ಹಾಲಿನ ಖರೀದಿ ದರದಲ್ಲಿ ಏರಿಕೆ : ಉತ್ಪಾದಕರಿಗೆ ಗುಡ್ ನ್ಯೂಸ್
ಮಂಡ್ಯದಲ್ಲಿ ಹೈನೋದ್ಯಮ ಉತ್ತೇಜಿಸಲು ಹಾಲಿನ ಖರೀದಿ ದರವನ್ನು ಹೆಚ್ಚಳ ಮಾಡಲಾಗಿದೆ. ಹೆಚ್ಚಳವಾದ ಹಾಲಿನ ದರವೆಷ್ಟು..? ಉತ್ಪಾದಕರಿಗೆ ಒಂದು ಲೀಟರ್‌ಗೆ ಎಷ್ಟು ಹಣ ಸಿಗಲಿದೆ..?
ಮದ್ದೂರು (ಮಾ.10): ಜಿಲ್ಲೆಯಲ್ಲಿ ಹೈನೋದ್ಯಮ ಕಾರ್ಯ ಚಟುವಟಿಕೆಗಳನ್ನು ಉತ್ತೇಜಿಸಲು ಹಾಲಿನ ಖರೀದಿ ದರವನ್ನು 1.50 ರು. ಹೆಚ್ಚಳ ಮಾಡಲಾಗಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಿ.ಆರ್.ರಾಮಚಂದ್ರ ತಿಳಿಸಿದರು.
ಫೆ.11ರ ಬೆಳಗಿನ ಸರದಿಯಿಂದ ಅನ್ವಯವಾಗುವಂತೆ ಮಾ.31ರ ಸಂಜೆ ಸರದಿಯವರೆಗೆ ಜಿಡ್ಡಿನಾಂಶ ಶೇ.3.5 ಮತ್ತು ಜಿಡ್ಡೇತರ ಘನಾಂಶ ಶೇ.8.5 ಅಂಶವುಳ್ಳ ಪ್ರತಿ ಕೆಜಿ ಹಾಲಿಗೆ 24.90 ರು. ಹಾಗೂ ಸಂಘದಿಂದ ಉತ್ಪಾದಕರಿಗೆ ಶೇ.3.5 ಜಿಡ್ಡಿನಾಂಶವುಳ್ಳ ಪ್ರತಿ ಲೀಟರ್ ಹಾಲಿಗೆ 24 ರು.ನಂತೆ ಖರೀದಿ ದರ ನಿಗದಿಪಡಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ರೈತರಿಂದ ಖರೀದಿಸುತ್ತಿರುವ ಪ್ರತಿ ಲೀಟರ್ ಹಾಲಿಗೆ ಏ.1 ರಿಂದ 2 ರು. ಹೆಚ್ಚಳ ಮಾಡಲಾಗುವುದು. ಜಿಡ್ಡಿನಾಂಶ ಶೇ.3.5 ಮತ್ತು ಜಿಡ್ಡೇತರ ಘನಾಂಶ ಶೇ.8.5 ಅಂಶವುಳ್ಳ ಪ್ರತಿ ಕೆಜಿ ಹಾಲಿಗೆ 26.90 ರು. ಹಾಗೂ ಸಂಘದಿಂದ ಉತ್ಪಾದಕರಿಗೆ ಶೇ.3.5 ಜಿಡ್ಡಿನಾಂಶವುಳ್ಳ ಪ್ರತಿ ಲೀಟರ್ ಹಾಲಿಗೆ 26 ರು.ನಂತೆ ಖರೀದಿ ದರ ನಿಗದಿಪಡಿಸಲಾಗಿದೆ ಎಂದು ನುಡಿದರು.
ಹಾಲು ಮಾರೋಕೆ 30 ಕೋಟಿ ಕೊಟ್ಟು ಹೆಲಿಕಾಪ್ಟರ್ ಖರೀದಿಸಿದ ರೈತ..!
ನಾವು ರೈತ ವಿರೋಧಿಗಳಲ್ಲ: ಕೊರೋನಾ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಹಾಲಿನ ಖರೀದಿ ದರವನ್ನು ಇಳಿಸಲಾಗಿತ್ತು. ದರ ಹೆಚ್ಚಿಸುವ ಕುರಿತು ಅಜೆಂಡಾ ನಿಗದಿಪಡಿಸಿ, ಒಂದು ವಾರ ಮುಂಚಿತವಾಗಿ ದರ ಏರಿಕೆ ಬಗ್ಗೆ ತಿಳಿಸಿದ ಬಳಿಕ ಹಾಲು ಉತ್ಪಾದಕರ ಹೋರಾಟಗಾರರ ಸಮಿತಿಯವರು ದರ ಹೆಚ್ಚಿಸುವಂತೆ ಒತ್ತಾಯಿಸಿರುವುದು ಹಾಸ್ಯಾಸ್ಪದವಾಗಿದೆ. ಪಶು ಆಹಾರ ದರ ಕಡಿಮೆ ಮಾಡುವ ಬಗ್ಗೆಯೂ ಮುಂಚೆಯೇ ತಿಳಿಸಲಾಗಿತ್ತು ಎಂದು ಹೇಳಿದರು.
2020ರ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಒಕ್ಕೂಟ 38 ಕೋಟಿ ರು. ನಷ್ಟದಲ್ಲಿತ್ತು. ಫೆಬ್ರವರಿ ಅಂತ್ಯಕ್ಕೆ 2 ಕೋಟಿ ರು. ನಷ್ಟದಲ್ಲಿತ್ತು. ಈಗ ಪರಿಸ್ಥಿತಿ ಸುಧಾರಿಸಿ ಒಕ್ಕೂಟ ನಷ್ಟದಿಂದ ಹೊರಬಂದಿರುವುದರಿಂದ ರೈತರ ಹಾಲಿನ ಖರೀದಿ ದರವನ್ನು ಹೆಚ್ಚಿಸಲಾಗಿದೆ. ಹಾಸನ-ಶಿವಮೊಗ್ಗ ಒಕ್ಕೂಟಗಳು ಪ್ರತಿ ಲೀಟರ್ ಹಾಲಿಗೆ 24 ರು. ನೀಡುತ್ತಿದ್ದ ಸಮಯದಲ್ಲೂ ನಾವು 27 ರು. ನೀಡುತ್ತಿದ್ದೆವು. ರೈತರ ಹಿತದೃಷ್ಟಿಯಿಂದ ಖರೀದಿ ದರವನ್ನು ಹೆಚ್ಚಿಸಲಾಗಿದೆ. ನಾವು ರೈತ ವಿರೋಧಿಗಳಲ್ಲ, ರೈತರ ಪರವಾಗಿದ್ದೇವೆ ಎಂದು ನುಡಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ರಘುನಂದನ್, ವಿ.ಎಂ.ವಿಶ್ವನಾಥ್, ಬೋರೇಗೌಡ, ಯು.ಸಿ.ಶಿವಕುಮಾರ್, ರೂಪಾ, ಹೆಚ್.ಟಿ.ಮಂಜು, ನೆಲ್ಲೀಗೆರೆಬಾಲು, ರವಿ, ವ್ಯವಸ್ಥಾಪಕ ನಿರ್ದೇಶಕ ಗೋವಿಂದೇಗೌಡ, ಕೆ.ರಾಮಚಂದ್ರ ಇದ್ದರು.