ಕರೆತರಬೇಕು ಎಂದಿದ್ದರು ಅಂಬೇಡ್ಕರ್. ಮದ್ದೂರಿನ ಘಟನೆ ನೋಡಿದರೆ ಅಂಬೇಡ್ಕರ್ ಹೇಳಿದ್ದು ಸತ್ಯ ಎನಿಸುತ್ತದೆ ಎಂದು ಯತ್ನಾಳ್ ಹೇಳಿದರು.
