ಕೋವಿಡ್ ಲಸಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹಿಸಿದ್ದಾರೆ.

ಬೆಂಗಳೂರು (ಜು.05): ಕೋವಿಡ್ ಲಸಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಪಕ್ಷ ಹಾಗೂ ಅದರ ನಾಯಕರು ಆಧಾರವಿಲ್ಲದೆ ಕೋವಿಡ್‌ ವ್ಯಾಕ್ಸಿನ್‌ ಅನ್ನು ಅನುಮಾನಿಸುತ್ತಿದ್ದಾರೆ. ಮೋದಿ ಅವರ ಸಾಧನೆ ಸಹಿಸದೆ ವಿನಾಕಾರಣ ಟೀಕಿಸುತ್ತಿದ್ದಾರೆ.

ದೇಶ-ವಿದೇಶಿಗರ ಜೀವ ರಕ್ಷಿಸಿದ ಕೋವಿಡ್‌ ವ್ಯಾಕ್ಸಿನ್‌ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತಿದ್ದಾರೆ. ಕೋಟ್ಯಂತರ ಜನರ ಜೀವ ಉಳಿಸಿದ ವಿಜ್ಞಾನಿಗಳ ಸಮುದಾಯಕ್ಕೆ ಅಪಮಾನ ಎಸಗುತ್ತಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಅವರು ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಕೋವಿಡ್‌ ವ್ಯಾಕ್ಸಿನ್‌ಗೂ ರಾಜ್ಯದಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ತಕ್ಷಣ ವಿಜ್ಞಾನಿಗಳ, ದೇಶದ ಜನರ ಕ್ಷಮೆ ಕೇಳಬೇಕು.

ದೇಶದಲ್ಲಿ ಕಾಂಗ್ರೆಸ್‌ ಪಕ್ಷ 60 ವರ್ಷ ಆಡಳಿತ ನಡೆಸಿದರೂ ಒಂದೇ ಒಂದು ಸ್ವದೇಶಿ ವ್ಯಾಕ್ಸಿನ್‌ ಸಿದ್ಧಪಡಿಸಲಿಲ್ಲ. ಇವರ ಕಾಲದಲ್ಲಿ ಎಲ್ಲವೂ ಆಮದಾಗುತ್ತಿತ್ತು ಎಂದು ವಾಗ್ದಾಳಿ ನಡೆಸಿದರು. ಕೋವಿಡ್‌ ವೇಳೆ ಕೇಂದ್ರ ಸರ್ಕಾರ ಸ್ವದೇಶಿ ವ್ಯಾಕ್ಸಿನ್‌ ಸಿದ್ಧಪಡಿಸಿ ದೇಶದ ಜನರಿಗೆ 240 ಕೋಟಿ ಡೋಸ್‌ ನೀಡಿದೆ. 110 ರಿಂದ 120 ಕೋಟಿ ಜನರು ವ್ಯಾಕ್ಸಿನ್‌ ಪಡೆದಿದ್ದಾರೆ. ಅಲ್ಲದೇ, 150 ದೇಶಗಳಿಗೆ ಭಾರತ ವ್ಯಾಕ್ಸಿನ್‌ ಪೂರೈಸಿದೆ. ಭಾರತದ ಈ ಸಾಧನೆಯನ್ನು ಮುಕ್ತವಾಗಿ ಪ್ರಶಂಶಿಸಬೇಕು. ಆದರೆ ಕಾಂಗ್ರೆಸ್‌ ಮಾಡುತ್ತಿರುವುದೇನು. ಇದು ದೇಶದ ಬಗ್ಗೆ ಕಾಂಗ್ರೆಸ್‌ಗಿರುವ ಮನಸ್ಥಿತಿಯನ್ನು ತೋರ್ಪಡಿಸುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ಸಿನವರು ಮಹಾನ್‌ ಕಳ್ಳರು: ಕಾಂಗ್ರೆಸ್‌ ಡಿಎನ್‌ಎಯಲ್ಲೇ ಪ್ರಜಾಪ್ರಭುತ್ವ, ಜಾತ್ಯಾತೀತತೆ ಇಲ್ಲ. ಕಾಂಗ್ರೆಸ್‌ ಕಮ್ಯುನಲ್‌ ಮತ್ತು ಆ್ಯಂಟಿ ಡೆಮಾಕ್ರಸಿ ಪಾರ್ಟಿ. ಕಾಂಗ್ರೆಸ್ಸಿನವರು ಮಹಾನ್‌ ಕಳ್ಳರು, ಖದೀಮರು, ನಾಲಾಯಕ್‌. ಇಂತಹವರನ್ನು ಬುತ್ತಿಕಟ್ಟಿಕೊಂಡು ಹುಡುಕಿದರೂ ಸಿಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಬಿಜೆಪಿಯ ಹುಬ್ಬ‍ಳ್ಳಿ- ಧಾರವಾಡ ಮಹಿಳಾ ಮೋರ್ಚಾ ವತಿಯಿಂದ ಸೋಮವಾರ ಆಯೋಜಿಸಿದ್ದ ರಾಜ್ಯ ಮಾಕ್‌ ಪಾರ್ಲಿಮೆಂಟ್‌ ಸೆಷನ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಸಂವಿಧಾನದ ಆರ್ಟಿಕಲ್‌ 362 ಪ್ರಕಾರ ನಿಜವಾಗಿ ತುರ್ತಾದ ಕಾರಣಗಳು ಅಂದರೆ, ಆಂತರಿಕ ಗಲಭೆಗಳಾದಾಗ, ಕಾನೂನು ಸುವ್ಯವಸ್ಥೆ ಹದಗೆಟ್ಟಾಗ, ಆರ್ಥಿಕ ಸ್ಥಿತಿ ಸರಿಯಾಗಿರದ ವೇಳೆ, ಯುದ್ಧಗಳಾಗುವ ವೇಳೆ ಮಾತ್ರ ತುರ್ತು ಪರಿಸ್ಥಿತಿ ಹೇರಲು ಅವಕಾಶವಿದೆ. ಆದರೆ, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಕೇವಲ ತಮ್ಮ ಅಧಿಕಾರ ಹೋಗುತ್ತದೆ ಎಂಬ ಕಾರಣಕ್ಕೆ ತುರ್ತು ಪರಿಸ್ಥಿತಿ ಹೇರಿದರು ಎಂದರು.