ಒಂದು ಕಿ.ಮೀ ಪ್ರಯಾಣಕ್ಕೆ ಬರೋಬ್ಬರಿ 100, ಇನ್ನು ಮಳೆ ಬಂದರೆ, ಟ್ರಾಫಿಕ್‌ ಹೆಚ್ಚಿದ್ದರೆ, ಸಂಜೆ -ಬೆಳಿಗ್ಗೆ ಪೀಕ್‌ ಅವಧಿಯಲ್ಲಿ ಹೇಳದೆ ಕೇಳದೆ ದುಪ್ಪಟ್ಟು ದರವನ್ನು ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿದ್ದಾರೆಂಬ ದೂರುಗಳ ಹಿನ್ನೆಲೆಯಲ್ಲಿ ಓಲಾ, ಉಬರ್‌ ಸೇರಿದಂತೆ ಆ್ಯಪ್‌ ಆಧಾರಿತ ಆಟೋ, ದ್ವಿಚಕ್ರ ವಾಹನಗಳ ಸೇವೆಯನ್ನು ಸ್ಥಗಿತಗೊಳಿಸುವ ರಾಜ್ಯ ಸಾರಿಗೆ ಇಲಾಖೆ ಕ್ರಮವನ್ನು ಸಾರ್ವಜನಿಕರು ಮಾತ್ರವಲ್ಲದೇ ಆಟೋ, ಕ್ಯಾಬ್‌ ಚಾಲಕ ಸಂಘಗಳು ಸ್ವಾಗತಿಸಿವೆ.

ಬೆಂಗಳೂರು (ಅ.08): ಒಂದು ಕಿ.ಮೀ ಪ್ರಯಾಣಕ್ಕೆ ಬರೋಬ್ಬರಿ 100, ಇನ್ನು ಮಳೆ ಬಂದರೆ, ಟ್ರಾಫಿಕ್‌ ಹೆಚ್ಚಿದ್ದರೆ, ಸಂಜೆ -ಬೆಳಿಗ್ಗೆ ಪೀಕ್‌ ಅವಧಿಯಲ್ಲಿ ಹೇಳದೆ ಕೇಳದೆ ದುಪ್ಪಟ್ಟು ದರವನ್ನು ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿದ್ದಾರೆಂಬ ದೂರುಗಳ ಹಿನ್ನೆಲೆಯಲ್ಲಿ ಓಲಾ, ಉಬರ್‌ ಸೇರಿದಂತೆ ಆ್ಯಪ್‌ ಆಧಾರಿತ ಆಟೋ, ದ್ವಿಚಕ್ರ ವಾಹನಗಳ ಸೇವೆಯನ್ನು ಸ್ಥಗಿತಗೊಳಿಸುವ ರಾಜ್ಯ ಸಾರಿಗೆ ಇಲಾಖೆ ಕ್ರಮವನ್ನು ಸಾರ್ವಜನಿಕರು ಮಾತ್ರವಲ್ಲದೇ ಆಟೋ, ಕ್ಯಾಬ್‌ ಚಾಲಕ ಸಂಘಗಳು ಸ್ವಾಗತಿಸಿವೆ.

ಗ್ರಾಹಕರು ಮತ್ತು ಚಾಲಕರ ಸಂಪರ್ಕ ಕಲ್ಪಿಸಿಕೊಟ್ಟು ಸಂಪರ್ಕ ಶುಲ್ಕವಾಗಿ ಬೆರಳೆಣಿಕೆ ರುಪಾಯಿಯಷ್ಟುಶುಲ್ಕ ಪಡೆಯಬೇಕಿದ್ದ ಈ ಆ್ಯಪ್‌ಗಳು ಗ್ರಾಹಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದವು. ಸರ್ಕಾರಿ ನಿಯಮದಂತೆ ಮೀಟರ್‌ ದರವನ್ನು ಆಟೋ/ಕ್ಯಾಬ್‌ ಚಾಲಕರಿಗೆ ನೀಡಿ ಮಿಕ್ಕ ಹಣವನ್ನು ತಾವೇ ಉಳಿಸಿಕೊಳ್ಳುತ್ತಿದ್ದವು. ಈ ಮೂಲಕ ಗ್ರಾಹಕರು ಮತ್ತು ಚಾಲಕರಿಬ್ಬರಿಗೂ ಅನ್ಯಾಯವೆಸಗುತ್ತಿದ್ದವು. ಸದ್ಯ ಸಾರಿಗೆ ಇಲಾಖೆ ಸ್ಥಗಿತಗೊಳಿಸುವ ಜತೆಗೆ ಕ್ಯಾಬ್‌ಗಳಿಗೂ ನಿಗದಿತ ದರ ವಸೂಲಿಗೆ ಸೂಚಿಸಿರುವುದು ಸಮಾಧಾನಕರ ಎಂದು ವಿವಿಧ ಆಟೋ ಚಾಲಕರ ಸಂಘಗಳು ಪ್ರತಿಕ್ರಿಯಿಸಿವೆ.

ಓಲಾ, ಉಬರ್‌, ರ್ಯಾಪಿಡೋ ಆಟೋ ಸರ್ವೀಸ್‌ ನಿಷೇಧ!

ದುಬಾರಿ ದರ ವಸೂಲಿ: ಓಲಾ ಮತ್ತು ಉಬರ್‌ ಎರಡು ಕಿ.ಮೀಗಿಂತ ಕಡಿಮೆ ದೂರವಿದ್ದರೂ ಕನಿಷ್ಠ 100 ಪ್ರಯಾಣ ಶುಲ್ಕ ವಿಧಿಸುತ್ತಿದ್ದವು. 1/1.5 ಕಿಮೀ ದೂರಕ್ಕೆ ಓಲಾ, ಉಬರ್‌ ಆ್ಯಪ್‌ಗಳಲ್ಲಿ ರೈಡ್‌ ದರ 60-65 ಮತ್ತು ಪ್ರವೇಶ ಶುಲ್ಕ .40 ಸೇರಿದಂತೆ ಒಟ್ಟು .100-105 ದರವನ್ನು ತೋರಿಸುತ್ತಿತ್ತು. ಈ ಬಗ್ಗೆ ಹಲವು ಗ್ರಾಹಕರು ಸಾರಿಗೆ ಇಲಾಖೆಗೆ ದೂರು ನೀಡಿದ್ದರು.

ಆ್ಯಪ್‌ಗಳಲ್ಲಿ ಶೇ.40 ರಷ್ಟು ಕಮಿಷನ್‌!: ಗ್ರಾಹಕರಿಂದ 100 ರು.ಪಡೆದರೆ ನಮಗೆ 60 ಗಳನ್ನು ನೀಡಿ ಉಳಿದ 40 ಕಮಿಷನ್‌ಗೆ ತೆಗೆದುಕೊಳ್ಳುತ್ತಾರೆ. ಪ್ರಯಾಣ ಆರಂಭಕ್ಕೂ ಮುನ್ನ ದರ ತಿಳಿದಿರುವುದಿಲ್ಲ. ಪ್ರಯಾಣ ಕೊನೆಯಾದ ಬಳಿಕ ಹಣ ಪಾವತಿಸುವ ಸಂದರ್ಭದಲ್ಲಿ ಆ್ಯಪ್‌ಗಳು ವಿಧಿಸಿರುವ ದರವನ್ನು ಕಂಡು ನಮಗೆ ಅಚ್ಚರಿಯಾಗುತ್ತದೆ ಎಂದು ಓಲಾ ಜತೆ ಒಪ್ಪಂದ ಮಾಡಿಕೊಂಡು ಆಟೋ ಓಡಿಸುತ್ತಿದ್ದ ಚಾಲಕ ಗಣೇಶ್‌ ತಿಳಿಸಿದರು.

ಸದ್ಯ ಆಟೋ ದರ ಎಷ್ಟಿದೆ?: ಬೆಂಗಳೂರಿನಲ್ಲಿ ಕನಿಷ್ಠ ಆಟೋ ದರ ಮೊದಲ 2 ಕಿಮೀಗೆ 30 ರು., ನಂತರದ ಪ್ರತಿ ಕಿ.ಮೀಗೆ .15, ಇದೆ. ಮೊದಲ 5 ನಿಮಿಷಕ್ಕೆ ಯಾವುದೇ ಕಾಯುವ ಶುಲ್ಕ (ವೇಟಿಂಗ್‌ ಚಾರ್ಜ್‌) ಇರುವುದಿಲ್ಲ ಮತ್ತು ನಂತರ ಪ್ರತಿ 15 ನಿಮಿಷಕ್ಕೆ .5 ಇದೆ. ರಾತ್ರಿ ಪ್ರಯಾಣದಲ್ಲಿ (ರಾತ್ರಿ 10 ರಿಂದ ಬೆಳಿಗ್ಗೆ 5) ಶೇ.50 ದರ ಹೆಚ್ಚು ನಿಗದಿಪಡಿಸಲಾಗಿದೆ.

ಟ್ಯಾಕ್ಸಿ ದರ ಎಷ್ಟಿದೆ?: ಬೆಂಗಳೂರಿನಲ್ಲಿ .5 ರಿಂದ 10 ಲಕ್ಷ ಮೌಲ್ಯದ ಟ್ಯಾಕ್ಸಿ/ಕ್ಯಾಬ್‌ಗಳ ಕನಿಷ್ಠ ದರ ಮೊದಲ 4 ಕಿ.ಮೀಗೆ 100 ರು., ನಂತರ ಒಂದು ಕಿ.ಮೀಗೆ 21. ರು., ಕಾಯುವ ಶುಲ್ಕ (ವೇಟಿಂಗ್‌ ಚಾರ್ಜ್‌) ಮೊದಲ 20 ನಿಮಿಷಕ್ಕೆ ಯಾವುದೇ ಕಾಯುವ ಶುಲ್ಕ ಇರುವುದಿಲ್ಲ ಮತ್ತು ನಂತರ ಪ್ರತಿ 15 ನಿಮಿಷಕ್ಕೆ 10 ರು. ನಿಗದಿ ಪಡಿಸಲಾಗಿದೆ. ಬಹುತೇಕ ಊಬರ್‌, ಓಲಾ ಕ್ಯಾಬ್‌ಗಳು 5 ರಿಂದ 10 ಲಕ್ಷ ರು. ಮೌಲ್ಯದ್ದಾಗಿದ್ದು, ಇದೇ ದರ ನಿಗದಿಯಾಗಿದೆ. 10 -15 ಲಕ್ಷ ರು. ಹಾಗೂ 16 ಲಕ್ಷ ರು ಮೇಲ್ಪಟ್ಟವಾಹನಗಳಿಗೆ ಪ್ರತ್ಯೇಕವಾಗಿ ಹೆಚ್ಚು ದರ ನಿಗದಿ ಮಾಡಲಾಗಿದೆ.

ಆ್ಯಪ್‌ ಆಧಾರಿತ ಆಟೋರಿಕ್ಷಾಗಳು ಗ್ರಾಹಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದವು. ಆ್ಯಪ್‌ಗಳಲ್ಲಿ ಪ್ರಯಾಣ ದರವನ್ನು ಹೆಚ್ಚಿಸಿದ ನಂತರ ಆಟೋಗಳಿಗೆ ಸಾಕಷ್ಟುಗ್ರಾಹಕರ ಇಳಿಕೆ ಕಂಡುಬಂದಿದೆ. ದುಬಾರಿ ದರದಿಂದ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸಲು ಬಯಸುವವರು ಮತ್ತು ವಾಹನಗಳಿಲ್ಲದವರು ಮಾತ್ರ ಆಟೋ ಅವಲಂಬಿಸುವಂತಾಗಿದೆ. ಸದ್ಯ ಸಾರಿಗೆ ಇಲಾಖೆ ಕ್ರಮದಿಂದ ದುಬಾರಿ ದರಕ್ಕೆ ಕಡಿವಾಣ ಬೀಳಲಿದೆ.
- ಡಿ.ರುದ್ರಮೂರ್ತಿ, ಅಧ್ಯಕ್ಷ, ಆಟೋ ರಿಕ್ಷಾ ಚಾಲಕರ ಒಕ್ಕೂಟ (ಎಆರ್‌ಡಿಯು)

ಆಟೋ ಹತ್ತಿದ್ರೆ 100 ರೂಪಾಯಿ, ಜನರ ರಕ್ತ ಹೀರುವ ಓಲಾ, ಊಬರ್‌ಗೆ ಸಾರಿಗೆ ಇಲಾಖೆ ನೋಟಿಸ್‌!

ಒಂದೂವರೆ ವರ್ಷದಿಂದ ಓಲಾ ಆಟೋ ಸೇವೆ ಆರಂಭವಾಗಿದ್ದು, ಅನುಮತಿ ಇಲ್ಲದೆ ಆಟೋ ಓಡಿಸುತ್ತಿದ್ದಾರೆ. ಕ್ಯಾಬ್‌ಗಳಿಗೂ ಹೆಚ್ಚು ದರ ವಿಧಿಸಿ ನಮಗೆ ಸರ್ಕಾರ ವಿಧಿಸಿದ ದರ ನೀಡಿ, ಮಿಕ್ಕ ಹಣವನ್ನು ಓಲಾ, ಉಬರ್‌ನವರು ಪಡೆಯುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆಗೆ ದೂರು ನೀಡಲಾಗಿತ್ತು. ಸದ್ಯ ಕ್ರಮಕೈಗೊಂಡಿರುವುದು ಸ್ವಾಗತಾರ್ಹ.
- ತನ್ವೀರ್‌ ಪಾಷಾ, ಅಧ್ಯಕ್ಷ ಓಲಾ ಚಾಲಕ ಸಂಘ