ಶಾಲಾ ಬಸ್ಸುಗಳ ಸಂಚಾರವನ್ನು ಆಯಾ ತಾಲ್ಲೂಕುಗಳ ಭೌಗೋಳಿಕ ವ್ಯಾಪ್ತಿಗೆ ಸೀಮಿತಗೊಳಿಸಲು ಸೂಕ್ತ ನಿಯಮಾವಳಿ ರೂಪಿಸುವಂತೆ ಖಾಸಗಿ ಶಾಲಾ ಸಂಘಟನೆ ‘ಅವರ್ ಸ್ಕೂಲ್ಸ್’ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆಗೆ ಮನವಿ ಮಾಡಿದೆ.
ಬೆಂಗಳೂರು (ಜು.05): ವಿದ್ಯಾರ್ಥಿಗಳ ಆರೋಗ್ಯ ಮತ್ತು ಸಾರಿಗೆ ಸುರಕ್ಷತೆ ದೃಷ್ಟಿಯಿಂದ ರಾಜ್ಯಾದ್ಯಂತ ಖಾಸಗಿ ಶಾಲಾ ಬಸ್ಸುಗಳ ಸಂಚಾರವನ್ನು ಆಯಾ ತಾಲ್ಲೂಕುಗಳ ಭೌಗೋಳಿಕ ವ್ಯಾಪ್ತಿಗೆ ಸೀಮಿತಗೊಳಿಸಲು ಸೂಕ್ತ ನಿಯಮಾವಳಿ ರೂಪಿಸುವಂತೆ ಖಾಸಗಿ ಶಾಲಾ ಸಂಘಟನೆ ‘ಅವರ್ ಸ್ಕೂಲ್ಸ್’ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆಗೆ ಮನವಿ ಮಾಡಿದೆ. ಈ ಸಂಬಂಧ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಿಗೆ ಪತ್ರ ಬರೆದಿರುವ ಅವರ್ ಸ್ಕೂಲ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಅರಸ್, ರಾಜ್ಯದಲ್ಲಿ ಬಹಳಷ್ಟು ಶಾಲಾ ವಾಹನಗಳು ಅಂತರ ತಾಲ್ಲೂಕು ವ್ಯಾಪ್ತಿಯಲ್ಲೂ ಸಂಚರಿಸುತ್ತಿರುವುದರಿಂದ ಆ ಶಾಲೆಯ ಮಕ್ಕಳು ಸುಮಾರು ಮೂರರಿಂದ ನಾಲ್ಕು ಗಂಟೆ ಕಾಲ ಪ್ರಯಾಣದಲ್ಲೇ ಕಳೆಯುತ್ತಿದ್ದಾರೆ.
ಇದು ವಿಶೇಷವಾಗಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಉಳಿದಂತೆ ನಿದ್ರೆ, ಆಟ, ಪಾಠದ ಚಟುವಟಿಕೆಗಳಿಗೂ ಸಮಯ ಕಡಿಮೆಯಾಗುತ್ತಿದೆ. ಹಾಗಾಗಿ ಈ ವಾಹನಗಳ ಸಂಚಾರ ಮಿತಿಯನ್ನು ತಾಲೂಕು ವ್ಯಾಪ್ತಿಗೆ ಸೀಮಿತಗೊಳಿಸಿದರೆ ಮಕ್ಕಳ ಪ್ರಯಾಣದ ಸಮಯ 1ರಿಂದ 2 ಗಂಟೆಗೆ ಇಳಿಯಲಿದ್ದು, ಇದು ಮಕ್ಕಳ ಆರೋಗ್ಯ ಮತ್ತು ಸಾರಿಗೆ ಸುರಕ್ಷತೆಗೆ ಸಹಕಾರಿಯಾಗಲಿದೆ ಎಂದು ವಿವರಿಸಿದ್ದಾರೆ.
ಅಲ್ಲದೆ, ಪ್ರಯಾಣ ಸಮಯ ಕಡಿಮೆಯಾಗುವುದರಿಂದ ಪರೀಕ್ಷೆ ಸಮಯದಲ್ಲಿ ಮಕ್ಕಳು ಎದುರಿಸಬಹುದಾದ ಒತ್ತಡ, ಆತಂಕ ಕಡಿಮೆಮಾಡಬಹುದು. ಜತೆಗೆ ಚಾಲಕ ಮತ್ತು ಸಿಬ್ಬಂದಿಯ ದೈಹಿಕ ಆಯಾಸ ಕಡಿಮೆಯಾಗಲಿದೆ. ಶಾಲಾ ವಾಹನಗಳ ಅಪಘಾತದಂತಹ ಪ್ರಕರಣಗಳನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ. ಅಲ್ಲದೆ ನಿಯಮಾನುಸಾರ ರಾಜ್ಯದ ಮಕ್ಕಳು ಸಮೀಪದ ಅಥವಾ ನೆರೆಹೊರೆಯ ಶಾಲೆಗಳಲ್ಲಿ ದಾಖಲಾತಿ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ ಎಂದು ಅವರು ಮನವಿ ಮಾಡಿದ್ದಾರೆ.
