Asianet Suvarna News Asianet Suvarna News

3 ದಿನ ರಜೆ : ಪ್ರವಾಸಿತಾಣಗಳಲ್ಲಿ ಜನಜಂಗುಳಿ!

 ಮೂರು ದಿನ ಸಿಕ್ಕ ಸಾಲುಸಾಲು ರಜೆ ವೇಳೆ ಪ್ರವಾಸಿ ತಾಣಗಳಲ್ಲಿ ಭಾರೀ ಸಂಖ್ಯೆಯ ಜನರು ಕಂಡುಬಂದಿದೆ. ಕೋವಿಡ್ ನಿಯಮವನ್ನು ಗಾಳಿಗೆ ತೂರಲಾಗಿದೆ.

No Covid Rules People Rush To tourist Spots  snr
Author
Bengaluru, First Published Oct 27, 2020, 9:21 AM IST

ಬೆಂಗಳೂರು (ಅ.27):  ನಾಲ್ಕನೇ ಶನಿವಾರ, ಭಾನುವಾರ ಆಯುಧಪೂಜೆ, ಸೋಮವಾರ ವಿಜಯದಶಮಿ. ಹೀಗೆ ಮೂರು ದಿನ ಸಿಕ್ಕ ಸಾಲುಸಾಲು ರಜೆ ವೇಳೆ ಪ್ರವಾಸಿ ತಾಣಗಳಲ್ಲಿ ಭಾರೀ ಸಂಖ್ಯೆಯ ಜನರು ಕಂಡುಬಂದರು. ನಂದಿ ಬೆಟ್ಟ, ಮುಳ್ಳಯ್ಯನಗಿರಿ, ಜೋಗ್‌ ಫಾಲ್ಸ್‌... ಸೇರಿದಂತೆ ಪ್ರವಾಸಿ ಸ್ಥಳಗಳಲ್ಲಿ ಕೊರೇನಾ ಆತಂಕವನ್ನೂ ಲೆಕ್ಕಿಸದೆ ಪ್ರವಾಸಿಗರ ದಂಡೇ ನೆರೆದಿತ್ತು

ಹೀಗಾಗಿ ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಬಿಕೋ ಅನ್ನುತ್ತಿದ್ದ ಪ್ರವಾಸಿತಾಣಗಳು, ಪ್ರೇಕ್ಷಣೀಯ ಸ್ಥಳಗಳು, ಪ್ರಸಿದ್ಧ ಯಾತ್ರಾಸ್ಥಳಗಳು ಈ ಮೂರು ದಿನಗಳಲ್ಲಿ ಜನಜಂಗುಳಿಯಿಂದ ತುಂಬಿತ್ತು. ಪರಿಣಾಮ ಹಳ್ಳಹಿಡಿದಿದ್ದ ರಾಜ್ಯದ ಪ್ರವಾಸೋದ್ಯಮ ನಿಧಾನಗತಿಯಲ್ಲಿ ಹಳಿಗೆ ಮರಳುತ್ತಿದೆ. ಆದರೆ ಕೋವಿಡ್‌ ನಿಯಮಗಳನ್ನು ಅನುಸರಿಸದೆ ಜನರು ವ್ಯವಹರಿಸುತ್ತಿರುವುದು ಮಾತ್ರ ಚಿಂತೆಯ ವಿಷಯವಾಗಿದೆ.

ರಾಜ್ಯದ ಪ್ರಸಿದ್ಧ ಗಿರಿಧಾಮಗಳಲ್ಲೊಂದಾಗಿರುವ ನಂದಿಬೆಟ್ಟವೀಕ್ಷಣೆಗೆ ಕಳೆದ ಮೂರು ದಿನಗಳಲ್ಲಿ ಬರೋಬ್ಬರಿ 25 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಸೋಮವಾರ ಒಂದೇ ದಿನ 10 ಸಾವಿರಕ್ಕೂ ಅಧಿಕ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಮಾಸ್ಕ್‌ ಧರಿಸಿದೇ ಆಗಮಿಸಿದ ಸುಮಾರು 200ಕ್ಕೂ ಹೆಚ್ಚು ಮಂದಿಗೆ ದಂಡ ವಿಧಿಸಲಾಗಿದೆ.

ಕೊರೋನಾ ಬಳಿಕ ವಿದೇಶ ಸಂಚಾರವೀಗ ಮತ್ತೆ ಆರಂಭ

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ದತ್ತಪೀಠ, ಮಾಣಿಕ್ಯಾಧಾರಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಬಂದು ಹೋಗಿದ್ದಾರೆ. ಮುಳ್ಳಯ್ಯನಗಿರಿಗೆ ಮೂರು ದಿನದಲ್ಲಿ 12 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಸಾವಿರಾರು ವಾಹನಗಳಲ್ಲಿ ಪ್ರವಾಸಿಗರು ಆಗಮಿಸಿದ್ದರು. ಉಳಿದಂತೆ ಆಸ್ತಿಕರ ಶ್ರದ್ಧಾ ಕೇಂದ್ರವಾದ ಶೃಂಗೇರಿ, ಬಾಳೆಹೊನ್ನೂರಿನ ದಸರಾ ದರ್ಬಾರ್‌ ಮಠಕ್ಕೆ ಕೂಡ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದರು.

ವಿಶ್ವ ವಿಖ್ಯಾತ ಜೋಗ್‌ ಜಲಪಾತಕ್ಕೆ ಮೂರು ದಿನಗಳಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಭಾನುವಾರ ಒಂದೇ ದಿನ 4 ಸಾವಿರದಷ್ಟುಪ್ರವಾಸಿಗರು ಆಗಮಿಸಿದ್ದರು. ಆದರೆ, ಸಾಕಷ್ಟುಮಂದಿ ಮಾಸ್ಕ್‌ ಧÜರಿಸಿದಿರುವುದು ಕಂಡುಬಂದಿತು. ಶಿವಮೊಗ್ಗದ ತ್ಯಾವರೆಕೊಪ್ಪದ ಸಿಂಹಧಾಮಕ್ಕೆ ಸುಮಾರು 1200 ಜನ ಭೇಟಿ ನೀಡಿದ್ದರು. ಸಕ್ಕರೆಬೈಲು ಆನೆ ಬಿಡಾರಕ್ಕೆ ಸುಮಾರು 500 ಮಂದಿ ಭೇಟಿ ನೀಡಿದ್ದರು. ಇದೇವೇಳೆ ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಉಡುಪಿಯ ಕೃಷ್ಣಮಠದಲ್ಲಿ ಜನಜಂಗುಳಿ ಕಂಡುಬಂದಿತು. ಮರವಂತೆ, ಮಲ್ಪೆ, ಕಾಪು, ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ ಬೀಚ್‌ಗಳಲ್ಲೂ ಸಾವಿರಾರು ಮಂದಿ ವಿಹರಿಸಿದರು.

ಝೂಗೆ 7,200 ಮಂದಿ ಭೇಟಿ:  ಮೈಸೂರಿನಲ್ಲಿ ದಸರಾ ಹಿನ್ನೆಲೆಯಲ್ಲಿ ಆಗಮಿಸಿದ ಪ್ರವಾಸಿಗರು ಇಲ್ಲಿಯ ಸುತ್ತಮುತ್ತಲು ಇರುವ ಪ್ರವಾಸಿ ಸ್ಥಳಗಳಿಗೂ ಭೇಟಿ ನೀಡಿದ್ದಾರೆ. ಚಾಮರಾಜೇಂದ್ರ ಮೃಗಾಲಯಕ್ಕೆ ಜಂಬೂಸವಾರಿಯ ದಿನವಾದ ಸೋಮವಾರ 7,200 ಮಂದಿ ಭೇಟಿ ನೀಡಿದ್ದು, ಇದು ಇತ್ತೀಚೆಗಿನ ಅತ್ಯುತ್ತಮ ದಾಖಲೆಯಾಗಿದೆ. ಶನಿವಾರ ಮತ್ತು ಭಾನುವಾರಗಳಂದು ಪ್ರತಿದಿನ ಸುಮಾರು 2 ಸಾವಿರ ಮಂದಿ ಭೇಟಿ ನೀಡಿದ್ದರು. ವಿಜಯದಶಮಿ ಅಂಗವಾಗಿ ಅರಮನೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದ ಹಿನ್ನೆಲೆಯಲ್ಲಿ ಅರಮನೆಗೆ ಪ್ರವಾಸಿಗರು ಬರಲಿಲ್ಲ. ಆದರೆ ಚಾಮುಂಡಿಬೆಟ್ಟ, ನಂಜನಗೂಡು ಮಂತಾದ ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಸಾವಿರಾರು ಮಂದಿ ಭೇಟಿ ನೀಡಿದ್ದರು.

ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನ, ಅಂಜನಾದ್ರಿ ಬೆಟ್ಟ, ಬಳ್ಳಾರಿ ಜಿಲ್ಲೆಯ ಹಂಪಿಗೆ ಹಂಪಿಗೆ ಗಳಿಗೆ ಕಳೆದ ಎರಡ್ಮೂರು ದಿನಗಳಲ್ಲಿ ಸಹಸ್ರಾರು ಜನರು ಭೇಟಿ ನೀಡಿದ್ದಾರೆ. ಇತಿಹಾಸ ಪ್ರಸಿದ್ಧ ಹಂಪಿಗೆ ಕಳೆದ 3 ದಿನದಲ್ಲಿ 10 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದರು. ವಿರೂಪಾಕ್ಷೇಶ್ವರನ ದರ್ಶನ ಮಾಡಿದ್ದಲ್ಲದೇ ವಿವಿಧ ಸ್ಮಾರಕಗಳನ್ನು ಇವರು ಕಣ್ತುಂಬಿಕೊಂಡರು. ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ, ಗೋಕರ್ಣ, ಶಿರಸಿ ಮಾರಿಕಾಂಬಾ, ಸಾತೊಡ್ಡಿ ಜಲಪಾತ, ಮಾಗೋಡ ಜಲಪಾತ, ಉಂಚಳ್ಳಿ ಜಲಪಾತ, ವಿಭೂತಿ ಜಲಪಾತಗಳಲ್ಲಿ ಪ್ರವಾಸಿಗರು ಕಂಡುಬಂದರು

Follow Us:
Download App:
  • android
  • ios