ಇಂದು ಶಿವಮೊಗ್ಗ ಏರ್‌ಪೋರ್ಟ್ ಲೋಕಾರ್ಪಣೆ: ಬಿಎಸ್‌ವೈ 80ನೇ ಜನ್ಮದಿನದಂದೇ ಮೋದಿ ಉದ್ಘಾಟನೆ
ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣ ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 80ನೇ ಜನ್ಮದಿನವಾದ ಸೋಮವಾರ ಲೋಕಾರ್ಪಣೆಗೊಳ್ಳಲಿದೆ.
ಶಿವಮೊಗ್ಗ (ಫೆ.27): ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣ ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 80ನೇ ಜನ್ಮದಿನವಾದ ಸೋಮವಾರ ಲೋಕಾರ್ಪಣೆಗೊಳ್ಳಲಿದೆ. ಯಡಿಯೂರಪ್ಪ ಅವರ ಕನಸಿನ ಫಲವಾದ ಶಿವಮೊಗ್ಗ ಏರ್ಪೋರ್ಟ್ ರಾಜ್ಯದ 9ನೇ ಹಾಗೂ ದೇಶದ 148ನೇ ವಿಮಾನ ನಿಲ್ದಾಣ ಆಗಿದೆ. ರಾಜ್ಯದ ಎರಡನೇ ಅತಿ ಉದ್ದದ ರನ್‌ವೇ ಹೊಂದಿರುವ ಇದು, ಮಧ್ಯಕರ್ನಾಟಕದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಗೂ ಪಾತ್ರವಾಗಿದೆ.
ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಬೀದರ್(ಸದ್ಯಕ್ಕೆ ನಾಗರಿಕ ವಿಮಾನ ಓಡಾಡುತ್ತಿಲ್ಲ), ಬಳ್ಳಾರಿಯಲ್ಲಿ ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿವೆ. ಶಿವಮೊಗ್ಗ ವಿಮಾನ ನಿಲ್ದಾಣ 3,200 ಮೀಟರ್ ಉದ್ದದ ರನ್ ವೇ ಹೊಂದಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಹೊರತುಪಡಿಸಿರೆ ರಾಜ್ಯದಲ್ಲೇ ಇದು ಎರಡನೇ ಅತಿ ಉದ್ದದ ರನ್ ವೇ ಹೊಂದಿರುವ ಏರ್ಪೋರ್ಟ್ ಆಗಿದೆ. ಇದರಿಂದ ಏರ್‌ಬಸ್‌ನಂತಹ ದೊಡ್ಡ ವಿಮಾನಗಳೂ ಇಲ್ಲಿ ಇಳಿಯುವುದು ಸಾಧ್ಯವಾಗಲಿದೆ. ಜೊತೆಗೆ ರಾತ್ರಿಯೂ ಇಲ್ಲಿ ವಿಮಾನಗಳನ್ನು ಲ್ಯಾಂಡ್ ಮಾಡಬಹುದಾದ ವ್ಯವಸ್ಥೆ ಇದೆ.
10ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು: ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ?
4,320 ಚದರಡಿ ವಿಸ್ತೀರ್ಣದ ಪ್ಯಾಸೆಂಜರ್ ಟರ್ಮಿನಲ್ ಅನ್ನು ಈ ಏರ್ಪೋರ್ಟ್ ಹೊಂದಿದೆ. ಏರಿಯಲ್ ವ್ಯೂನಲ್ಲಿ ಕಮಲಾಕೃತಿಯಲ್ಲಿ ಕಾಣುವ ವಿಮಾನ ನಿಲ್ದಾಣದ ಒಂದು ಭಾಗವನ್ನು ಹತ್ತಿರದಲ್ಲಿ ವೀಕ್ಷಿಸಿದಾಗಲೂ ಕಮಲದ ದಳಗಳು ಕಾಣುವ ರೀತಿ ವಿನ್ಯಾಸಗೊಳಿಸಲಾಗಿದೆ. ಒಟ್ಟು 775 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಈ ವಿಮಾನ ನಿಲ್ದಾಣಕ್ಕೆ .449.22 ಕೋಟಿ ವೆಚ್ಚ ವೆಚ್ಚವಾಗಿದ್ದು, ಮೂಲ ಸೌಕರ್ಯದ ವೆಚ್ಚ ಸೇರಿ ಒಟ್ಟು .600 ಕೋಟಿ ವ್ಯಯ ಮಾಡಲಾಗಿದೆ.
ವಿಮಾನದಲ್ಲಿ ಬಂದಿಳಿದು ಉದ್ಘಾಟಿಸಲಿರುವ ಮೋದಿ: ಪ್ರಧಾನಿ ಮೋದಿ ಅವರು ವಿಮಾನದಲ್ಲಿ ಈ ಏರ್ಪೋರ್ಟ್‌ನಲ್ಲಿ ಬಂದಿಳಿಯುವ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸುವುದು ವಿಶೇಷ. ಈ ಮೂಲಕ ಶಿವಮೊಗ್ಗ ಏರ್ಪೋರ್ಟಲ್ಲಿ ಬಂದಿಳಿಯಲಿರುವ ಮೊದಲ ವಿಮಾನ ಪ್ರಧಾನಿ ಮೋದಿ ಅವರದ್ದೇ ಆಗಲಿದೆ. ಈಗಾಗಲೇ ವಿಮಾನ ಸೇವೆಗೆ ಸಂಬಂಧಿಸಿ ಇಂಡಿಗೋ ಸೇರಿ ಎರಡು ಕಂಪನಿಗಳ ಜತೆಗೆ ಮಾತುಕತೆ ನಡೆಯುತ್ತಿದ್ದು, ಹದಿನೈದರಿಂದ 20 ದಿನಗಳಲ್ಲಿ ಈ ಏರ್ಪೋರ್ಟ್ ಮೂಲಕ ಅಧಿಕೃತವಾಗಿ ಹಾರಾಟ ಆರಂಭವಾಗುವ ನಿರೀಕ್ಷೆ ಇದೆ.
ರಾಜ್ಯದ ಹಳ್ಳಿಗಳ ನಿಜವಾದ ಚಿತ್ರಣ ತಿಳಿದುಕೊಳ್ಳಲು ಪಂಚರತ್ನ ಯಾತ್ರೆ: ಎಚ್.ಡಿ.ಕುಮಾರಸ್ವಾಮಿ
ಬಿಎಸ್‌ವೈ ಕನಸು: ಸೋಗಾನೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಈ ವಿಮಾನ ನಿಲ್ದಾಣ ಯಡಿಯೂರಪ್ಪ ಅವರ ಕನಸಿನ ಫಲ. ಈ ವಿಮಾನ ನಿಲ್ದಾಣಕ್ಕೆ್ಕ ಹೆಸರಿಡುವ ವಿಚಾರದಲ್ಲಿ ಸಾಕಷ್ಟುಚರ್ಚೆಗಳು ನಡೆದವು. ಹತ್ತಾರು ಹೆಸರುಗಳೂ ಮುಂಚೂಣಿಗೆ ಬಂದಿದ್ದವು. ಈ ವಿಮಾನ ನಿಲ್ದಾಣದಲ್ಲಿ ಮಹತ್ವದ ಪಾತ್ರ ವಹಿಸಿದ, ಹಠ ಬಿಡದೆ ಯೋಜನೆ ಪೂರ್ಣಗೊಳಿಸಿದ ಯಡಿಯೂರಪ್ಪ ಅವರ ಹೆಸರಿಡುವಂತೆ ದೊಡ್ಡಮಟ್ಟದಲ್ಲಿ ಒತ್ತಡ ನಿರ್ಮಾಣವಾಗಿತ್ತು. ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಯಡಿಯೂರಪ್ಪ ಅವರ ಹೆಸರನ್ನೇ ಅಂತಿಮಗೊಳಿಸುವುದಾಗಿ ಪ್ರಕಟಿಸಿದ್ದರು. ಆದರೆ ಸ್ವತಃ ಯಡಿಯೂರಪ್ಪ ಅವರೇ ಇದನ್ನು ತಿರಸ್ಕರಿಸಿ ಕುವೆಂಪು ಹೆಸರಿಡಲು ಸೂಚಿಸಿದರು. ಹೀಗಾಗಿ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಕುವೆಂಪು ಹೆಸರಿಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.