Asianet Suvarna News Asianet Suvarna News

ಹಾಲಿನ ದರ ಹೆಚ್ಚಳ: ಕೆಎಂಎಫ್‌ ಅಧ್ಯಕ್ಷ ಜಾರಕಿಹೊಳಿ ಪ್ರತಿಕ್ರಿಯೆ

*  ಲೀಟರ್‌ಗೆ 5 ರು. ಹೆಚ್ಚಳಕ್ಕೆ 14 ಒಕ್ಕೂಟಗಳ ಆಗ್ರಹ
*  ಜನರು ಸಂಕಷ್ಟದಲ್ಲಿದ್ದಾರೆ, ದರ ಏರಿಕೆ ಬೇಡ
*  ತೈಲ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಒಕ್ಕೂಟಗಳು
 

No Increase Milk Price Says KMF President Balachandra Jarkiholi grg
Author
Bengaluru, First Published Aug 20, 2021, 11:51 AM IST
  • Facebook
  • Twitter
  • Whatsapp

ಬೆಂಗಳೂರು(ಆ.20):  ತೈಲ ಬೆಲೆ ಹೆಚ್ಚಳದಿಂದ ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ಬಮೂಲ್‌, ಮಂಡ್ಯ ಹಾಲು ಒಕ್ಕೂಟ ಸೇರಿದಂತೆ 14 ಒಕ್ಕೂಟಗಳು ಆಗ್ರಹ ಮಾಡಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಹಾಲಿನ ದರ ಹೆಚ್ಚಳ ಬೇಡ ಎಂಬ ನಿರ್ಧಾರವನ್ನು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ(ಕೆಎಂಎಫ್‌) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೈಗೊಂಡಿದ್ದಾರೆ.

ಇತ್ತೀಚೆಗೆ ನಡೆದ ಕೆಎಂಎಫ್‌ ಆಡಳಿತ ಮಂಡಳಿ ಸಭೆಯಲ್ಲಿ 14 ಒಕ್ಕೂಟಗಳು ಹಾಲಿನ ದರವನ್ನು ಲೀಟರ್‌ಗೆ ಕನಿಷ್ಠ 5 ರು. ಹೆಚ್ಚಳ ಮಾಡಬೇಕು ಎಂದು ಒಕ್ಕೊರಲ ಆಗ್ರಹವನ್ನು ಮಾಡಿದ್ದವು. ಆದರೆ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು, ಕೊರೋನಾದಿಂದ ಆರ್ಥಿಕ ಸಂಕಷ್ಟ ಹೆಚ್ಚಾಗಿದ್ದು ದರ ಏರಿಕೆ ಸದ್ಯಕ್ಕೆ ಬೇಡ. ಅದರ ಬದಲು ಒಕ್ಕೂಟಗಳಿಂದ ಸಂಗ್ರಹವಾಗುತ್ತಿರುವ ಹಾಲಿನ ಮಾರಾಟ ಹೆಚ್ಚಿಸಲು ಆದ್ಯತೆ ನೀಡುವಂತೆ ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.

ಹಾಲಿನ ಖರೀದಿ ದರದಲ್ಲಿ ಏರಿಕೆ : ಉತ್ಪಾದಕರಿಗೆ ಗುಡ್ ನ್ಯೂಸ್

ತೈಲ ಬೆಲೆ ಏರಿಕೆಯಿಂದ ಒಕ್ಕೂಟಗಳು ಸಂಕಷ್ಟದಲ್ಲಿವೆ, ನಿಜ. ಆದರೆ, ಕೊರೋನಾ ಸಂಕಷ್ಟದಿಂದ ಶ್ರೀಸಾಮಾನ್ಯರು ನಲುಗಿದ್ದಾರೆ. ಈ ಸಂದರ್ಭದಲ್ಲಿ ಹಾಲಿನ ದರ ಏರಿಕೆಯ ಹೊರೆ ಹಾಕುವುದು ಸರಿಯಲ್ಲ. ಒಕ್ಕೂಟಕ್ಕೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಸಂಸ್ಥೆಯ ಇತರೆ ಉತ್ಪನ್ನಗಳತ್ತ ಗ್ರಾಹಕರನ್ನು ಸೆಳೆಯಬೇಕು. ಅಗತ್ಯ ಬಿದ್ದರೆ ಸಂಸ್ಥೆಯ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಿ ಗ್ರಾಹಕರನ್ನು ಸೆಳೆಯಿರಿ ಎಂದು ಸೂಚಿಸಿದರು.

ಸದ್ಯಕ್ಕೆ ಹಾಲಿನ ದರ ಹೆಚ್ಚಳದಂತಹ ನಿರ್ಧಾರ ಕೈಗೊಳ್ಳುವುದು ಬೇಡ. ಇತರೆ ಮಾರ್ಗಗಳಿಂದ ಉಂಟಾಗುತ್ತಿರುವ ನಷ್ಟವನ್ನು ಭರಿಸಿಕೊಳ್ಳುವ ಪ್ರಯತ್ನ ಮಾಡೋಣ. ಅನಿವಾರ್ಯ ಪರಿಸ್ಥಿತಿ ಉದ್ಭವಿಸಿದರೆ ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳೋಣ. ಸದ್ಯಕ್ಕಂತೂ ಹಾಲಿನ ದರ ಹೆಚ್ಚಳ ಬೇಡ ಎಂದು ಅವರು ಸಭೆಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.

ಕೋವಿಡ್‌ ಸಂದರ್ಭದಲ್ಲಿ ರಾಜ್ಯ ಸರ್ಕಾರ 164 ಕೋಟಿ ರು. ವೆಚ್ಚದಲ್ಲಿ ಕ್ಷೀರಭಾಗ್ಯ ಯೋಜನೆಯಡಿ 56 ಲಕ್ಷ ವಿದ್ಯಾರ್ಥಿಗಳಿಗೆ ಹಾಲಿನ ಪುಡಿ ಖರೀದಿಸಿ ವಿತರಿಸಿದೆ. ಅದಕ್ಕೂ ಮೊದಲು 80 ಕೋಟಿ ರು.ವೆಚ್ಚ ಮಾಡಿ 28 ದಿನಗಳ ಕಾಲ 2.11 ಕೋಟಿ ಲೀಟರ್‌ ಹಾಲನ್ನು ಪ್ರತಿ ಲೀಟರ್‌ಗೆ 37 ರು.ನಂತೆ ಖರೀದಿಸಿ ಬಡವರಿಗೆ ಉಚಿತವಾಗಿ ಸರ್ಕಾರ ಹಂಚಿದೆ. ಅದೇ ರೀತಿ ಶಾಲಾ-ಕಾಲೇಜುಗಳು ಆರಂಭಗೊಂಡ ಬಳಿಕ ಕ್ಷೀರಭಾಗ್ಯ ಯೋಜನೆ ಮುಂದುವರೆಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್‌ ನಿರ್ಧರಿಸಿದೆ ಎಂದು ಸಂಸ್ಥೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
 

Follow Us:
Download App:
  • android
  • ios