ಬ್ರಿಟನ್ನಿಂದ ಬಂದು ಕಣ್ಮರೆ ಆದವರಿಗೆ ಪೊಲೀಸರ ತಲಾಶ್‌, -ನಾಪತ್ತೆಯಾದ 693 ಮಂದಿ ಹುಡುಕಲು ಪೊಲೀಸ್‌ ನೆರವು ಕೋರಿದ ಆರೋಗ್ಯ ಇಲಾಖೆ, -ಬ್ರಿಟನ್‌ನಿಂದ ಬಂದ ಕೆಲವರ ಮೊಬೈಲ್‌ ಸ್ವಿಚಾಫ್‌, ಮನೆಗೆ ಬೀಗ, ಕೆಲವರಿಂದ ಕಳ್ಳಾಟ

ಬೆಂಗಳೂರು (ಡಿಸ27): ಬ್ರಿಟನ್‌ನಿಂದ ರಾಜ್ಯಕ್ಕೆ ಆಗಮಿಸಿ ನಾಪತ್ತೆಯಾಗಿರುವ 693 ಮಂದಿಯ ಪತ್ತೆಗೆ ಇದೀಗ ಪೊಲೀಸ್‌ ಇಲಾಖೆಗೆ ಸೂಚನೆ ನೀಡಲಾಗಿದೆ.

ಆರೋಗ್ಯ ಇಲಾಖೆಯ ಕೋರಿಕೆಯ ಮೇರೆಗೆ ಪೊಲೀಸ್‌ ಇಲಾಖೆ ಬ್ರಿಟನ್‌ನಿಂದ ಆಗಮಿಸಿದವರ ಪತ್ತೆ ಕಾರ್ಯ ಆರಂಭಿಸುವಂತೆ ಠಾಣಾ ಹಂತದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಡಿ.12ರಿಂದ 21ರವರೆಗೆ ಬ್ರಿಟನ್‌ದಿಂದ ರಾಜ್ಯಕ್ಕೆ ಬಂದಿರುವ ಒಟ್ಟು 2127 ಜನರ ಪೈಕಿ ಶನಿವಾರದವರೆಗೂ 1434 ಜನರನ್ನು ಪತ್ತೆ ಹಚ್ಚಲು ಮಾತ್ರ ಆರೋಗ್ಯ ಇಲಾಖೆಗೆ ಸಾಧ್ಯವಾಗಿದೆ. ಉಳಿದ 693 ಮಂದಿಯನ್ನು ಬೇರೆ ಬೇರೆ ಕಾರಣಗಳಿಂದ ಪತ್ತೆ ಹಚ್ಚಲಾಗಿಲ್ಲ. ಇದರಲ್ಲಿ 220 ಮಂದಿ ಬೆಂಗಳೂರಿನವರು. ಈ 220 ಮಂದಿಯ ಪೈಕಿ ಕೆಲವರು ತಪ್ಪು ದೂರವಾಣಿ ಸಂಖ್ಯೆ ನೀಡಿದ್ದರೆ, ಇನ್ನು ಕೆಲವರು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆ. ಅವರ ವಿಳಾಸ ಹಿಡಿದು ಹೋದರೆ ಒಂದಷ್ಟುಜನರ ಮನೆಗೆ ಬೀಗ ಹಾಕಿದೆ. ಕೆಲವರು ಬೇರೆ ಊರುಗಳಿಗೆ, ಇನ್ನು ಕೆಲವರು ಬೇರೆ ರಾಜ್ಯಗಳಿಗೆ ಹೋಗಿದ್ದಾರೆ ಎಂಬ ಮಾಹಿತಿ ಸಿಗುತ್ತಿದೆ. ಹಾಗಾಗಿ ಅವರನ್ನು ಹೇಗೆ ಪತ್ತೆ ಹಚ್ಚುವುದು ಎಂದು ತಿಳಿಯದೆ ಆರೋಗ್ಯ ಇಲಾಖೆ ಪೊಲೀಸರ ಸಹಕಾರ ಕೋರಿದೆ.

ಬ್ರಿಟನ್‌ನಿಂದ ಬಂದು ನಾಪತ್ತೆಯಾಗಿರುವ ಪ್ರಯಾಣಿಕರ ವಿವರವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತದಿಂದ ಪಡೆದಿರುವ ಆರೋಗ್ಯಾಧಿಕಾರಿಗಳು ಸ್ಥಳೀಯ ಪೊಲೀಸರಿಗೆ ನೀಡಿ ಅವರ ಪತ್ತೆಗೆ ಸಹಕರಿಸುವಂತೆ ಕೋರಿದ್ದಾರೆ.

ವ್ಯಾಕ್ಸಿನ್ ಕೊಟ್ಟ ಬಳಿಕ ರಿಯಾಕ್ಷನ್

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಬ್ರಿಟನ್‌ನಿಂದ ಬಂದವರ ಪೈಕಿ ಹಲವರ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪೊಲೀಸರ ಸಹಕಾರ ಪಡೆಯಲು ಇಲಾಖೆಯ ಎಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಕಾನೂನು ಕ್ರಮದ ಎಚ್ಚರಿಕೆ:
ನಾಪತ್ತೆಯಾಗಿರುವವರು ತಾವಾಗಿಯೇ ಸ್ಥಳೀಯ ಸರ್ಕಾರಿ ಆಸ್ಪತ್ರೆ, ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡಿರುವುದು ಕಂಡುಬಂದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅವರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಬ್ರಿಟನ್‌ನಲ್ಲಿ ಹೊಸ ವೈರಸ್ ಆತಂಕ