ಆಂಧ್ರಪ್ರದೇಶ ಮಾದರಿಯಲ್ಲಿ ಆರಂಭಿಸಲು ಕಾರಾಗೃಹ ಇಲಾಖೆ ಪ್ರಸ್ತಾಪ, ಸರ್ಕಾರ ಒಪ್ಪಿದರೆ ರಾಜ್ಯದ 5 ಜೈಲುಗಳಲ್ಲಿ ಮೊದಲ ಹಂತದಲ್ಲಿ ಪ್ರಾರಂಭ

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಆ.17): ಕರುನಾಡಿನ ಸೆರೆಮನೆಯಲ್ಲಿ ಕೈದಿಗಳಿಂದ ಬೇಕರಿ ತಿನಿಸು, ಸಿದ್ಧ ಉಡುಪು ಹಾಗೂ ಕರಕುಶಲ ವಸ್ತುಗಳನ್ನು ತಯಾರಿಸಿ ಯಶಸ್ವಿಯಾಗಿರುವ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ, ಈಗ ಕಾರಾಗೃಹಗಳಲ್ಲಿ ಕೈದಿಗಳನ್ನು ಬಳಸಿಕೊಂಡು ಹೊಸದಾಗಿ ಪೆಟ್ರೋಲಿಯಂ ವ್ಯವಹಾರ ಆರಂಭಿಸಲು ಮುಂದಾಗಿದೆ. ಮೊದಲ ಹಂತದಲ್ಲಿ ರಾಜ್ಯದ ಐದು ಕೇಂದ್ರ ಕಾರಾಗೃಹಗಳ ಹೊರಾವರಣದಲ್ಲಿ ಪೆಟ್ರೋಲ್‌ ಬಂಕ್‌ಗಳ ಸ್ಥಾಪನೆಗೆ ಸರ್ಕಾರಕ್ಕೆ ಕಾರಾಗೃಹ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಯೋಜನೆ ಸಾಧಕ-ಬಾಧಕ ನೋಡಿಕೊಂಡು ಇನ್ನುಳಿದ ಕಾರಾಗೃಹಗಳಲ್ಲಿ ಸಹ ಪೆಟ್ರೋಲ್‌ ಬಂಕ್‌ ಆರಂಭಿಸಲು ಕಾರಾಗೃಹ ಇಲಾಖೆ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಚಿಂತನೆ ನಡೆಸಿದ್ದಾರೆ. ಈ ಯೋಜನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದರೆ ಇಲಾಖೆಗೆ ಮಾತ್ರವಲ್ಲದೆ ಕೈದಿಗಳಿಗೂ ಆರ್ಥಿಕವಾಗಿ ಲಾಭವಾಗಲಿದೆ ಎಂದು ಮೂಲಗಳು ಹೇಳಿವೆ.

ರಾಜ್ಯದ ಸೆಂಟ್ರಲ್‌ ಜೈಲುಗಳ ಹೊರಾವರಣದಲ್ಲಿ ನಿರುಪಯುಕ್ತ ಖಾಲಿ ಪ್ರದೇಶವನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಇಲಾಖೆಯ ಉದ್ದೇಶವಾಗಿದೆ. ದೇಶದಲ್ಲಿ ಮೊದಲು ಜೈಲುಗಳಲ್ಲಿ ಅಖಂಡ ಆಂಧ್ರಪ್ರದೇಶ ರಾಜ್ಯದಲ್ಲಿ ಪೆಟ್ರೋಲ್‌ ಬಂಕ್‌ಗಳು ಸ್ಥಾಪನೆಯಾಗಿದ್ದವು. ಪ್ರಸ್ತುತ ಅವಿಭಜಿತ ಆಂಧ್ರಪ್ರದೇಶದ 26 ಜೈಲುಗಳಲ್ಲಿ ಪೆಟ್ರೋಲ್‌ ಬಂಕ್‌ಗಳು ವಹಿವಾಟು ನಡೆಸುತ್ತಿವೆ. ಬಂಕ್‌ ಸ್ಥಾಪನೆ ಸಂಬಂಧ ಆಂಧ್ರಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಿ ವರದಿ ನೀಡಲಾಗಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸನ್ನಡತೆಯಿಂದ 81 ಕೈದಿಗಳಿಗೆ ಬಿಡುಗಡೆ ಭಾಗ್ಯ

ಎಲ್ಲೆಲ್ಲಿ ಪೆಟ್ರೋಲ್‌ ಬಂಕ್‌?:

ಕಾರಾಗೃಹಗಳಲ್ಲಿ ಬೇಕರಿ ತಿನಿಸು, ಸಿದ್ಧ ಉಡುಪು, ಕರಕುಶಲ ವಸ್ತುಗಳು, ಮುದ್ರಣಾಲಯ ಹಾಗೂ ಸ್ಯಾನಿಟೈಸರ್‌ ಸೇರಿದಂತೆ ಗುಡಿ ಕೈಗಾರಿಕೆಗಳಿವೆ. ಇಲ್ಲಿ ಕೈದಿಗಳ ಆಸಕ್ತಿಗೆ ಅನುಗುಣವಾಗಿ ಕೆಲಸ ಹಂಚಿಕೆ ಮಾಡಲಾಗುತ್ತದೆ. ಅಲ್ಲದೆ ದೇವನಹಳ್ಳಿ ಹಾಗೂ ವಿಜಯಪುರದ ಬಯಲು ಕಾರಾಗೃಹಗಳಲ್ಲಿ ಕೃಷಿಯಲ್ಲಿ ಕೂಡಾ ಕೈದಿಗಳು ತೊಡಗಿದ್ದಾರೆ. ಬೇಕರಿ ತಿಂಡಿಗಳಿಗೆ ಸಾರ್ವಜನಿಕರಿಂದ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೋನಾ ಕಾಲದಲ್ಲಿ ಲಕ್ಷಗಟ್ಟಲೇ ಮಾಸ್ಕ್‌ ಹಾಗೂ ನೂರಾರು ಲೀಟರ್‌ ಸ್ಯಾನಿಟೈಸರ್‌ ತಯಾರಿಸಿ ಪೊಲೀಸ್‌ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ಪೂರೈಸಲಾಗಿತ್ತು. ಈಗ ಹೊಸದಾಗಿ ಪೆಟ್ರೋಲ್‌ ಬಂಕ್‌ ಸ್ಥಾಪನೆ ಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Vijayapura ಚಿಕನ್‌ ಪೀಸಲ್ಲಿ ಜೈಲಿನ ಕೈದಿಗೆ ಗಾಂಜಾ ಸಾಗಣೆ: 18 ಪ್ಯಾಕೆಟ್‌ ವಶಕ್ಕೆ

ರಾಜ್ಯದ 9 ಸೆಂಟ್ರಲ್‌ ಜೈಲುಗಳ ವ್ಯಾಪ್ತಿಯಲ್ಲಿ ನಿರುಪಯುಕ್ತವಾಗಿ ವಿಶಾಲ ಪ್ರದೇಶವಿದೆ. ಹೆದ್ದಾರಿಗಳ ಪಕ್ಕದಲ್ಲೇ ಆ ಜಾಗ ಇರುವ ಕಾರಣ ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಂಡರೆ ಇಲಾಖೆಗೂ ಆರ್ಥಿಕವಾಗಿ ಲಾಭವಾಗಲಿದೆ. ಇದನ್ನು ಮನಗಂಡು ಅಧಿಕಾರಿಗಳ ಜತೆ ಸಮಾಲೋಚಿಸಿ ಸರ್ಕಾರಕ್ಕೆ ಪೆಟ್ರೋಲ್‌ ಬಂಕ್‌ ಸ್ಥಾಪನೆಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ಸಮಗ್ರ ನೀಲ ನಕ್ಷೆ ಸಹ ಲಗತ್ತಿಸಲಾಗಿದೆ. ಬಂಕ್‌ ಸ್ಥಾಪನೆ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಅಧಿಕಾರಿಗಳು ನುಡಿದ್ದಾರೆ.

ಮೊದಲ ಹಂತದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ, ಮೈಸೂರು, ಬಳ್ಳಾರಿ, ಬೆಳಗಾವಿ ಹಾಗೂ ಧಾರವಾಡ ಕೇಂದ್ರ ಕಾರಾಗೃಹಗಳಲ್ಲಿ ಬಂಕ್‌ ಸ್ಥಾಪನೆಗೆ ತೀರ್ಮಾನಿಸಲಾಗಿದ್ದು, ಈಗಾಗಲೇ ಆ ಜೈಲುಗಳಲ್ಲಿ ಅರ್ಧ ಎಕರೆಯಷ್ಟುಜಾಗವನ್ನು ಸಹ ಗುರುತಿಸಲಾಗಿದೆ. ಮುಂದಿನ ಹಂತದಲ್ಲಿ ಇನ್ನುಳಿದ ಶಿವಮೊಗ್ಗ, ಕಲಬುರಗಿ ಹಾಗೂ ವಿಜಯಪುರ ಜೈಲುಗಳಲ್ಲಿ ಬಂಕ್‌ ಆರಂಭವಾಗಲಿವೆ ಎಂದು ಮೂಲಗಳು ಹೇಳಿವೆ.