Asianet Suvarna News Asianet Suvarna News

ಚಾಮುಂಡಿಬೆಟ್ಟ ಒಂದು ಧಾರ್ಮಿಕ ಕ್ಷೇತ್ರ. ಅಲ್ಲಿಗೆ ರೋಪ್‌ ವೇ ಬೇಡ: ಸಂಸದ ಪ್ರತಾಪ ಸಿಂಹ

ಹಿಂದಿನ ಸರ್ಕಾರದಲ್ಲಿಯೇ ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ಬೇಡವೆಂದು ನಿರ್ಣಯಿಸಲಾಗಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು. ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟ ಒಂದು ಧಾರ್ಮಿಕ ಕ್ಷೇತ್ರ. 

No Ropeway to Chamundibetta Says MP Pratap Simha At Mysuru gvd
Author
First Published Dec 30, 2023, 8:50 PM IST

ಮೈಸೂರು (ಡಿ.30): ಹಿಂದಿನ ಸರ್ಕಾರದಲ್ಲಿಯೇ ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ಬೇಡವೆಂದು ನಿರ್ಣಯಿಸಲಾಗಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು. ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟ ಒಂದು ಧಾರ್ಮಿಕ ಕ್ಷೇತ್ರ. ಅಲ್ಲಿಗೆ ರೋಪ್‌ ವೇ ಬೇಡ ಎಂದು ಶಾಸಕ ಜಿ.ಟಿ. ದೇವೇಗೌಡರ ಸಮ್ಮುಖದಲ್ಲಿ ಸಭೆ ನಡೆಸಿ ಯಾವ ಕಾರಣಕ್ಕೆ ರೋಪ್‌ ವೇ ಬೇಡ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ರೂಪ್‌ ವೇ ನಿರ್ಮಿಸುವುದಿಲ್ಲ ಎಂದು ಪ್ರಕಟಿಸಿರುವುದಾಗಿ ತಿಳಿಸಿದರು.

ದೇವರ ದರ್ಶನ ಪಡೆಯಲು ಚಾಮುಂಡಿಬೆಟ್ಟಕ್ಕೆ ಹೋಗುತ್ತಾರೆ. ಬೆಟ್ಟದ ಮೇಲಿಂದ ಯಾವುದೇ ವ್ಯೂ ಪಾಯಿಂಟ್‌ ಇಲ್ಲ. ಚಾಮುಂಡಿಬೆಟ್ಟದ ಬದಲು ನಂದಿ ಬೆಟ್ಟದಲ್ಲಿ ರೋಪ್‌ ವೇ ನಿರ್ಮಿಸಬಹುದು. ಚಾಮರಾಜನಗರದ ಯಾವುದಾದರೂ ಗುಡ್ಡಕ್ಕೆ ರೋಪ್‌ ವೇ ನಿರ್ಮಿಸಿದರೆ ಅಲ್ಲಿನ ಪ್ರವಾಸೋದ್ಯಮವಾದರೂ ಅಭಿವೃದ್ಧಿ ಆಗುತ್ತದೆ ಎಂದರು.

ಕಾಂಗ್ರೆಸ್ ಸರ್ಕಾರದಿಂದ ಇಬ್ಬಗೆ ನೀತಿ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಕ್ರೆಡಿಟ್‌ ವಿಚಾರಕ್ಕೆ ಶೇತಪತ್ರದ ಅಗತ್ಯವಿಲ್ಲ: ಮೈಸೂರು- ಬೆಂಗಳೂರು ರಸ್ತೆ ನಿರ್ಮಾಣದಲ್ಲಿ ಸಿದ್ದರಾಮಯ್ಯ, ಮಹದೇವಪ್ಪ ಪಾತ್ರವೇನೂ ಇಲ್ಲ. ಇದ್ದರೆ ರಸ್ತೆಗೆ ಅವರಿಬ್ಬರ ಹೆಸರನ್ನು ನಾಮಕರಣ ಮಾಡಬಹುದಿತ್ತು. ಕ್ರೆಡಿಟ್ ವಿಚಾರಕ್ಕೆ ಶ್ವೇತಪತ್ರ ಹೊರಡಿಸುವ ಅಗತ್ಯವೂ ಇಲ್ಲ. ಕೆಲಸ ಮಾಡಿರುವುದು ಯಾರೆಂದು ಜನರಿಗೆ ಗೊತ್ತಿದೆ ಎಂದರು. ಮೈಸೂರು- ಬೆಂಗಳೂರು ರಸ್ತೆಗೆ ರಾಜ್ಯ ಸರ್ಕಾರ 8.5 ರೂಪಾಯಿಯನ್ನೂ ನೀಡಿಲ್ಲ. ಕೇಂದ್ರ ಸರ್ಕಾರ 8,500 ಕೋಟಿ ನೀಡಿದೆ. ಶಂಕುಸ್ಥಾಪನೆ ನೇರವೇರಿಸಿ, ಪೂರ್ಣಗೊಂಡ ರಸ್ತೆಯನ್ನು ಉದ್ಘಾಟಿಸಿದ್ದು ಕೂಡ ನರೇಂದ್ರ ಮೋದಿಯವರು. ಆ ರಸ್ತೆಯಲ್ಲಿ ಓಡಾಡುವ ಯಾರನ್ನೇ ಕೇಳಿದರೂ ರಸ್ತೆ ಯಾರು ಮಾಡಿಸಿದ್ದಾರೆ ಎಂಬುದನ್ನು ಹೇಳುತ್ತಾರೆ ಎಂದು ಅವರು ಹೇಳಿದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ನ. 24 ರಂದು ಪಿರಿಯಾಪಟ್ಟಣದಲ್ಲಿ ಆರಂಭಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮೂಲಕ ಕೇಂದ್ರ ಸರ್ಕಾರ ಬಡ ಜನರಿಗೆ ಜಾರಿಗೊಳಿಸಿರುವ ಯೋಜನೆಯನ್ನು ಮನವರಿಕೆ ಮಾಡಲಾಗುತ್ತಿದೆ ಎಂದರು. ಪ್ರತಿ ಗ್ರಾಪಂನಲ್ಲಿಯೂ ಯಾತ್ರೆ ಸಾಗುತ್ತಿದೆ. ಕೇಂದ್ರದ ಯೋಜನೆ ತಲುಪದವರು ಈಗಲೂ ನೋಂದಣಿ ಮಾಡಿಸಿಕೊಂಡು ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲೆಯ 300 ಸ್ಥಳಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಸಾಗುತ್ತದೆ. ಸಾವಿರಾರು ಮಂದಿ ಇದರ ಪ್ರಯೋಜನ ಪಡೆದಿದ್ದು, ಜ. 24 ರಂದು ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು. ಜ. 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ನೆರವೇರಲಿದೆ. ಅಂದು ಮೈಸೂರು- ಕೊಡಗು ಜಿಲ್ಲೆಯ ಎಲ್ಲಾ ದೇಗುಲಗಳಲ್ಲೂ ವಿಶೇಷ ಪೂಜಾ ಕೈಂಕರ್ಯ ನೆರವೇರಲಿವೆ ಎಂದು ಅವರು ತಿಳಿಸಿದರು.

ಹುಯಿಲಾಳು ಬಳಿ ಕ್ರಿಕೆಟ್ ಸ್ಟೇಡಿಯಂ: ತಾಲೂಕಿನ ಹುಯಿಲಾಳು ಗ್ರಾಮದಲ್ಲಿ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಈ ಹಿಂದೆ ಸಾತಗಳ್ಳಿ ಬಳಿ 19 ಎಕರೆ ಜಾಗ ಗುರುತಿಸಲಾಗಿತ್ತು. ಅದು ಕಿರಿದಾದ, ಕೆರೆ ಪ್ರದೇಶವಾದ್ದರಿಂದ ಹುಯಿಲಾಳು ಬಳಿ ಜಾಗ ಗುರುತಿಸಿದ್ದೇವೆ. ಗ್ರಾಮದಲ್ಲಿ 26 ಎಕರೆ ಸರ್ಕಾರಿ ಜಾಗ ಇದೆ. ಇದರಲ್ಲಿ 11 ಎಕರೆ ಕ್ರಿಕೆಟ್ ಮೈದಾನಕ್ಕೆ ಬಳಕೆಯಾದರೆ ಉಳಿಕೆ ಜಾಗ ಪಾರ್ಕಿಂಗ್, ಟ್ರೈನಿಂಗ್ ಸೆಂಟರ್‌ಗೆ ಬಳಕೆಯಾಗಲಿದೆ ಎಂದು ಅವರು ವಿವರಿಸಿದರು. 

ಕಾಂಗ್ರೆಸ್ ವೈಫಲ್ಯ ಮರೆಮಾಚಲು ಸಿದ್ದರಾಮಯ್ಯ ಯತ್ನ: ಪ್ರಲ್ಹಾದ್‌ ಜೋಶಿ

ಹುಯಿಳಾಲು ಬಳಿ ಕ್ರಿಕೆಟ್ ಸ್ಟೇಡಿಯಂಗೆ ರೈತರ ವಿರೋಧ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ರೈತರು ಅನೇಕ ಕಾರ್ಯಗಳಿಗೆ ವಿರೋಧಿಸಿದ್ದಾರೆ. ಮೈಸೂರಿನ ಅಭಿವೃದ್ಧಿಗೆ ಏನು ಬೇಕಾಗುತ್ತದೆ ಅದನ್ನು ಮಾಡಲೇಬೇಕು ಎಂದರು. ಈ ಯೋಜನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರಲ್ಲಿ ಮನವಿ ಮಾಡುತ್ತೇನೆ. ಮೈಸೂರು ಅಭಿವೃದ್ಧಿ ಪರವಾಗಿರುವ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆಯನ್ನೂ ಕೊಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ಶ್ರೀವತ್ಸ, ಮಾಜಿ ಮೇಯರ್ ಶಿವಕುಮಾರ್, ರಾಜ್ಯ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷ ಅನಿಲ್ ಥಾಮಸ್ ಇದ್ದರು.

Follow Us:
Download App:
  • android
  • ios