Bengaluru: ನೋಟಿಸ್‌ಗೆ ಓಲಾ, ಉಬರ್, ರ್ಯಾಪಿಡೋ ಡೋಂಟ್‌ಕೇರ್
ರಾಜ್ಯ ಸಾರಿಗೆ ಇಲಾಖೆಯು ಓಲಾ, ಉಬರ್ ಹಾಗೂ ರ್ಯಾಪಿಡೋ ಆ್ಯಪ್‌ಗಳಿಗೆ ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನ ಸೇವೆಯನ್ನು ತಕ್ಷಣಕ್ಕೆ ಸ್ಥಗಿತಗೊಳಿಸಲು ಸೂಚನೆ ನೀಡಿದ ಬಳಿಕವು ಈ ಕಂಪನಿಗಳು ಶನಿವಾರ ಎಂದಿನಂತೆಯೇ ಆಟೋರಿಕ್ಷಾ ಮತ್ತು ಬೈಕ್ ಸೇವೆ ಮುಂದುವರೆಸಿವೆ.
ಬೆಂಗಳೂರು (ಅ.09): ರಾಜ್ಯ ಸಾರಿಗೆ ಇಲಾಖೆಯು ಓಲಾ, ಉಬರ್ ಹಾಗೂ ರ್ಯಾಪಿಡೋ ಆ್ಯಪ್‌ಗಳಿಗೆ ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನ ಸೇವೆಯನ್ನು ತಕ್ಷಣಕ್ಕೆ ಸ್ಥಗಿತಗೊಳಿಸಲು ಸೂಚನೆ ನೀಡಿದ ಬಳಿಕವು ಈ ಕಂಪನಿಗಳು ಶನಿವಾರ ಎಂದಿನಂತೆಯೇ ಆಟೋರಿಕ್ಷಾ ಮತ್ತು ಬೈಕ್ ಸೇವೆ ಮುಂದುವರೆಸಿವೆ. ಮಾತ್ರವಲ್ಲದೇ ಗ್ರಾಹಕರಿಂದ ರಾಜಾರೋಷವಾಗಿ ದರ ಸುಲಿಗೆ ಮುಂದುವರೆಸುವ ಮೂಲಕ ಸಾರಿಗೆ ಇಲಾಖೆಯ ನೋಟಿಸ್ ಅನ್ನು ಮೂರು ಸಂಸ್ಥೆಗಳು ಸಂಪೂರ್ಣವಾಗಿ ಧಿಕ್ಕರಿಸಿವೆ. ಈ ಸಂಸ್ಥೆಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಸಾರಿಗೆ ಇಲಾಖೆ ನೋಟಿಸ್‌ಗೆ ಸೀಮಿತ, ದರ ಸುಲಿಗೆ ನಿಲ್ಲುವುದಿಲ್ಲ ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರು ಓಡಿಸಲು ಅನುಮತಿ ಪಡೆದು ಅಕ್ರಮವಾಗಿ ಆಟೋರಿಕ್ಷಾ ಸೇವೆ ನೀಡುತ್ತಿರುವ ಮತ್ತು ಗ್ರಾಹಕರಿಂದ ದುಬಾರಿ ದರ ವಸೂಲಿ ಮಾಡುತ್ತಿದ್ದ ಹಿನ್ನೆಲೆ ಗುರುವಾರ (ಅ.6ಕ್ಕೆ) ಸಾರಿಗೆ ಇಲಾಖೆ ಓಲಾ, ಉಬರ್ ಹಾಗೂ ರ್ಯಾಪಿಡೋ ಕಂಪನಿಗಳಿಗೆ ನೋಟಿಸ್ ನೀಡಿತ್ತು. ತತ್‌ಕ್ಷಣದಿಂದ ಆಟೋ/ದ್ವಿಚಕ್ರ ವಾಹನ ಸೇವೆ ನಿಲ್ಲಿಸಬೇಕು, ದುಬಾರಿ ದರ ವಸೂಲಿ ಕುರಿತು ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿತ್ತು. ನೋಟಿಸ್ ನೀಡಿ ಮೂರು ದಿನಗಳಾದರೂ ಸಂಸ್ಥೆಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಜತೆಗೆ ಬೆಂಗಳೂರಿನಲ್ಲಿ ಓಲಾದ ಆಟೋರಿಕ್ಷಾ, ರ್ಯಾಪಿಡೊ, ಉಬರ್ ಆಟೋರಿಕ್ಷಾ ಮತ್ತು ಬೈಕ್‌ಗಳು ಓಡಾಟ ನಡೆಸುತ್ತಲೆ ಇವೆ.
ಪ್ರಯಾಣಿಕರ ಸುಲಿಗೆಗೆ ಬೆಲೆತೆತ್ತ ಓಲಾ, ಉಬರ್: ಚಾಲಕರು, ಪ್ರಯಾಣಿಕರು ಇಬ್ಬರಿಗೂ ಅನ್ಯಾಯ
ಕನಿಷ್ಠ ದೂರಕ್ಕೆ 80-90: ಸಾರ್ವಜನಿಕರ ಆಕ್ರೋಶ ಸಾರಿಗೆ ಇಲಾಖೆ ಕ್ರಮದಿಂದ ಆ್ಯಪ್‌ಗಳಲ್ಲಿ ಆಟೋರಿಕ್ಷಾ ಸೇವೆ ಸ್ಥಗಿತವಾಗಿರುತ್ತದೆ ಮತ್ತು ಕ್ಯಾಬ್ ದರ ತಗ್ಗಿರುತ್ತದೆ ಎಂದುಕೊಂಡಿದ್ದ ಸಾರ್ವಜನಿಕರಿಗೆ ನಿರಾಸೆಯಾಗಿದೆ. ಶನಿವಾರ ಸಹ ಗ್ರಾಹಕರು ಒಂದರಿಂದ ಎರಡು ಕಿ.ಮೀ ದೂರಕ್ಕೆ ಓಲಾ ಆ್ಯಪ್‌ಗಳಲ್ಲಿ 80 ರಿಂದ 90, ಉಬರ್‌ನಲ್ಲಿ 70 ರಿಂದ 80, ರ್ಯಾಪಿಡೋ ಆಟೋದಲ್ಲಿ 65-70 ಗಿಂತ ಹೆಚ್ಚು ದರ ನೀಡಿ ಪ್ರಯಾಣಿಸಿದ್ದಾರೆ. ಕೇವಲ ಅರ್ಧ ಕಿ.ಮೀಗಿಂತ ಕಡಿಮೆ ದೂರಕ್ಕೆ ಓಲಾ ಆಟೋ 70 ಕೇಳಿರುವ ಬಗ್ಗೆ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಗ್ರಾಹಕರೊಬ್ಬರು ಹಾಕಿ ಸಿಟ್ಟು ತೋಡಿಕೊಂಡಿದ್ದಾರೆ.
ಸಾರಿಗೆ ಇಲಾಖೆ ಸ್ಪಿಚ್ ಆಫ್: ನೋಟಿಸ್ ನೀಡಿ ಮೂರು ದಿನಗಳಾದರೂ ಆ್ಯಪ್‌ಗಳು ಅನಧಿಕೃತ ಸೇವೆಯನ್ನು ಸ್ಥಗಿತಗೊಳಿಸದಿದ್ದರೂ ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಶನಿವಾರ ಸಾರಿಗೆ ಇಲಾಖೆ ಆಯುಕ್ತರಿಂದ ಹಿಡಿದು ಬೆಂಗಳೂರಿನ ಎಲ್ಲಾ ಸಾರಿಗೆ ವಲಯಗಳ ಜಂಟಿ ಆಯುಕ್ತರ ಪೋನ್ ಸ್ಪಿಚ್ ಆಫ್ ಇತ್ತು. ಸಾರಿಗೆ ಇಲಾಖೆ ದೂರು ನೀಡುವ ಸಹಾಯವಾಣಿಯು ಸ್ಥಗಿತವಾಗಿತ್ತು (ಔಟ್‌ಆಫ್ ಆರ್ಡರ್). ನೋಟಿಸ್ ನೀಡಿ ಸುಮ್ಮನಾಗಿರುವ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶದ ನುಡಿಗಳನ್ನಾಡಿದ್ದಾರೆ. ನೋಟಿಸ್‌ಗೆ ಸಾರಿಗೆ ಇಲಾಖೆ ಸೀಮಿತ ಎಂದು ಕೆಲವರು ವ್ಯಂಗ್ಯವಾಡಿದ್ದರೆ, ಕೆಲವು ಆಟೋ ಚಾಲಕರು ಸಾರಿಗೆ ಇಲಾಖೆ ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡಿದ್ದು, ಹೀಗಾಗಿಯೇ ಆ್ಯಪ್‌ಗಳು ರಾಜಾರೋಷಾವಾಗಿ ಆಟೋ, ಬೈಕ್‌ಗಳನ್ನು ಓಡಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಓಲಾ, ಉಬರ್, ರ್ಯಾಪಿಡೋ ಆಟೋ ಸರ್ವೀಸ್ ನಿಷೇಧ!
ಜಪ್ತಿಗೆ ಸಚಿವ ಶ್ರೀರಾಮುಲು ಸೂಚನೆ: ಸಾರಿಗೆ ಇಲಾಖೆಯಿಂದ ಆದೇಶ ಹೊರಡಿಸಿದ ಬಳಿಕವೂ ಸಂಚರಿಸುತ್ತಿರುವ ಓಲಾ ಹಾಗೂ ಊಬರ್ ಆಟೋಗಳನ್ನು ಜಪ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಲಾ, ಊಬರ್ ಬಗ್ಗೆ ಹಲವರಿಂದ ದೂರುಗಳು ಬಂದಿದ್ದವು. ಹೀಗಾಗಿ ನೋಟಿಸ್ ನೀಡಿ ಸೇವೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿತ್ತು. ಜತೆಗೆ ಕ್ಯಾಬ್‌ಗಳಿಗೆ ನೀಡಿರುವ ಪರವಾನಗಿಯ ಷರತ್ತುಗಳಿಗೆ ಬದ್ಧವಾಗಿ ಸೇವೆ ಒದಗಿಸಬೇಕು. ಪರವಾನಗಿ ಪಡೆಯದ ತ್ರಿಚಕ್ರ, ದ್ವಿಚಕ್ರ ವಾಹನಗಳನ್ನು ಆ್ಯಪ್ ಆಧಾರಿತವಾಗಿ ಓಡಿಸಬಾರದು ಎಂದು ಸ್ಪಷ್ಟನಿರ್ದೇಶನ ನೀಡಲಾಗಿತ್ತು. ಹೀಗಿದ್ದರೂ ಕೆಲವು ಆಟೋಗಳು ಸಂಚರಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಅಂತಹ ವಾಹನಗಳನ್ನು ಜಪ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎರಡು ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.