ಲೇಖಕರು ಶತಾವಧಾನಿ ಗಣೇಶರನ್ನು ಜ್ಞಾನದ ಬೆಳಕಿಗೆ ಹೋಲಿಸುತ್ತಾರೆ, ಅವರ ಮಾರ್ಗದರ್ಶನದಿಂದ ಭಾರತೀಯ ಪರಂಪರೆ ಮತ್ತು ಕಲೆಗಳ ಬಗ್ಗೆ ತಮ್ಮ ಅರಿವು ಸಮೃದ್ಧವಾಗಿದೆ ಎಂದು ಹೇಳುತ್ತಾರೆ. ಗಣೇಶರ ಪಾಂಡಿತ್ಯವ ಕಲ್ಪವೃಕ್ಷಕ್ಕೆ ಹೋಲಿಸುತ್ತಾ, ಅವರಿಗೆ ಸಂದ 'ಪದ್ಮಭೂಷಣ' ಪ್ರಶಸ್ತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

  • ವಿನಯ್ ಶಿವಮೊಗ್ಗ

ಶತಾವಧಾನಿ ಗಣೇಶರನ್ನು ನಾನು ಯಾವತ್ತೂ ವ್ಯಕ್ತಿಯಾಗಿ ನೋಡಿಯೇ ಇಲ್ಲ, ಅವರೊಂದು ಬೆಳಕು. ಆ ಬೆಳಕಿನ ಆಸರೆಯಲ್ಲಿ ಈ ಬದುಕಿಗೆ ಬೇಕಾಗಿರುವ ಸತ್ಯ-ಸುಂದರ ಸಂಗತಿಗಳನ್ನು ಕಂಡುಕೊಂಡಿದ್ದೇನೆ . ನನ್ನ ಅವಜ್ಞೆಯ ಕಾರಣ ನಾನು ಗಮನಿಸದ ಸತ್ವಯುತ ಭಾರತೀಯ ಪರಂಪರೆಯ ಅಗಾಧ ಅರಿವಿನ ಸಣ್ಣ ತುಣುಕುಗಳನ್ನು ಶತಾವಧಾನಿ ಗಣೇಶರನ್ನು ಕಾರಣದಿಂದಾಗಿ ಪಡೆದಿದ್ದೇನೆ . ಈ ನೆಲದ ಸಂಗೀತ, ಸಾಹಿತ್ಯ, ನೃತ್ಯ , ಕಾವ್ಯ, ಇತಿಹಾಸ ಮತ್ತಿತರ ಕಲೆಗಳು ಗಣೇಶರ ಕಾರಣದಿಂದಾಗಿ ನನ್ನ ಬದುಕನ್ನು ಸಂಮೃದ್ಧವಾಗಿಸಿದೆ. ಅವರು ನಮ್ಮ ಕಾಲದ ಕ್ಷಾತ್ರತೇಜದ ಬ್ರಹ್ಮ ತಪಸ್ವಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬರೀಯ ಜ್ಞಾನ ಶುಷ್ಕವಾಗಬಹುದು ಆದರೆ ರಸಪ್ರಜ್ಞೆಯ ಜ್ಞಾನ ಜೀವನೋತ್ಕರ್ಷದ ಅನುಭವ ನೀಡಬಲ್ಲದು. ಇದು ಶತಾವಧಾನಿಗಳ ಮಾತುಗಳು! ಡಾ. ಆರ್ ಗಣೇಶರು 'ರಸೋ ವೈ ಸಃ' ಎಂಬಂತೆ ರಸಾರಾಧನೆಯಲ್ಲಿ ದೇವರನ್ನು ಕಂಡವರು. ಈ ನಿಟ್ಟಿನಲ್ಲಿ ಗಣೇಶರು ಭಾರತೀಯ ಸಾರಸ್ವತ ಲೋಕದ ದೊಡ್ಡ ಆಸ್ತಿ.

ಇದನ್ನೂ ಓದಿ: Republic Day 2026: ಜನವರಿ 26 ರ ಬಗ್ಗೆ ನಿಮಗೆ ಬಹುಶಃ ತಿಳಿದಿರದ 8 ಕುತೂಹಲಕಾರಿ ಸಂಗತಿಗಳು ಇಲ್ಲಿವೆ ನೋಡಿ!

ಭಗವದ್ಗೀತೆ, ರಾಮಾಯಣ , ಭಾಗವತ , ಮಹಾ ಭಾರತ ಮುಂತಾದ ಮಹಾನ್ ಸಾಹಿತ್ಯಗಳನ್ನು ಪುಣ್ಯ ಸಂಪಾದನೆಗಾಗಿ ಪಾರಾಯಣ ಮಾಡುವುದಕ್ಕಿಂತ ರಸಗ್ರಾಹಿಯಾಗಿ ಅವುಗಳನ್ನು ಓದಿಕೊಂಡರೆ ಹೆಚ್ಚು ಸಾರ್ಥಕವೆಂದು ಗಣೇಶರು ಬಲವಾಗಿ ಪ್ರತಿಪಾದಿಸುತ್ತಾರೆ .

ಶತಾವಧಾನಿಗಳ ಜ್ಞಾನ ವಿಸ್ತಾರ ನಮ್ಮ ಊಹೆಗೆ ಮೀರಿದ್ದು ಎಂದು ಎಷ್ಟೋ ಬಾರಿ ನನಗನಿಸಿದೆ . ವಿಜ್ಞಾನ , ಅಧ್ಯಾತ್ಮ,ವ್ಯಾಕರಣ, ತರ್ಕ, ಸಂಗೀತ, ಸಾಹಿತ್ಯ, ನೃತ್ಯ, ಅವಧಾನ, ಕವಿತ್ವ, ಸಿನಿಮಾ,ಅಡುಗೆ ಹೀಗೆ ಒಮ್ಮೆಲೆ ಪಟ್ಟಿ ಮಾಡಲಾಗದಷ್ಟು ಆಳವಿದೆ .

ಇದನ್ನೂ ಓದಿ:ಅಂಕೇಗೌಡ ಸೇರಿ ಮೂವರು ಕನ್ನಡಿಗರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟ, ಇಲ್ಲಿದೆ 45 ಸಾಧಕರ ಪಟ್ಟಿ

ಪ್ರಸಕ್ತ, ವಿದ್ವತ್ ವಲಯದಲ್ಲಿ ಶತಾವಧಾನಿ ಗಣೇಶರು ಫಲ ಬಿಟ್ಟ ಘನವಾದ ಕಲ್ಪವೃಕ್ಷ ಇದ್ದಂತೆ! ಅನೇಕ ಕಲಾವಿದರು, ಸಾಹಿತಿಗಳು ,ನರ್ತಕರು, ಸಂಗೀತಗಾರರು ಗಣೇಶರ ಪಾಂಡಿತ್ಯವನ್ನು ಆಶ್ರಯಿಸಿರುವುದನ್ನು ನಾನು ನೋಡಿ ಬಲ್ಲೆ .

ಇಂತಹ ಸರಸ್ವತಿಯ ವರಪುತ್ರನಿಗೆ ಭಾರತ ಸರ್ಕಾರದ ಅತ್ಯುನ್ನತ ನಾಗರೀಕ ಸನ್ಮಾನ 'ಪದ್ಮಭೂಷಣ' ಸಂದಿರುವುದು ವರ್ಣಿಸಲಾಗದಷ್ಚು ಸಂತೋಷವಾಗಿದೆ .

'ಪದ್ಮ' ಜ್ಞಾನದ ಸಂಕೇಂತವಂತೆ! ಗಣೇಶರಲ್ಲವೆ ನೂರಕ್ಕೆ ನೂರು ಆ ಜ್ಞಾನಕ್ಕೆ ಭೂಷಣ?!

ಪುರುಷ ಸರಸ್ವತಿಗೆ ಹೃದಯಪೂರ್ವಕ ಶುಭಾಶಯಗಳು