ರಾಜ್ಯದ ಹಳ್ಳಿಗಳ ನಿಜವಾದ ಚಿತ್ರಣ ತಿಳಿದುಕೊಳ್ಳಲು ಪಂಚರತ್ನ ಯಾತ್ರೆ: ಎಚ್.ಡಿ.ಕುಮಾರಸ್ವಾಮಿ
ಮಾಜಿ ಸಿಎಂ, ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಭವಾನಿ ರೇವಣ್ಣರಿಗೆ ಟಿಕೆಟ್ ವಿಚಾರ ಕುರಿತು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗ (ಫೆ.23): ಮಾಜಿ ಸಿಎಂ, ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಭವಾನಿ ರೇವಣ್ಣರಿಗೆ ಟಿಕೆಟ್ ವಿಚಾರ ಕುರಿತು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷದ ಪರ ಅವರೆಲ್ಲರೂ ಪ್ರಚಾರಕ್ಕೆ ಹೊರಟಿದ್ದಾರೆ. ಪಕ್ಷವನ್ಮು ಸಂಘಟಿಸಲು ರೇವಣ್ಣ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸಿದ್ದಾರೆ. ಮುಂದಿನ ವಾರದಲ್ಲಿ ಹಾಸನ, ಶಿವಮೊಗ್ಗ ಸೇರಿದಂತೆ, ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಿದ್ದೇವೆ. ರಾಜ್ಯದ ಹಳ್ಳಿಗಳ ನಿಜವಾದ ಚಿತ್ರಣ ತಿಳಿದುಕೊಳ್ಳಲು ಪಂಚರತ್ನ ಯಾತ್ರೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಚುನಾವಣೆಯ ಪ್ರಕ್ರಿಯೆಗಳು ಸಮೀಪಿಸುತ್ತಿದೆ. ಎಲ್ಲಾ ಪಕ್ಷಗಳು ಚುನಾವಣಾ ತಯಾರಿಯಲ್ಲಿವೆ. ಜೆಡಿಎಸ್ ಪಕ್ಷದ ತಾಲೀಮು ಚೆನ್ನಾಗಿ ನಡೆಯುತ್ತಿದ್ದು, ಸಂಘಟಿಸಲಾಗುತ್ತಿದೆ. ಜನತೆ ಮುಂದೆ ಐದು ಕಾರ್ಯಕ್ರಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಜನತೆ ಮುಂದೆ ಇಟ್ಟಿದ್ದೆವೆ. 72 ಕ್ಷೇತ್ರಗಳಿಗೆ ಈಗಾಗಲೇ ಭೇಟಿ ಕೊಟ್ಟಿದ್ದೇನೆ. ಪಂಚರತ್ನ ಯಾತ್ರೆ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ನಾಡಿನ ನಿಜವಾದ ಬಡತನ, ದೇಶದ ಬದುಕಿನ ಬಗ್ಗೆ ಇತರರಿಗೆ ಚಿಂತನೆ ಇಲ್ಲ. ಕೆಲವಾರು ಕ್ಷೇತ್ರಗಳಲ್ಲಿ ಖಾಸಗಿಯವರು ದೇಶದ ಬೆಳವಣಿಗೆಗೆ ದೇಣಿಗೆ ನೀಡುವಂತಾಗಿದೆ. ಜಿಡಿಪಿ ಮೇಲೆ ಅವಲಂಬನೆಯಾದರೆ, ದೇಶದ ಬೆಳವಣಿಗೆ ಸಾಧ್ಯವಿಲ್ಲ ಎಂದರು.
ರಾಜಕೀಯ ಪಕ್ಷಗಳಿಗೆ ದೇಶದ ನಿಜವಾದ ಬಡತನದ ಬಗ್ಗೆ ಅರಿವಿಲ್ಲ: ಎಚ್.ಡಿ.ಕುಮಾರಸ್ವಾಮಿ
ಅದೆಷ್ಟೋ ಹಳ್ಳಿಗಳಿಗೆ ಈಗಲೂ ನೀರಿಲ್ಲ. ಜಲಜೀವನ್ ಮಿಷನ್ ರಾಜ್ಯದಲ್ಲಿ ಫೇಲ್ಯೂರ್ ಆಗಿದೆ. ರಾಜ್ಯ ಸರ್ಕಾರದ ಕೆಲವಾರು ಯೋಜನೆಗಳು, ಫಲಫ್ರದವಾಗಿಲ್ಲ. ಸ್ವಚ್ಛ ಭಾರತ ಮಿಷನ್ ಫೆಲ್ಯೂರ್ ಆಗಿದೆ. ತಲೆಗೊಂದು ಮುಂಡಾಸು, ಮನೆಗೊಂದು ಸಂಡಾಸು ಅಂತಾ ಸ್ಲೋಗನ್ ಹಾಕಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಸ್ಲೋಗನ್ ಹಾಕಿದ್ದಾರೆ. ಆದರೆ, ಈ ಯೋಜನೆ ಕೂಡ ಫೆಲ್ಯೂರ್ ಆಗಿದೆ. ಉಚಿತ ಶಿಕ್ಷಣ, ಉಚಿತ ಆರೋಗ್ಯ ನೀಡುವ ಯೋಜನೆ ನಾವು ಹಾಕಿಕೊಂಡಿದ್ದೆವೆ. ರಾಜ್ಯದ ಜನರಿಗೆ ಬೇಕಾಗಿರುವುದು ಇದೆ ಆಗಿದೆ. ರಾಜ್ಯದಲ್ಲಿ ನಾನು ತಿರುಗುವಾಗ ಅನೇಕ ಆರೋಗ್ಯ ಸಮಸ್ಯೆಗಳು ಕಂಡು ಬಂದಿವೆ ಎಂದು ತಿಳಿಸಿದರು.
ನಾನು ಅಷ್ಟು ದುಡ್ಡು ಎಲ್ಲಿಂದ ಇಟ್ಟುಕೊಂಡು ಓಡಾಡಲಿ. ಈ ಸಮಸ್ಯೆಗಳನ್ನು ನಿವಾರಿಸಲು ಎಲ್ಲಿಂದ ಅಷ್ಟು ಹಣ ತರಲಿ...? ನಾನೇನು ಆಸ್ಪತ್ರೆ, ಶಿಕ್ಷಣ ಸಂಸ್ಥೆ ಕಟ್ಟಿಲ್ಲ.ನನ್ನ ಬಳಿ ಇರುವುದೇ, 30, 40 ಎಕರೆ ಜಮೀನಿದೆ ಅಷ್ಟೇ. ಅದಕ್ಕೂ ಅನೇಕ ತಕರಾರಿದೆ. ಮುಖ್ಯಮಂತ್ರಿ ಆಗಿದ್ದು ಕೂಡ ನಾನು ಈ ಸಮಸ್ಯೆ ಬಗೆಹರಿಸಿಕೊಳ್ಳಲು ಆಗಿಲ್ಲ. ಈಗಿನ ಕಾನೂನುಗಳು ಹಾಗಿವೆ. ಹೀಗಾಗಿಯೇ 5 ಯೋಜನೆಗಳನ್ನು ಜಾರಿಗೆ ತರಲು ನಾನು ಹೊರಟಿದ್ದೇನೆ. ಬಡತನ ಹೋಗಲಾಡಿಸಲು, ಯುವಕರಿಗೆ ಉದ್ಯೋಗ, ಉಚಿತ ಆಸ್ಪತ್ರೆ ಚಿಕಿತ್ಸೆ, ಎಲ್ಲಿರಿಗೂ ಮನೆ ನೀಡುವ ಬಗ್ಗೆ ಪಂಚರತ್ನ ಯೋಜನೆ ಜಾರಿಗೆ ತರಲು ಯೋಜಿಸಿದ್ದೇನೆ. ಮಂಡ್ಯದಲ್ಲಿ ನಿನ್ನೆ ಯುವ ಮೋರ್ಚಾ ಸಮಾವೇಶದಲ್ಲಿ ಸಿ.ಟಿ. ರವಿ ನನ್ನ ಕುಟುಂಬದ ಬಗ್ಗೆ ಮಾತನಾಡುತ್ತಾನೆ. ಅವನೊಬ್ಬ ಮಹಾನುಭಾವ ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾನೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ರಾಷ್ಟ್ರೀಯ ಅಧ್ಯಕ್ಷ ರೈತರ ಸಾಲ ಮನ್ನಾ ಬಗ್ಗೆ ಮಾತನಾಡಿದ್ದಾನೆ.ಅವನಿಗೆ ರೈತರ ಸಮಸ್ಯೆ ಬಗ್ಗೆ ಎಷ್ಟು ಕಾಳಜಿ ಇದೆ. ಹಳೆ ಅಂಬಾಸಿಡರ್ ಕಾಲ ಹೋಗಿದೆ ಎನ್ನುತ್ತಾರೆ. ಈಗೇನಿದ್ದರೂ ಜಾಗ್ವಾರ್ ಮತ್ತು ರೇಂಜ್ ರೋವರ್ ಕಾಲವಂತೆ. ಜಾಗ್ವಾರ್, ರೇಂಜ್ ರೋವರ್ ನಂತೆ ಅಭಿವೃದ್ಧಿಯಾಗುತ್ತಿದೆಯಂತೆ. ಹೀಗಂತಾ ಸರ್ಕಾರದವರು ಹೇಳುತ್ತಿದ್ದಾರೆ. ಆದರೆ, ಇವರು ರಾಜ್ಯದ ಅಭಿವೃದ್ಧಿ ಮಾಡುತ್ತಿಲ್ಲ. ಅವರದೇ ಸ್ವಂತ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ಗೆ ಮತ ಹಾಕಿದರೆ ಎಟಿಎಂ ಗೆ ಮತ ಹಾಕಿದಂತೆ ಎನ್ನುತ್ತಿದ್ದಾರೆ. ಶಿವಮೊಗ್ಗದಲ್ಲಿಯೇ ಈಗ ಮೇಲಿನಿಂದ ಕ್ಯಾಮೆರಾ ಬಿಟ್ಟರೆ ಗೊತ್ತಾಗುತ್ತೆ ಎಷ್ಟು ಇವರ ಎಟಿಎಂ ಇದೆ ಅಂತಾ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ 120 ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸುತ್ತೆವೆ. ನಾವು 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುವುದಿಲ್ಲ. ನಮ್ಮದೇ ಸ್ವಂತ ಸರ್ಕಾರ ರಚನೆಗೆ ಎಷ್ಟು ಜಾಗ ಬೇಕು ಅಷ್ಟು ಹಾಕುತ್ತಿದ್ದೇವೆ ಎಂದ ಕುಮಾರಸ್ವಾಮಿ. ಇಬ್ಬರು ಅಧಿಕಾರಿಗಳ ಜಗಳ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದರು. ಸರ್ಕಾರ ಬಿಗಿ ಕ್ರಮ ತೆಗೆದುಕೊಂಡಿದ್ದರೆ ಹೀಗಾಗುತ್ತಿರಲಿಲ್ಲ. ಇಬ್ಬರನ್ನು ಸಸ್ಪೆಂಡ್ ಅಲ್ಲ, ಕೆಲಸದಿಂದಲೇ ತೆಗೆದು ಹಾಕಬೇಕು. ಅದರಲ್ಲೂ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ಅವರಿಬ್ಬರಿಗೆ ದೇವಮಾನವ ಎನ್ನುತ್ತಿದ್ದಾರೆ. ವಿಶ್ವಮಾನವ ಕುವೆಂಪು ಅವರ ಕ್ಷೇತ್ರದ ತೀರ್ಥಹಳ್ಳಿಯವರು ಈ ರೀತಿ ಮಾಡುತ್ತಾರೆ ಎಂದರೆ, ಏನು ಹೇಳಬೇಕು ಎಂದು ಆರಗ ಜ್ಞಾನೇಂದ್ರ ಬಗ್ಗೆ ಲೇವಡಿ ಮಾಡಿದರು.
ಯಡಿಯೂರಪ್ಪ ಸದನದಲ್ಲಿ ವಿದಾಯ ಭಾಷಣ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಈ ಬಗ್ಗೆ ನಾನು ವಿರೋಧವಾಗಿ ಏನು ಹೇಳುವುದಿಲ್ಲ. ಅವರು ಪಾಪ ವಿದಾಯದ ಭಾಷಣ ಮಾಡಿದ್ದಾರೆ. ಎಲ್ಲರೂ ಕೂಡ ಒಂದಲ್ಲ ಒಂದು ದಿನ ಸದನದಲ್ಲಿ ವಿದಾಯದ ಭಾಷಣ ಮಾಡಲೇಬೇಕು. ಆದರೆ ಪಕ್ಷ ನನಗೆ ಎಲ್ಲವೂ ಕೊಟ್ಟಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ, 2013ರಲ್ಲಿ ಕೆಜೆಪಿ ಕಟ್ಟಿದಾಗ ಇವರಿಗೆ ಪಕ್ಷ ಏನೂ ನೀಡಿರಲಿಲ್ಲವೇ ? ಆಗ ಇದೇ ಬಿಜೆಪಿ ಬಗ್ಗೆ ಇವರು ಏನೇನು ಭಾಷಣ ಮಾಡಿದ್ದರು.ಇವೆಲ್ಲವೂ ಇನ್ನೂ ದಾಖಲೆಗಳು ನಮ್ಮ ಬಳಿ ಇವೆ. ಶಿವಮೊಗ್ಗದಲ್ಲಿ ಇಬ್ಬರು ಆಕಾಂಕ್ಷಿಗಳಿದ್ದಾರೆ. ಶಿವಮೊಗ್ಗದಲ್ಲಿ ಇಬ್ಬರು ಶಾರದೆಯರು ಗೆಲುವು ಸಾಧಿಸಲಿದ್ದಾರೆ. ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ ನಾವು ಗೆಲ್ಲಲ್ಲಿದ್ದೇವೆ. ಶೃಂಗೇರಿ ಶಾರದಾಂಬೆ ಆಶೀರ್ವಾದದಿಂದ ಇಬ್ಬರು ಶಾರದೆಯರು ಗೆಲ್ಲಲ್ಲಿದ್ದಾರೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಬಾದಾಮಿಯಲ್ಲಿ ಜನರಿಗೆ ದ್ರೋಹ ಮಾಡಿಲ್ಲ: ಬಿಎಸ್‌ವೈಗೆ ತಿರುಗೇಟು ನೀಡಿದ ಸಿದ್ದು
ನಮ್ಮ ಕುಟುಂಬದವರ ಬಗ್ಗೆ ಮಾತನಾಡುವ ಬಗ್ಗೆ ಎಚ್ಚರವಿರಲಿ: ರೈತರ ಸಾಲ ಮಾಡಬೇಡಿ ಅಂತಾನೆ. ಕೆಎಂಎಫ್ ಈ ಮಟ್ಟಕ್ಕೆ ಬೆಳೆಯಲು ರೇವಣ್ಣರ ಕೊಡುಗೆ ದೇವೇಗೌಡರ ಕುಟುಂಬದ ಪಾತ್ರ ದೊಡ್ಡದಿದೆ. ನಮ್ಮ ಕುಟುಂಬದವರ ಬಗ್ಗೆ ಮಾತನಾಡುವ ಬಗ್ಗೆ ಎಚ್ಚರವಿರಲಿ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಜಯದೇವ ಆಸ್ಪತ್ರೆ ಇಂದು ಹೇಗಿದೆ ಇದಕ್ಕೆ ಕಾರಣ ದೇವೇಗೌಡರ ಕುಟುಂಬ ಕಾರಣ. ಬಿಜೆಪಿಯವರು ತಮ್ಮ ಶಾಸಕರ ಬಗ್ಗೆ ಚಿಂತನೆ ಮಾಡಲಿ. ಹೆಗಣ ಬಿದ್ದಿದೆ ಅದರ ವಾಸನೆ ತೆಗೆಯಿರಿ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಪಡೆದ ಜಮೀನಿಗೆ ಪರಿಹಾರ ನೀಡಿಲ್ಲ. ಈ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಒಂದು ಸಮಸ್ಯೆ ಇದೆ.
ಇದಕ್ಕೆ ಶಾಶ್ವತ ಪರಿಹಾರ ನೀಡಲು ಪೂರ್ಣಾವಧಿ ಸರ್ಕಾರ ಬೇಕು. ಕಾಂಗ್ರೆಸ್ ಪಕ್ಷ ಈ ಬಾರಿ ಹೀನಾಯ ಸೋಲು ಕಾಣುತ್ತದೆ. ಟೆಂಟ್ ತೆಗೆದುಕೊಂಡು ಹೋಗಬೇಕು. ಕಳೆದ ಮೂರು ಚುನಾವಣೆಗಿಂತ ಈ ಬಾರಿ ಜೆಡಿಎಸ್ ಅಲೆ ಹೆಚ್ಚಾಗಿದೆ. ಜನ ಸೇರುತ್ತಾರೆ ಮತ ಹಾಕಲ್ಲ ಎನ್ನುತ್ತಿದ್ದರು ಈ ಬಾರಿ ಸಂಪೂರ್ಣ ಬೆಂಬಲ ನೀಡುತ್ತಾರೆ. ನಾನು ಒಂದು ವರ್ಷ ಮೊದಲೇ ಗೆಲ್ಲುವ ವಿಧಾನಸಭಾ ಕ್ಷೇತ್ರಗಳನ್ನ ಗುರುತಿಸಿರುವೆ. 125 ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ. ಹೀಗಾಗಿ ಮೂರು ತಿಂಗಳ ಮೊದಲೇ ಸಂಘಟನೆ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.