ಡಾಂಬರೀಕರಣ ಕಾಮಗಾರಿಯ ಕಾರಣದಿಂದಾಗಿ ಬೆಂಗಳೂರಿನ ಪೀಣ್ಯ ಮೇಲ್ಸೇತುವೆ ಮೇಲೆ ಆಗಸ್ಟ್ 3 ರಿಂದ 12 ರವರೆಗೆ ರಾತ್ರಿ ವೇಳೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ತುಮಕೂರು ಕಡೆಗೆ ಹೋಗುವ ವಾಹನಗಳಿಗೆ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಸಂಚಾರ ನಿರ್ಬಂಧವಿದ್ದು, ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.

ಬೆಂಗಳೂರು (ಆ.4): ಡಾಂಬರೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಪೀಣ್ಯ ಮೇಲ್ಸೇತುವೆ ಮೇಲೆ ಆ.3 ರಿಂದ 12 ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಎಲಿವೇಟೆಡ್ ಫೈಓವರ್ (ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಮೇಲೆ ಡಾಂಬರೀಕರಣ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಳ್ಳಲಾಗಿದ್ದು, ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಆ.3 ರಿಂದ 12 ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಹಾಗೂ ಶನಿವಾರ ಮತ್ತು ಭಾನುವಾರ ರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ತುಮಕೂರು ಕಡೆಗೆ ಹೋಗುವ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಸಂಚಾರಿ ಪೊಲಿಸರು ತಿಳಿಸಿದ್ದಾರೆ.

\Bಸಂಚಾರ ನಿರ್ಬಂಧ: \Bರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ಎಸ್.ಆರ್.ಎಸ್ ಅಪ್ಪರ್‌ ರ್ಯಾಂಪ್‌ನಿಂದ ಕೆನ್ನಮೆಟಲ್ ವಿಡಿಯಾ ಡೌನ್‌ ರ್ಯಾಂಪ್‌ವರೆಗೆ ಸಂಚಾರ ನಿರ್ಬಂಧಿಸಲಾಗಿದೆ.

\Bಪರ್ಯಾಯ ಮಾರ್ಗ: \Bನಗರದಿಂದ ನೆಲಮಂಗಲ ಕಡೆಗೆ ಸಂಚರಿಸುವ ವಾಹನಗಳು ಎಸ್.ಆರ್.ಎಸ್ ಅಪ್ಪರ್‌ ರ್ಯಾಂಪರ್‌ ಪ್ಲೈ ಓವ‌ರ್ ಕೆಳಭಾಗದ ಎನ್.ಹೆಚ್-4 ರಸ್ತೆ ಮತ್ತು ಸರ್ವಿಸ್ ರಸ್ತೆ ಮೂಲಕ ಎಸ್.ಆರ್.ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ ಜಂಕ್ಷನ್, 8ನೇ ಮೈಲಿ ಜಂಕ್ಷನ್, ಪಾರ್ಲೆ-ಜಿ ಟೋಲ್ ಮೂಲಕ ಸಂಚರಿಸಬಹುದಾಗಿದೆ.