Asianet Suvarna News Asianet Suvarna News

Namma Metro: ಕೆ.ಆರ್‌ಪುರ-ವೈಟ್‌ಫೀಲ್ಡ್‌ ಮೆಟ್ರೋಗೆ ಮೋದಿ ಚಾಲನೆ?

ಮೆಟ್ರೋದ ಬಹುನಿರೀಕ್ಷಿತ ವೈಟ್‌ಫೀಲ್ಡ್‌-ಕೆ.ಆರ್‌.ಪುರ ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಸೂಚಿಸಿರುವ ಎಲ್ಲ ಬಾಕಿ ಕಾಮಗಾರಿಗಳನ್ನು ಮಾ.10ರೊಳಗೆ ಪೂರ್ಣಗೊಳಿಸುವುದಾಗಿ ಸರ್ಕಾರಕ್ಕೆ ತಿಳಿಸಿರುವ ಬಿಎಂಆರ್‌ಸಿಎಲ್‌ ಸರ್ಕಾರದ ಸೂಚನೆ ಅನ್ವಯ ಉದ್ಘಾಟನೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ.

PM Narendra Modi drive for KRpura-Whitefield Metro at bengaluru rav
Author
First Published Mar 6, 2023, 8:24 AM IST

ಬೆಂಗಳೂರು  (ಮಾ.6) :ಮೆಟ್ರೋದ ಬಹುನಿರೀಕ್ಷಿತ ವೈಟ್‌ಫೀಲ್ಡ್‌-ಕೆ.ಆರ್‌.ಪುರ ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಸೂಚಿಸಿರುವ ಎಲ್ಲ ಬಾಕಿ ಕಾಮಗಾರಿಗಳನ್ನು ಮಾ.10ರೊಳಗೆ ಪೂರ್ಣಗೊಳಿಸುವುದಾಗಿ ಸರ್ಕಾರಕ್ಕೆ ತಿಳಿಸಿರುವ ಬಿಎಂಆರ್‌ಸಿಎಲ್‌ ಸರ್ಕಾರದ ಸೂಚನೆ ಅನ್ವಯ ಉದ್ಘಾಟನೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ(Bengaluru-mysuru expressway) ಉದ್ಘಾಟನೆ(Inauguration)ಗೆ ಆಗಮಿಸಲಿದ್ದು, ಅದೇ ವೇಳೆ ಮೆಟ್ರೋ(Namma Metro)ದ ಈ ಮಾರ್ಗದಲ್ಲಿ ರೈಲ್ವೆ ಸಂಚಾರಕ್ಕೂ ಹಸಿರು ನಿಶಾನೆ ತೋರುವ ನಿರೀಕ್ಷೆಯಿದೆ. ಹೀಗಾಗಿ ಅಂತಿಮ ಹಂತದ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌(BMRCL) ಮೂಲಗಳು ತಿಳಿಸಿವೆ.

Bengaluru Metro: ಕೆಆರ್ ಪುರಂ - ವೈಟ್ ಫಿಲ್ಡ್ ಮೆಟ್ರೋ ಸಂಚಾರ ಮಾರ್ಗ ಉದ್ಘಾಟನೆಗೆ ಕೌಂಟ್‌ಡೌನ್!

ಈಗಾಗಲೇ 13.75 ಕಿಮೀ ಮಾರ್ಗದ ಸುರಕ್ಷತಾ ತಪಾಸಣೆ ನಡೆಸಿರುವ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್‌) ರೈಲ್ವೆ ಸಂಚಾರಕ್ಕೆ ಒಪ್ಪಿಗೆ ನೀಡಿದ್ದಾರೆ. ಆದರೆ, 25 ಪ್ರಮುಖ ಅಂಶಗಳ ಮೂಲಕ 60 ಸಲಹೆ, ಸೂಚನೆ ನೀಡಿದ್ದು, ಸೇವೆ ಆರಂಭಿಸುವುದಕ್ಕೂ ಮುನ್ನ ಅವುಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಅದರಂತೆ 12 ನಿಲ್ದಾಣಗಳು ಹಾಗೂ ಮೆಟ್ರೋ ಮಾರ್ಗದಲ್ಲಿ ಅಂತಿಮ ಹಂತದ ಕಾಮಗಾರಿಯನ್ನು ಬಿಎಂಆರ್‌ಸಿಎಲ್‌ ಕೈಗೊಂಡಿದೆ.

ಅಗ್ನಿ ಅನಾಹುತ ನಿರ್ವಹಣೆಗೆ ಕ್ರಮ ಕೈಗೊಳ್ಳಿ: ಆಯುಕ್ತ

ಮೆಟ್ರೋ ರೈಲು, ಪ್ಲಾಟ್‌ಫಾರಂ ಹಾಗೂ ಕಾನ್‌ಕೊರ್ಸ್‌ ಮಟ್ಟದಲ್ಲಿ ಅಗ್ನಿ ಅನಾಹುತ ನಿರ್ವಹಣೆಗೆ ಅಗತ್ಯ ಕ್ರಮ ವಹಿಸಬೇಕು. ತುರ್ತು ನಿರ್ಗಮನದ ಕುರಿತು ಪ್ರಯಾಣಿಕರಿಗೆ ಸ್ಪಷ್ಟವಾಗಿ ಮಾಹಿತಿ ನೀಡಬೇಕು. ಪ್ರಾಥಮಿಕ ಚಿಕಿತ್ಸೆ ಕಿಟ್‌ಗಳನ್ನು ಎಲ್ಲ ನಿಲ್ದಾಣದಲ್ಲಿ ಇರಿಸಬೇಕು. ಎಸ್ಕಲೇಟರ್‌, ಲಿಫ್‌್ಟ, ಲೈಟ್‌, ಟಿಕೆಟ್‌ ಕೌಂಟರ್‌ ವ್ಯವಸ್ಥೆಯನ್ನು ಇನ್ನಷ್ಟುಸಮರ್ಪಕವಾಗಿಸಬೇಕು. ಜೊತೆಗೆ ಹಿರಿಯ ನಾಗರಿಕರು, ಅಂಗವಿಕಲರಿಗೆ ಅಗತ್ಯ ಸೌಕರ್ಯ ಒದಗಿಸಬೇಕು. ಜತೆಗೆ ಎಲ್ಲ ನಿಲ್ದಾಣದಲ್ಲಿ ಎಎಫ್‌ಸಿ ಗೇಟ್‌ಗಳನ್ನು ಸರಿಯಾಗಿ ಅಳವಡಿಸಿ ಹಾಗೂ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಸಿಎಂಆರ್‌ಎಸ್‌ ತಿಳಿಸಿದೆ.

ಕೆಲ ಸ್ಥಳಗಳಲ್ಲಿ ರೈಲಿನ ವೇಗದ ಕುರಿತು ಎಂಜಿನಿಯರಿಂಗ್‌ ಹಾಗೂ ಸಿಗ್ನಲಿಂಗ್‌ ವಿಭಾಗ ಜಂಟಿಯಾಗಿ ತಪಾಸಣೆ ಕೈಗೊಂಡು ಎಟಿಪಿ (ಆಟೋಮ್ಯಾಟಿಕ್‌ ಟ್ರೈನ್‌ ಪ್ರೊಟೆಕ್ಷನ್‌) ಅನುಸಾರ ವೇಗ ಮೀರದಂತೆ ನೋಡಿಕೊಳ್ಳಬೇಕು. ವಿಸ್ತರಣಾ ಭಾಗದಲ್ಲಿ ಇರುವ ಅಂತರವನ್ನು ಮುಚ್ಚಿ ಮೆಟ್ರೋ ಮಾರ್ಗದ ಮೇಲಿಂದ ವಸ್ತುಗಳು ಕೆಳಗೆ ಬೀಳದಂತೆ ಕ್ರಮ ವಹಿಸುವಂತೆ ತಿಳಿಸಲಾಗಿದೆ. ಗರುಡಾಚಾರ್ಯ ಪಾಳ್ಯ ನಿಲ್ದಾಣದಲ್ಲಿ ನೀರಿನ ಸೋರಿಕೆ ತಡೆಗೆ ಕ್ರಮ ವಹಿಸುವುದು ಸೇರಿ ಮಹದೇವಪುರ ಸ್ಟೇಷನ್‌ನ ಪ್ಲಾಟ್‌ಫಾರಂ, ವೈಟ್‌ಫೀಲ್ಡ್‌, ಕಾಡುಗೋಡಿ ಸ್ಟೇಷನ್‌ನಲ್ಲಿರುವ ಕೆಲ ಸಮಸ್ಯೆಗಳನ್ನು ನಿವಾರಿಸುವಂತೆ ತಿಳಿಸಲಾಗಿದೆ.

Metro: ಕನ್ನಡಿಗರ ವಿರೋಧ ನಡುವೆಯೂ ಹೊಸೂರಿಗೆ ಮೆಟ್ರೋ ವಿಸ್ತರಣೆ: ಚನ್ನೈ ಮೆಟ್ರೋದಿಂದ ವರದಿ ತಯಾರಿ

ಇವುಗಳನ್ನು ಸರಿಪಡಿಸುವ ಕಾರ್ಯವನ್ನು ಬಿಎಂಆರ್‌ಸಿಎಲ್‌ ಕೈಗೊಂಡಿದ್ದು, ಶೀಘ್ರವೇ ಪೂರ್ಣಗೊಳ್ಳಲಿದೆ. ಬಳಿಕ ಸಿಎಂಆರ್‌ಎಸ್‌ಗೆ ವರದಿ ಸಲ್ಲಿಸಲಿದೆ. ಅವರು ಒಪ್ಪಿಗೆ ನೀಡಿದ ಬಳಿಕ ಮಾರ್ಗದ ಉದ್ಘಾಟನೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಜತೆಗೆ ಮೆಟ್ರೋ ಮಾರ್ಗದ ಸೌಂದರ್ಯಿಕರಣ ಕಾಮಗಾರಿಯನ್ನು ಕೂಡ ಕೈಗೊಳ್ಳಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೆ.ಆರ್.ಪುರಂ ಬದಲು ಕೆ.ಆರ್.ಪುರ ಹೆಸರಿಡಿ:

‘ಕೆ.ಆರ್‌.ಪುರಂ’ ಎಂದು ನಾಮಕರಣ ಮಾಡಿರುವ ನೂತನ ಮೆಟ್ರೋ ನಿಲ್ದಾಣಕ್ಕೆ ‘ಕೃಷ್ಣರಾಜಪುರ’ ಅಥವಾ ‘ಕೆ.ಆರ್‌.ಪುರ’ ಎಂದು ಹೆಸರಿಸುವಂತೆ ಯುವ ಕರ್ನಾಟಕ ವೇದಿಕೆ(Yuva rakshana vedike) ಬೆಂಗಳೂರು ಮೆಟ್ರೋ ರೈಲ್ವೆ ಮೆಟ್ರೋ ನಿಗಮದ ವ್ಯವಸ್ಥಾಪಕ ಅಂಜುಮ್‌ ಪರ್ವೇಜ್‌ ಅವರಿಗೆ ಮನವಿ ಸಲ್ಲಿಸಿದೆ.

ಬಿಎಂಆರ್‌ಸಿಎಲ್‌ ಸಂಸ್ಥೆ ತಪ್ಪು ತಿಳುವಳಿಕೆಯಿಂದ ಕೆ.ಆರ್‌.ಪುರಂ ಎಂದು ನಾಮಕರಣ ಮಾಡಿದೆ. ಇದು ಕನ್ನಡದ ಹೆಸರಲ್ಲ. ರಾಜ್ಯದ ಎಲ್ಲ ಅಧಿಕೃತ ದಾಖಲೆಗಳಲ್ಲಿಯೂ ಕೃಷ್ಣರಾಜಪುರ ಎಂದೇ ನಮೂದಾಗಿದೆ. ಕೃಷ್ಣರಾಜ ಒಡೆಯರ್‌ ಅವರ ಹೆಸರನ್ನು ಈ ಪ್ರದೇಶಕ್ಕೆ ಇಡಲಾಗಿದೆ. ಆದರೆ, ಇತ್ತೀಚೆಗೆ ಅನ್ಯ ಭಾಷೆಯ ಪ್ರಭಾವದಿಂದಾಗಿ ಹೆಸರನ್ನು ತಪ್ಪಾಗಿ ಬಳಸಲಾಗುತ್ತಿದೆ. ಮೆಟ್ರೋ ಕೂಡ ಇದನ್ನೇ ಅನುಸರಿಸಿದೆ. ತಕ್ಷಣ ‘ಪುರಂ’ ಎಂಬುದನ್ನು ತೆಗೆದು ‘ಪುರ’ ಎಂದು ಸರಿಯಾಗಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಈ ಸಂಬಂಧ ವ್ಯವಸ್ಥಾಪಕ ನಿರ್ದೇಶಕರಿಗೆ ತಹಸೀಲ್ದಾರ್‌ ಕಚೇರಿ ಸೇರಿ ಇತರೆಡೆ ಸಂಗ್ರಹಿಸಿದ ದಾಖಲೆಗಳನ್ನು ಒದಗಿಸಲಾಯಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಎಂಡಿ ಅಂಜುಮ್‌ ಪರ್ವೇಜ್‌, ದಾಖಲೆಗಳನ್ನು ಪರಿಶೀಲಿಸಿ ಹೆಸರು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಈ ವೇಳೆ ಸಂಘಟನೆ ಅಧ್ಯಕ್ಷ ಆರ್‌.ಮಂಜುನಾಥ ಸೇರಿ ಇತರರಿದ್ದರು.

Follow Us:
Download App:
  • android
  • ios