Covid-19 Home isolation Patients : ಗುಣಮುಖ ವರದಿ, ಕೋವಿಡ್ ಪರೀಕ್ಷೆ ಬೇಕಿಲ್ಲ!
* ಹೋಂ ಐಸೋಲೇಶನ್ ಗುಣಮುಖರಿಗೆ ಅನ್ವಯ
* ಕಂಪನಿಗಳು ಗುಣಮುಖ ವರದಿ ಕೇಳುವಂತಿಲ್ಲ
* ಗೊಂದಲಗಳಿಗೆ ಆರೋಗ್ಯ ಇಲಾಖೆ ತೆರೆ
ಬೆಂಗಳೂರು (ಜ. 28): ಮನೆಯಲ್ಲಿಯೇ ಇದ್ದು ಗುಣಮುಖರಾಗುವ ಕೊರೋನಾ (Corona) ಸೋಂಕಿತರಿಗೆ ಮತ್ತೊಮ್ಮೆ ಕೊರೋನಾ ಸೋಂಕು ಪರೀಕ್ಷೆ ನಡೆಸಿದ ವರದಿ ಅಥವಾ ಗುಣಮುಖ ವರದಿ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆ ( Health department) ಪರಿಷ್ಕೃತ ಸುತ್ತೋಲೆ ಹೊರಡಿಸಿದೆ. ಈ ಹಿಂದೆ ಹೋಂ ಐಸೋಲೇಷನ್‌ನವರಿಗೆ (Home isolation) ನೀಡಿದ್ದ ಮಾರ್ಗಸೂಚಿಯಲ್ಲಿ 7 ದಿನಗಳ ಬಳಿಕ ವೈದ್ಯರು ಗುಣಮುಖ ಎಂದು ಪ್ರಮಾಣ ಪತ್ರ ನೀಡುವವರೆಗೂ ಮನೆಯಿಂದ ಹೊರಹೋಗುವಂತಿಲ್ಲ ಎಂದು ತಿಳಿಸಲಾಗಿತ್ತು. ಸದ್ಯ ವಿನಾಯ್ತಿ ನೀಡಿದ್ದರು, ಲಘು ಲಕ್ಷಣ ಅಥವಾ ಸೋಂಕಿನ ಲಕ್ಷಣ ಇಲ್ಲದದವರು 7 ದಿನಗಳ ಹೋಂ ಐಸೋಲೇಷನ್ ಅವಧಿ ಪೂರ್ಣಗೊಂಡ ನಂತರ ಮತ್ತೊಮ್ಮೆ ಪರೀಕ್ಷೆ ನಡೆಸುವ ಮತ್ತು ಗುಣಮುಖ ಎಂಬ ಪ್ರಮಾಣ ಪತ್ರ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ.
ಕಂಪನಿಗಳು ಗುಣಮುಖ ವರದಿ ಕೇಳುವಂತಿಲ್ಲ: ಹೋಂ ಐಸೋಲೇಷನ್ ಸೋಂಕಿತರು ಗುಣಮುಖರಾಗಿ ಕೆಲಸಗಳಿಗೆ ಹಿಂದಿರುಗುವ ಸಂದರ್ಭದಲ್ಲಿ ಕಂಪನಿಗಳು ಗುಣಮುಖ ವರದಿಯನ್ನು ಕೇಳುವಂತಿಲ್ಲ ಎಂದು ಬಿಬಿಎಂಪಿ ಆರೋಗ್ಯ ಇಲಾಖೆ ವಿಶೇಷ ಆಯುಕ್ತ ಕೇಂದ್ರ ಡಾ.ತ್ರಿಲೋಕ್ ಚಂದ್ರ (Trilok Chandra)ತಿಳಿಸಿದ್ದಾರೆ. ‘ಹೋಂ ಐಸೋಲೇಷನ್ ಇದ್ದವರು ಗುಣಮುಖ ವರದಿ ಪಡೆಯಲು ಪರದಾಟ ನಡೆಸುತ್ತಿದ್ದಾರೆ. ಅನಿವಾರ್ಯವಾಗಿ ಮತ್ತೊಮ್ಮೆ ಸೋಂಕು ಪರೀಕ್ಷೆಗೊಳಗಾಗುತ್ತಿದ್ದಾರೆ’ ಎಂದು ಕನ್ನಡಪ್ರಭ ಜ.23 ರಂದು ವರದಿ ಪ್ರಕಟಿಸಿತ್ತು
ಸೋಂಕು ಹೆಚ್ಚಿರುವೆಡೆ ನಿಯಂತ್ರಣಕ್ಕೆ ಕ್ರಮವಹಿಸಿ!
ಬೆಂಗಳೂರು (ಜ. 28): ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿರುವ ಪ್ರದೇಶಗಳಲ್ಲಿ ಸೋಂಕು ಹರಡದಂತೆ ನಿಯಂತ್ರಿಸಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ (BBMP Chief Commissioner Gaurav Gupta)ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಗುರುವಾರ ನಗರದಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ಕುರಿತು ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆಯ ಎಂಟು ವಲಯಗಳಲ್ಲಿ ಕಳೆದೊಂದು ವಾರದಿಂದ ಪತ್ತೆಯಾಗುತ್ತಿರುವ ಕೋವಿಡ್ ವರದಿ ಪರಿಶೀಲಿಸಲಾಗುತ್ತಿದೆ. ನಿತ್ಯದ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಸುಮಾರು ಶೇ.30ಕ್ಕೆ ಇಳಿಕೆ ಕಂಡಿದೆ. ಪಾಸಿಟಿವಿಟಿ ದರವೂ ಶೇ.25ರಿಂದ ಶೇ.18ಕ್ಕೆ ಇಳಿದಿದೆ. ಆದರೆ ಬಿಟಿಎಂ ಬಡಾವಣೆ, ಮಲ್ಲೇಶ್ವರ, ಎಚ್‌ಎಸ್‌ಆರ್ ಲೇಔಟ್, ಕೋಣನಕುಂಟೆ, ಬೇಗೂರು, ಬೆಳ್ಳಂದೂರು ಸೇರಿದಂತೆ ಇತರೆ ವಾರ್ಡ್‌ಗಳಲ್ಲಿ ಕೊರೋನಾ ಸೋಂಕಿತರು ಹೆಚ್ಚು ಪತ್ತೆಯಾಗುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಕಂಟೈನ್ಮೆಂಟ್ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.
7ನೇ ದಿನಕ್ಕೆ ಗುಣಮುಖ: ಪಾಲಿಕೆಯ ಎಲ್ಲ ವಲಯಗಳಲ್ಲಿಯೂ ಆರ್‌ಎಟಿ ಮತ್ತು ಆರ್‌ಟಿಪಿಸಿಆರ್ ಪಾಸಿಟಿವಿಟಿ ದರ ಗಮನಿಸಬೇಕು. ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ವಾರ್ಡ್‌ಗಳನ್ನು ಗುರುತಿಸಬೇಕು. ಹೋಮ್ ಐಸೋಲೇಷನ್‌ನಲ್ಲಿರುವ ಎಲ್ಲ ಪ್ರಕರಣಗಳನ್ನು ಏಳನೇ ದಿನ ಬಿಡುಗಡೆಗೊಳಿಸಿ ಕೋವಿಡ್ ಗುಣಮುಖರೆಂದು ಪರಿಗಣಿಸಲು ಸೂಚನೆ ನೀಡಿದರು. ಸಂಚಾರಿ ಟ್ರಯಾಜ್ ಘಟಕಗಳು(ಮೊಬೈಲ್ ಟ್ರಯಾಜ್ ಯುನಿಟ್ಸ್-ಎಂಟಿಯು) ಒಟ್ಟಾರೆ ಪ್ರಕರಣ ಸಂಖ್ಯೆಯ ಶೇ.10-15ರಷ್ಟುಟ್ರಯಾಜ್ ಮಾಡುವ ಬಗ್ಗೆ ಗಮನ ಹರಿಸಬೇಕು. ಜೊತೆಗೆ ಆಸ್ಪತ್ರೆ ಅಥವಾ ಕೋವಿಡ್ ಆರೈಕೆ ಕೇಂದ್ರಗಳಿಗೆ ಶಿಫಾರಸು ಮಾಡಿರುವ ಎಲ್ಲ ಪ್ರಕರಣಗಳನ್ನು ಅದೇ ದಿನ ಭೌತಿಕ ಟ್ರಯಾಜ್ ಮಾಡಬೇಕು ಎಂದು ಎಲ್ಲ ವಲಯಗಳ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಶೇ.100ರಷ್ಟುಲಸಿಕೆ: ನಗರದಲ್ಲಿ ಕೋವಿಡ್ ಲಸಿಕೆ ನೀಡುವುದನ್ನು ನಾಲ್ಕು ವರ್ಗಗಳಾಗಿ(ಮೊದಲ ಮತ್ತು ಎರಡನೆ ಡೋಸ್, 15-17 ವಯಸ್ಸಿನ ವರ್ಗ ಮತ್ತು ಬೂಸ್ಟರ್ ಡೋಸ್) ಮಾಡಿಕೊಂಡು, ಶೇ.100ರಷ್ಟುಲಸಿಕಾಕರಣ ಆಗುವಂತೆ ಅಗತ್ಯ ಕ್ರಮವಹಿಸಬೇಕು. ಈ ಪೈಕಿ ವಲಯ ಸಂಯೋಜಕರು ಪ್ರತಿನಿತ್ಯ ಪರಿಶೀಲನೆ ನಡೆಸಬೇಕೆಂದು ಸೂಚನೆ ನೀಡಿದರು. ಸಭೆಯಲ್ಲಿ ರಾಜ್ಯ ಕೋವಿಡ್ ವಾರ್ ರೂಂನ ಮುಖ್ಯಸ್ಥರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸೇರಿದಂತೆ ಇತರೆ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.