ರಾಯಚೂರಿನ ಮರಾಟ ಗ್ರಾಮದಲ್ಲಿ ರಸ್ತೆ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜು ಅವರು ಕೆಆರ್ಐಡಿಎಲ್ ಅಧಿಕಾರಿಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು. 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದರೂ ಕೆಲಸ ಆರಂಭಿಸದ ಅಧಿಕಾರಿಗೆ ವಾರ್ನ್ ಕೊಟ್ಟ ಸಚಿವರು
ರಾಯಚೂರು (ನ.24): ರಸ್ತೆ ಕಾಮಗಾರಿ ನಡೆಸುವಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಯೊಬ್ಬರ ವಿರುದ್ಧ ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜು (NS Boseraju) ಅವರು ಸಾರ್ವಜನಿಕವಾಗಿಯೇ ಹಿಗ್ಗಾಮುಗ್ಗಾ ಜಾಡಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಘಟನೆ ನಡೆದದ್ದು ಎಲ್ಲಿ?
ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಮರಾಟ ಗ್ರಾಮದಲ್ಲಿ ನಿನ್ನೆ (ಭಾನುವಾರ) ಈ ಘಟನೆ ನಡೆದಿದೆ. ಮರಾಟ ಗ್ರಾಮದ ಶಾಲಾ ಕಟ್ಟಡ ಉದ್ಘಾಟನೆಗೆ ಸಚಿವರು ಆಗಮಿಸಿದ್ದರು. ಈ ವೇಳೆ ಮಾನ್ವಿ ಶಾಸಕ ಹಂಪಯ್ಯ ನಾಯಕ್ ಹಾಗೂ ಸಂಸದ ಕುಮಾರ್ ನಾಯಕ್ ಕೂಡ ಸಾಥ್ ನೀಡಿದ್ದರು.
2 ಕೋಟಿ ರೂ. ಅನುದಾನ ಬಿಡುಗಡೆಯಾದ್ರೂ ಕಾಮಗಾರಿ ಇಲ್ಲ!
ಕಾರ್ಯಕ್ರಮದ ವೇಳೆ ಮರಾಟ ಹಾಗೂ ಬಾಗಲವಾಡ ಗ್ರಾಮಗಳ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಸಚಿವರಿಗೆ ದೂರು ನೀಡಿದರು. ಸರ್ಕಾರದಿಂದ ಈ ರಸ್ತೆಗಾಗಿ ಈಗಾಗಲೇ 2 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದರೂ, ಕಾಮಗಾರಿ ಆರಂಭಿಸದ ವಿಷಯ ತಿಳಿದು ಸಚಿವರು ಕೋಪಗೊಂಡರು.
ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆ:
ಸ್ಥಳದಲ್ಲೇ ಇದ್ದ ಕೆಆರ್ಐಡಿಎಲ್ (KRIDL) ಎಇಇ ಹನುಮಂತರಾಯ ಅವರನ್ನು ಕರೆದ ಸಚಿವರು, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸರ್ಕಾರದಿಂದ ಹಣ ಬಂದಿದ್ರೂ ಯಾಕ್ರಯ್ಯಾ ಕೆಲ್ಸ ಮಾಡಿಲ್ಲ? ಕತ್ತೆ ಕಾಯ್ತಿದ್ದೀರಾ ಏನು? ಮನುಷ್ಯ ಇದ್ದಿ.. ಏನ್ ಇದ್ದಿ? ಜನ ರಾತ್ರಿ ಎಲ್ಲಾ ಹದಗೆಟ್ಟ ರಸ್ತೆಯಲ್ಲೇ ಓಡಾಡಬೇಕಾ? ನಾಳೆ ಬೆಳಿಗ್ಗೆಯೇ ರಸ್ತೆ ಕಾಮಗಾರಿ ಶುರುವಾಗ್ಬೇಕು. ಇಲ್ಲಾಂದ್ರೆ ಕಟ್ಟಿ ಹಾಕಿ ಒದಿತೀನಿ ನೋಡು. ನಿನ್ನ ಸಸ್ಪೆಂಡ್ ಏನೂ ಮಾಡಲ್ಲ, ನೇರವಾಗಿ ಎನ್ಕ್ವಾಯರಿ ಮಾಡ್ಸಿ ಜೈಲಿಗೆ ಹಾಕಿಸ್ತೇನೆ ನೋಡು.. ಎಂದು ಸಚಿವರು ಎಇಇಗೆ ಚಳಿ ಬಿಡಿಸಿದ್ದಾರೆ.


