ಬೊಮ್ಮಾಯಿ ಸರ್ಕಾರಕ್ಕೆ ಓಲಾ, ಉಬರ್ ಡೋಂಟ್‌ಕೇರ್!
- ಬೊಮ್ಮಾಯಿ ಸರ್ಕಾರಕ್ಕೆ ಓಲಾ, ಉಬರ್ ಡೋಂಟ್‌ಕೇರ್!
- ನಿಷೇಧವಿದ್ದರೂ ಆಟೋ ಬಿಂದಾಸ್ ಸಂಚಾರ
- ಅಧಿಕಾರಿಗಳ ಮೌನದೂರಿತ್ತರೂ ಕ್ರಮವಿಲ್ಲ
ಬೆಂಗಳೂರು (ಅ.13) : ಆ್ಯಪ್ ಆಧರಿತ ಆಟೋ ಸೇವೆ ಕಾನೂನು ಬಾಹಿರವಾಗಿದ್ದು, ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯದ ಸಾರಿಗೆ ಇಲಾಖೆ ಅಧಿಕಾರಿಗಳು ನೀಡಿದ್ದ ಸೂಚನೆಗೆ ಓಲಾ, ಉಬರ್ ಹಾಗೂ ರಾರಯಪಿಡೋ ಸಂಸ್ಥೆಗಳು ಸಡ್ಡು ಹೊಡೆದಿವೆ. ರಾಜ್ಯ ಸಾರಿಗೆ ಇಲಾಖೆಯ ಕಠಿಣ ಸೂಚನೆಗೂ ಕ್ಯಾರೇ ಎನ್ನದ ಓಲಾ, ಉಬರ್ ಹಾಗೂ ರಾರಯಪಿಡೋ ಆ್ಯಪ್ ಕಂಪನಿಗಳು ಬುಧವಾರವೂ ರಾಜಾರೋಷವಾಗಿ ಆಟೋರಿಕ್ಷಾ ಸೇವೆ ಮುಂದುವರೆಸಿವೆ.
Bengaluru: ನೋಟಿಸ್‌ಗೆ ಓಲಾ, ಉಬರ್, ರ್ಯಾಪಿಡೋ ಡೋಂಟ್‌ಕೇರ್
ಮತ್ತೊಂದೆಡೆ ತನ್ನ ಸೂಚನೆ ಧಿಕ್ಕರಿಸಿರುವ ಆ್ಯಪ್ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಬೇಕಿದ್ದ ಸಾರಿಗೆ ಇಲಾಖೆಯು ಕೈಕಟ್ಟಿಕುಳಿತಿದ್ದು, ಮಾಹಿತಿ ಕಲೆಹಾಕುತ್ತೇವೆ, ದಂಡ ವಿಧಿಸುತ್ತೇವೆ ಎಂಬ ತೋರಿಕೆಯ ಹೇಳಿಕೆಗೆ ತನ್ನನ್ನು ತಾನು ಸೀಮಿತಿಗೊಳಿಸಿಕೊಂಡಿದೆ. ಈ ಮೂಲಕ ಸಾರಿಗೆ ಇಲಾಖೆ ಸೂಚನೆ ಕೇವಲ ಕಾಗದದ ಮೇಲೆ ಮಾತ್ರ ಉಳಿದಿದೆ.
ಆಟೋರಿಕ್ಷಾ ಸ್ಥಗಿತಕ್ಕೆ ಸೂಚನೆ:
ಕಾರು ಓಡಿಸಲು ಅನುಮತಿ ಪಡೆದು ಅಕ್ರಮವಾಗಿ ಆಟೋರಿಕ್ಷಾ ಸೇವೆ ನೀಡುತ್ತಿರುವ ಓಲಾ, ಉಬರ್ ಕಂಪನಿಗಳ ವಕ್ತಾರರೊಂದಿಗೆ ಮಂಗಳವಾರ ಸಭೆ ನಡೆಸಿದ್ದ ಸಾರಿಗೆ ಇಲಾಖೆ ಆಯುಕ್ತರು ಬುಧವಾರದಿಂದ ಕಡ್ಡಾಯವಾಗಿ ಆ್ಯಪ್‌ನಲ್ಲಿ ಆಟೋರಿಕ್ಷಾ ಸೇವೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದರು. ಒಂದು ವೇಳೆ ಆ್ಯಪ್ ಸಂಯೋಜಿತ ಆಟೋರಿಕ್ಷಾಗಳು ರಸ್ತೆಗಿಳಿದರೆ ಪ್ರತಿ ಆಟೋರಿಕ್ಷಾಗೆ ಐದು ಸಾವಿರ ರು. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಇದು ಹುಸಿ ಎಚ್ಚರಿಕೆ ಎಂಬುದು ಗುರುವಾರ ಸಾಬೀತಾಗಿದ್ದು, ಸರ್ಕಾರದ ಸೂಚನೆಗೆ ಕಿಮ್ಮತ್ತೇ ನೀಡದೇ ಆ್ಯಪ್ ಬುಕ್ಕಿಂಗ್ ಮೂಲಕ ಆಟೋ ರಿಕ್ಷಾಗಳು ಓಡಾಟ ನಡೆಸಿದವು.
ಆಟೋರಿಕ್ಷಾ ಚಾಲಕರ ಸಂಘಗಳ ಒತ್ತಡದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ಯಾವುದೇ ಕಾರಣಕ್ಕೂ ಆ್ಯಪ್ ಸಂಯೋಜಿತ ಆಟೋರಿಕ್ಷಾಗಳನ್ನು ಜಪ್ತಿ ಮಾಡುವುದಿಲ್ಲ, ದಂಡ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇತ್ತ ಚಾಲಕರಿಗೆ ಆ್ಯಪ್ ಕಂಪನಿಗಳಿಂದ ಸ್ಥಗಿತ ಅಥವಾ ಸೇವೆ ವ್ಯತ್ಯಯ ಕುರಿತು ಯಾವುದೇ ಸಂದೇಶ/ ಸೂಚನೆ ಬಂದಿರಲಿಲ್ಲ. ಹೀಗಾಗಿ, ಚಾಲಕರು ಕೂಡಾ ಸಾಮಾನ್ಯ ದಿನಗಳಂತೆ ಆ್ಯಪ್ ಸಂಯೋಜನೆಗಳೊಂದಿಗೆ ಆಟೋರಿಕ್ಷಾ ಚಲಾಯಿಸಿದರು.
ಗ್ರಾಹಕರಿಂದ ದರ ಸುಲಿಗೆ:
ಸಾರಿಗೆ ಇಲಾಖೆ ಸೂಚನೆ ಬಳಿಕವೂ ಆಟೋ ರಿಕ್ಷಾ ಸೇವೆ ಸ್ಥಗಿತವಾಗದಿರುವುದು ಆಟೋ ಚಾಲಕ ಯೂನಿಯನ್‌ಗಳು ಮತ್ತು ಸಾರ್ವಜನಿಕರಿಗೆ ಅಚ್ಚರಿ ಮೂಡಿಸಿದೆ. ಅಲ್ಲದೆ, ಬುಧವಾರವೂ ಸಹ ಆ್ಯಪ್ ಸಂಸ್ಥೆಗಳಿಂದ ಗ್ರಾಹಕರ ಸುಲಿಗೆ ಮುಂದುರೆದಿತ್ತು. ಕನಿಷ್ಠ 100 ಮೀ. ದೂರದ ಹಾದಿಗೂ 59 ರು. ದರವಿತ್ತು. ಇನ್ನು ಒಂದರಿಂದ ಎರಡು ಕಿ.ಮೀ. ದೂರಕ್ಕೆ ಓಲಾ ಆ್ಯಪ್‌ಗಳಲ್ಲಿ 70ರಿಂದ 80 ರು., ಮೂರು ಕಿ.ಮೀಗೆ 100 ರು. ಅಧಿಕ ದರವಿತ್ತು.
ಕೆಲಸಕ್ಕೆ ಬಾರದ ಸಹಾಯವಾಣಿ:
ಸಾರಿಗೆ ಇಲಾಖೆಯೇ ಆ್ಯಪ್ ಸಂಯೋಜಿತ ಆಟೋ ರಿಕ್ಷಾ ಓಡಾಟ ಕಂಡುಬಂದರೆ ದೂರು ನೀಡುವಂತೆ ಸಹಾಯವಾಣಿ ಸಂಖ್ಯೆಯನ್ನು ನೀಡಿತ್ತು. ಬುಧವಾರ 180 ಮಂದಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಇಲಾಖೆಯ ಸಿಬ್ಬಂದಿ ಸಂಬಂಧಪಟ್ಟಅಧಿಕಾರಿಗಳಿಗೆ ತಿಳಿಸುವುದಾಗಿ ಉತ್ತರಿಸಿದ್ದಾರೆ. ಸಹಾಯವಾಣಿ ಆಧರಿಸಿ ಯಾವುದೇ ಕ್ರಮವನ್ನು ಸಾರಿಗೆ ಇಲಾಖೆ ಕೈಗೊಳ್ಳಲಿಲ್ಲ. ಸಾರಿಗೆ ಇಲಾಖೆಯ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಸಾಮಾನ್ಯರಿಗೆ ಒಂದು ನ್ಯಾಯ, ಕಾರ್ಪೋರೇಟ್ ಕಂಪನಿಗಳಿಗೆ ಒಂದು ನ್ಯಾಯ ಎಂದು ಕಿಡಿಕಾರಿದ್ದಾರೆ. ಆಟೋ ಚಾಲಕರ ಸಂಘಗಳು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸಿದ್ದಾರೆ.
ದೂರು ಸಂಗ್ರಹಿಸಿದ್ದೇವೆ,ದಂಡ ವಿಧಿಸುತ್ತೇವೆ: ಸಾರಿಗೆ ಇಲಾಖೆ ಆಯುಕ್ತ
ಓಲಾ, ಉಬರ್ ಆಟೋ ನಿಷೇಧ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ಸರ್ಕಾರದ ಪರ ವಕೀಲರಿಗೆ ನಿಯಮ ಉಲ್ಲಂಘನೆ ನಮ್ಮ ಮಾಹಿತಿ ನೀಡಿದ್ದೇವೆ. ಆ್ಯಪ್‌ಗಳಿಗೆ ಎಷ್ಟುಆಟೋರಿಕ್ಷಾ ಸಂಚರಿಸಿವೆ ಎಂಬ ಮಾಹಿತಿ ಕೇಳಿದ್ದೇವೆ. ಸೈಬರ್ ಅಪರಾಧ ವಿಭಾಗದ ಸಹಾಯದಿಂದ ಆ್ಯಪ್‌ಗಳ ಆಟೋರಿಕ್ಷಾ ಸಂಚಾರ ಮಾಹಿತಿ ಪಡೆಯಲು ಕ್ರಮವಹಿಸಿದ್ದೇವೆ. ಸಂಸ್ಥೆಯ ಹಾಗೂ ಸೈಬರ್ ಅಪರಾಧ ವಿಭಾಗದ ಮಾಹಿತಿ ಕ್ರೂಢೀಕರಿಸಿ ಕಂಪನಿಗಳಿಗೆ ದಂಡ ವಿಧಿಸಲಾಗುತ್ತದೆ. ಯಾವುದೇ ಆಟೋರಿಕ್ಷಾ ಅಥವಾ ಚಾಲಕರ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ಸಾರಿಗೆ ಇಲಾಖೆ ಆಯುಕ್ತ ಎಚ್‌ಎಂಟಿ ಕುಮಾರ್ ತಿಳಿಸಿದ್ದಾರೆ.
ಆ್ಯಪ್ ಡಿಲೀಟ್ ಮಾಡಿದ ಆಟೋ ಚಾಲಕರು
ಆ್ಯಪ್ ಒಪ್ಪಂದದೊಂದಿಗೆ ಆಟೋರಿಕ್ಷಾ ಚಾಲನೆ ಮಾಡುತ್ತಿದ್ದ ಕೆಲ ಚಾಲಕರು ಒಪ್ಪಂದ ಕಡಿತಗೊಳಿಸಿ, ಆ್ಯಪ್‌ಗಳನ್ನು ಡಿಲೀಟ್ ಮಾಡಿದರು. ಈ ಮೂಲಕ ಚಾಲಕರಿಗೂ ಮತ್ತು ಪ್ರಯಾಣಿಕರಿಗೂ ಮೋಸ ಮಾಡುತ್ತಿರುವ ಆ್ಯಪ್‌ಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಕೆಲವೆಡೆ ಆಟೋ ಚಾಲಕರ ಸಂಘಗಳು ಹತ್ತಾರು ಆಟೋರಿಕ್ಷಾಗಳಲ್ಲಿ ಒಮ್ಮೆ ಆ್ಯಪ್ ಡಿಲೀಟ್ ಮಾಡಿಸಿ ಆಕ್ರೋಶ ಹೊರಹಾಕಿದರು.
ಪ್ರಯಾಣಿಕರ ಸುಲಿಗೆಗೆ ಬೆಲೆತೆತ್ತ ಓಲಾ, ಉಬರ್: ಚಾಲಕರು, ಪ್ರಯಾಣಿಕರು ಇಬ್ಬರಿಗೂ ಅನ್ಯಾಯ
ಆ್ಯಪ್‌ಗಳಿಂದ ಸಡ್ಡು
- ಬುಧವಾರದಿಂದ ಆ್ಯಪ್ ಆಟೋ ಸಂಚರಿಸುವಂತಿಲ್ಲ ಎಂದು ಸರ್ಕಾರ ಆದೇಶ
- ಆದರೆ ಎಂದಿನಂತೆ ಆ್ಯಪ್ ಆಟೋಗಳ ಸಂಚಾರ, ಬೇಕಾಬಿಟ್ಟಿದರ ಸುಲಿಗೆ
- ಕೈಕಟ್ಟಿಕುಳಿತ ಸಾರಿಗೆ ಇಲಾಖೆ ಅಧಿಕಾರಿಗಳು: ದಂಡ, ನಿಯಂತ್ರಣ ಇಲ್ಲ
- ಸರ್ಕಾರದ ಸಹಾಯವಾಣಿಗೆ 180ಕ್ಕೂ ಹೆಚ್ಚು ದೂರು, ಆದರೂ ಕ್ರಮವಿಲ್ಲ
ಸರ್ಕಾರದಿಂದಲೇ ಹೊಸ ಆ್ಯಪ್?
ಸಾರಿಗೆ ಇಲಾಖೆ ನೋಟಿಸ್‌ಗೆ ಬಗ್ಗದ ಓಲಾ, ಉಬರ್ ಸಂಸ್ಥೆಗಳಿಗೆ ನಾವು ಜಗ್ಗಲ್ಲ. ಕಾನೂನುಬಾಹಿರ ಕೆಲಸ ಮಾಡಿದರೆ ಸರ್ಕಾರ ಸಹಿಸುವುದಿಲ್ಲ. ಅವಧಿ ಮುಗಿದರೂ ಓಲಾ, ಉಬರ್ ವಾಹನ ಸಂಚರಿಸಿದರೆ ಸೀಜ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾನೂನಿನಲ್ಲಿ ಅವಕಾಶ ಸಿಕ್ಕರೆ ಸರ್ಕಾರದಿಂದಲೇ ಟ್ಯಾಕ್ಸಿ, ಆಟೋಗಳಿಗೆ ಹೊಸ ಆ್ಯಪ್ ಮಾಡಿಕೊಡುತ್ತೇವೆ.
- ಬಿ.ಶ್ರೀರಾಮುಲು, ಸಾರಿಗೆ ಸಚಿವ