ಪಾಕಿಸ್ತಾನದ ಸೇನಾ ಪ್ರಭಾವದಿಂದಾಗಿ ಮತ್ತೆ ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಭಾರತ ಭಯೋತ್ಪಾದನೆ ವಿರುದ್ಧ ಬಲವಾದ ನಿಲುವು ತೆಗೆದುಕೊಂಡಿದ್ದು, ಸೇನೆಗೆ ಮುಕ್ತ ಹಸ್ತ ನೀಡಲಾಗಿದೆ. ಭಯೋತ್ಪಾದನೆಯನ್ನು ಯುದ್ಧವೆಂದು ಪರಿಗಣಿಸಿ ಪ್ರತಿಕ್ರಿಯಿಸಲಾಗುವುದು. ಭಾರತೀಯ ಸೇನೆ ಲಾಂಚ್ ಪ್ಯಾಡ್‌ಗಳು ಮತ್ತು ಅಡಗುತಾಣಗಳನ್ನು ಧ್ವಂಸಗೊಳಿಸಿದೆ. ಆಪರೇಷನ್ ಸಿಂದೂರ್ ಮುಂದುವರಿಯುವ ಎಚ್ಚರಿಕೆ ನೀಡಲಾಗಿದೆ.
ಹುಬ್ಬಳ್ಳಿ (ಮೇ 11): ಪಾಕಿಸ್ತಾನದಲ್ಲಿ ಸೈನ್ಯವೇ ಪ್ರಬಲವಾಗಿದೆ. ಅಲ್ಲಿ ಚುನಾಯಿತ ಸರ್ಕಾರದ ಮಾತು ಕೇಳುವ ಪರಿಸ್ಥಿತಿ ಇಲ್ಲ. ಈ ಕಾರಣದಿಂದಲೇ ಮತ್ತೆ ಕದನ ವಿರಾಮ ಉಲ್ಲಂಘನೆ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿರುವ ಕುರಿತು ಹುಬ್ಬಳ್ಳಿಯಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಭಯೋತ್ಪಾದನೆಯ ವಿರುದ್ಧ ಈ ಬಾರಿ ಬಲವಾದ ನಿಲುವು ತೆಗೆದುಕೊಂಡಿದೆ. 'ಇದು ಮೊದಲ ಬಾರಿಗೆ ನಮ್ಮ ರಕ್ಷಣಾ ಪಡೆಗಳಿಗೆ ಹಾಗೂ ಸೇನಾ ಮುಖ್ಯಸ್ಥರಿಗೆ ಮುಕ್ತ ಹಸ್ತ (ಫ್ರೀ ಹ್ಯಾಂಡ್) ನೀಡಲಾಗಿದೆ. ಕಳೆದ 30–40 ವರ್ಷಗಳಿಂದ ಭಾರತದಲ್ಲಿ ಭಯೋತ್ಪಾದನೆ ನಡೆಯುತ್ತಿದ್ದರೂ, ಈ ಮಟ್ಟದ ಪ್ರತಿಕ್ರಿಯೆ ಮೊದಲು ಕಂಡಿರಲಿಲ್ಲ ಎಂದರು.
ಭಯೋತ್ಪಾದನೆ ನಿಗ್ರಹಕ್ಕೆ ಯುದ್ಧದಷ್ಟೇ ಮಹತ್ವ: 'ಈ ಬಾರಿ ಸರ್ಕಾರವು ಭಯೋತ್ಪಾದನೆಯನ್ನೇ ಯುದ್ಧವೆಂದು ಪರಿಗಣಿಸಿದೆ. ಇನ್ನು ಮುಂದೆ ಭಾರತದ ಮೇಲೆ ಭಯೋತ್ಪಾದನಾ ದಾಳಿ ನಡೆಸಿದರೆ, ಅದಕ್ಕೆ ಯುದ್ಧದಂತೆ ಪ್ರತಿಕ್ರಿಯೆ ನೀಡಲಾಗುತ್ತದೆ' ಎಂದು ಅವರು ಎಚ್ಚರಿಸಿದರು. ಪಾಕಿಸ್ತಾನ ಮಾಧ್ಯಮಗಳ ವರದಿಯ ಪ್ರಕಾರ, ಭಾರತದ ದಾಳಿಯಿಂದ ಭಾರತಕ್ಕೆ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಕುಟುಂಬಗಳು ಹತವಾಗಿವೆ ಎಂಬುದು ಬಹಿರಂಗವಾಗಿದೆ. ಲಾಂಚ್ ಪ್ಯಾಡ್‌ಗಳು ಮತ್ತು ಅಡಗು ತಾಣಗಳನ್ನು ಧ್ವಂಸಗೊಳಿಸಲು ಭಾರತೀಯ ಸೇನೆ ಯಶಸ್ವಿಯಾಗಿದೆ. ಈ ಎಲ್ಲಾ ಕಾರ್ಯಾಚರಣೆಗಳು ಪಾಕಿಸ್ತಾನದ ಪ್ರಚೋದನೆಗೆ ತೀವ್ರ ಪ್ರತಿಕ್ರಿಯೆಯಾಗಿದೆ ಎಂದು ಜೋಶಿ ಹೇಳಿದರು.
ಮೊದಲ ದಿನವೇ 9ಕ್ಕೂ ಅಧಿಕ ತಾಣಗಳ ಮೇಲೆ ದಾಳಿ:
ಈ ಬಾರಿ ಮೊದಲ ದಿನವೇ 9ಕ್ಕೂ ಹೆಚ್ಚು ಲಾಂಚ್ ಪ್ಯಾಡ್‌ಗಳ ಮೇಲೆ ದಾಳಿ ನಡೆಸಲಾಗಿದೆ. ನೇರವಾಗಿ ಪಾಕ್ ಸೇನೆಯ ಅಡಗು ತಾಣಗಳ ಗುರಿಯಾಗಿವೆ. ಈ ಮೊದಲು ಇಂತಹ ದಾಳಿಗಳಿಗೆ ಭಾರತ ಸೌಮ್ಯವಾಗಿ ಪ್ರತಿಕ್ರಿಯಿಸುತ್ತಿತ್ತು. ಈಗ ಮೋದಿಯವರ ನೇತೃತ್ವದಲ್ಲಿ ದೇಶ ಒಂದುಗೂಡಿ, ಶಕ್ತಿಶಾಲಿ ನಿರ್ಧಾರ ತೆಗೆದುಕೊಂಡಿದೆ. ನಾವು ಭಾರತೀಯರು ಶಾಂತಿಯ ಪ್ರಿಯರು. ಆದರೆ ನಮ್ಮ ಮೇಲೆ ಬಂದು ದಾಳಿ ಮಾಡಿದರೆ, ನಾವು ಪ್ರತೀಕಾರ ತೆಗೆದುಕೊಳ್ಳುತ್ತೇವೆ ಎಂಬುದು ಈ ಘಟನೆಗಳಿಂದ ಸಾಬೀತಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಟೀಕೆಗಳಿಗೆ ಪ್ರತಿಕ್ರಿಯೆ ಇಲ್ಲ:
ಯುಪಿಎ ನಾಯಕರು ಕದನ ವಿರಾಮದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, 'ಅವರು ಏನು ಟ್ವೀಟ್ ಮಾಡಿದ್ದಾರೆ ಎಂಬುದರ ಬಗ್ಗೆ ನಾನು ಹೇಳೋದೇ ಇಲ್ಲ. ಆದರೆ, ಈ ಬಾರಿ ಭಾರತ ತನ್ನ ಶಕ್ತಿಯ ಪ್ರಭಾವವನ್ನು ತೋರಿಸಿದೆ. ಇನ್ನು ಅಂತರಾಷ್ಟ್ರೀಯ ಮಾತುಕತೆ: ಟ್ರಂಪ್ ಮಧ್ಯಸ್ಥಿಕೆ ಕುರಿತು ಮಾತನಾಡಿ, 'ಪಾಕಿಸ್ತಾನದ ಡಿಜಿಎಂ ನೇರವಾಗಿ ಭಾರತಕ್ಕೆ ಸಂಪರ್ಕಿಸಿದ ವರದಿಯ ಬಗ್ಗೆ ಮಾತನಾಡಿದಾಗ, ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಎಲ್ಲ ವಿವರಗಳನ್ನು ವಿದೇಶಾಂಗ ಮಂತ್ರಿ ಅಥವಾ ಇಲಾಖೆಯ ವಕ್ತಾರರು ನೀಡುತ್ತಾರೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಆಪರೇಷನ್ ಸಿಂದೂರ್ ಮುಕ್ತಾಯವಾಗಿಲ್ಲ ಎಂದು ಎಚ್ಚರಿಕೆ ಕೊಟ್ಟ ವಾಯುಪಡೆ: ಭಾರತ ಪಾಕಿಸ್ತಾನ ನಡುವೆ ನಡೆಯುತ್ತಿದ್ದ ಸಂಘರ್ಷವನ್ನು ತಡೆಗಟ್ಟಲು ಪಾಕಿಸ್ತಾನ ಸರ್ಕಾರ ಜಾಗತಿಕ ಮಟ್ಟದ ನಾಯಕರ ಬಳಿ ಹೋಗಿ ಕದನ ವಿರಾಮ ಪಡೆದುಕೊಂಡಿದೆ. ಆದರೆ, ಸರ್ಕಾರ ಮಾತನ್ನು ಕೇಳದ ಪಾಕಿಸ್ತಾನ ಸೇನೆ ಭಾರತದ ಮೇಲೆ ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ನೀಡಿರುವ ಭಾರತದ ವಾಯುಪಡೆ ನಾವು ಇನ್ನೂ ಆಪರೇಷನ್ ಸಿಂದೂರ್ ನಿಲ್ಲಿಸಿಲ್ಲ. ನೀವು ಇಂದು ಏನಾದರೂ ದಾಳಿ ಮಾಡಿದರೆ, ನಿಮಗೆ ಸೂಕ್ತ ತಿರುಗೇಟು ಕೊಡಲು ನಾವು ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆಯನ್ನು ರವಾನಿಸಿದೆ.


