ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕಾದಾಟದ ಬಣ ರಾಜಕೀಯದ ಚಟುವಟಿಕೆ ಮತ್ತಷ್ಟು ತೀವ್ರಗೊಂಡಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪರ ಶಾಸಕರು, ಸಚಿವರ ಜತೆಗೆ ವಿವಿಧ ಮಠಾಧೀಶರು, ಸಮುದಾಯದ ಸಂಘಟನೆಗಳು ಸಹ ಬ್ಯಾಟ್ ಬೀಸಿವೆ.
ಬೆಂಗಳೂರು (ನ.28): ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕಾದಾಟದ ಬಣ ರಾಜಕೀಯದ ಚಟುವಟಿಕೆ ಮತ್ತಷ್ಟು ತೀವ್ರಗೊಂಡಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪರ ಶಾಸಕರು, ಸಚಿವರ ಜತೆಗೆ ವಿವಿಧ ಮಠಾಧೀಶರು, ಸಮುದಾಯದ ಸಂಘಟನೆಗಳು ಸಹ ಬ್ಯಾಟ್ ಬೀಸಿವೆ. ಸಿದ್ದರಾಮಯ್ಯ ಅವರ ನಿವಾಸದಲ್ಲಿ ಡಾ। ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ। ಎಚ್.ಸಿ.ಮಹದೇವಪ್ಪ ತಂಡ ತೀವ್ರ ಚರ್ಚೆ ನಡೆಸಿದೆ. ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಬೆಂಬಲಿಗರಾದ ಕದಲೂರು ಉದಯ್ ಸೇರಿ ಹಲವು ಶಾಸಕರು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ। ಯತೀಂದ್ರ ಅವರು, 2028ರವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ. ಅವರನ್ನು ಕೆಳಗಿಳಿಸುವ ಯಾವುದೇ ಕಾರಣ ಪಕ್ಷದ ಮುಂದಿಲ್ಲ. ಇಂತಹ ಕೂಗೇ ಬರಬಾರದಿತ್ತು ಎಂದು ಬಹಿರಂಗ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ. ಇನ್ನು ಒಕ್ಕಲಿಗರ ಸಂಘದ ಪದಾಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಶೋಷಿತ ವರ್ಗಗಳ ಒಕ್ಕೂಟ, ಕಾಂಗ್ರೆಸ್‌ಗೆ ಓಟು ನೀಡಲು ಅಹಿಂದ ಮತದಾರರು ಬೇಕು. ಮಜಾ ಮಾಡಲು ಒಕ್ಕಲಿಗರು ಬೇಕೇ ಎಂದು ಪ್ರಶ್ನಿಸಿದೆ.
ಶುಕ್ರವಾರ ಕರ್ನಾಟಕ ಪ್ರದೇಶ ಕುರುಬರ ಸಂಘವೂ ಸಭೆ ಕರೆದಿದೆ. ಜತೆಗೆ ಎಐಸಿಸಿ ಹಿಂದುಳಿದ ವರ್ಗಗಳ ಸದಸ್ಯ, ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರೂ ಸುದ್ದಿಗೋಷ್ಠಿ ಕರೆದಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಕುರ್ಚಿ ಹೋರಾಟ ಜಾತಿಗಳ ನಡುವಿನ ಹೋರಾಟವಾಗಿ ಬದಲಾಗುವ ಆತಂಕ ಸೃಷ್ಟಿಯಾಗಿದೆ.
ದೆಹಲಿಗೆ ಕರೆಸಿ ಬಗೆಹರಿಸುತ್ತೇವೆ-ಖರ್ಗೆ: ಮತ್ತೊಂದೆಡೆ ಗುರುವಾರ ದೆಹಲಿಗೆ ತೆರಳುವ ಮೊದಲು ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಕೆಲವರನ್ನು ದೆಹಲಿಗೆ ಕರೆಸಿ ಮಾತುಕತೆ ನಡೆಸಿ ಎಲ್ಲವನ್ನೂ ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ.
ಕರೆದರೆ ಹೋಗುತ್ತೇವೆ-ಸಿಎಂ, ಡಿಸಿಎಂ: ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹೈಕಮಾಂಡ್ ಕರೆದರೆ ದೆಹಲಿಗೆ ಹೋಗಲು ಸಿದ್ದವಿದ್ದೇವೆ. ಇಲ್ಲಿಯವರೆಗೆ ತಮ್ಮನ್ನು ಯಾರೂ ಕರೆದಿಲ್ಲ ಎಂದಿದ್ದಾರೆ.
ಡಿಕೆಶಿ ಪರ ಸ್ವಾಮೀಜಿಗಳ ಬ್ಯಾಟಿಂಗ್
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರ ಸ್ವಾಮೀಜಿಗಳು ಬ್ಯಾಟಿಂಗ್ ನಡೆಸಿದ್ದಾರೆ.ಮಾನವೀಯತೆ ದೃಷ್ಟಿಯಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು. ಇಲ್ಲದಿದ್ದರೆ ಸರ್ಕಾರ ಪತನವಾಗುತ್ತದೆ ಎಂದು ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ದೇಗುಲಹಳ್ಳಿ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಅವರು ಸಿದ್ದರಾಮಯ್ಯ ಅವರ ಮೊದಲ ಎರಡೂವರೆ ವರ್ಷಗಳ ಅವಧಿಗೆ ಸಹಕಾರ ನೀಡಿದ್ದಾರೆ. ಹಾಗಾಗಿ, ಸಿದ್ದರಾಮಯ್ಯ ಸ್ವಇಚ್ಛೆಯಿಂದ ಸಿಎಂ ಸ್ಥಾನವನ್ನು ತ್ಯಾಗ ಮಾಡಬೇಕು. ಇಲ್ಲದಿದ್ದರೆ ಸಾರ್ವಜನಿಕರಲ್ಲಿ ಅವರ ಬಗ್ಗೆ ಒಳ್ಳೆಯ ಭಾವನೆ ಮೂಡುವುದಿಲ್ಲ. ಭ್ರಷ್ಟ ಸಿದ್ದರಾಮಯ್ಯ ಎಂದು ಟೀಕಿಸುವ ಸಾಧ್ಯತೆಗಳಿವೆ ಎಂದರು. ಸಿದ್ದರಾಮಯ್ಯ ಮೊಂಡು ಮನುಷ್ಯ. ಅವರು ಹಠ ಬಿಡಬೇಕು. ಅಧಿಕಾರ ಹಸ್ತಾಂತರಕ್ಕೆ ಒಪ್ಪದಿದ್ದರೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಭವಿಷ್ಯ ನುಡಿದರು.
ನಾನು ಯಾರ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ಸದ್ಯದ ರಾಜಕೀಯ ಸನ್ನಿವೇಶಗಳನ್ನು ನೋಡಿ ನಾನು ಪ್ರಾಮಾಣಿಕತೆಯಿಂದ ಈ ಹೇಳಿಕೆ ನೀಡುತ್ತಿದ್ದೇನೆ ಎಂದರು. ಇದೇ ವೇಳೆ, ಮಾಧ್ಯಮದ ಜೊತೆ ಮಾತನಾಡಿದ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ಪಕ್ಷದ ಹಿರಿಯರು ಕೊಟ್ಟ ಮಾತಿನಂತೆ ಡಿ.ಕೆ.ಶಿವಕುಮಾರ ಅವರಿಗೆ ಮುಖ್ಯಮಂತ್ರಿ ಹುದ್ದೆಗೆ ಒಂದು ಅವಕಾಶ ನೀಡಬೇಕು ಎಂಬುದು ಒಕ್ಕಲಿಗ ಸಮುದಾಯದ ಪ್ರಬಲ ಆಶಯ. ಮಾತು ಕೊಟ್ಟಿದ್ದೇ ಆದರೆ, ಮಾತಿನಂತೆ ನಡೆದುಕೊಳ್ಳಬೇಕು. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬ ವಾಕ್ಯವನ್ನು ನಾವು ಪರಿಪಾಲಿಸಿಕೊಂಡು ಬಂದವರು. ಆ ಪಕ್ಷದ ಹಿರಿಯರು ಮಾತು ಕೊಟ್ಟಿದ್ದರೆ, ಅದನ್ನು ಉಳಿಸಿಕೊಳ್ಳಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.


