ನವದೆಹಲಿ (ಅ.23):  ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ವಿದೇಶಗಳಿಂದ ಭಾರತಕ್ಕೆ ಆಗಮಿಸುವವರ ವೀಸಾಗಳನ್ನು ಫೆಬ್ರವರಿ ತಿಂಗಳಿನಲ್ಲಿ ಅಮಾನತು ಮಾಡಿದ್ದ ಭಾರತ ಸರ್ಕಾರ ಇದೀಗ ಅವುಗಳನ್ನು ಎಂಟು ತಿಂಗಳ ನಂತರ ಮರುಸ್ಥಾಪನೆ ಮಾಡಿದೆ. ಅದರೊಂದಿಗೆ, ದೇಶದಲ್ಲಿ ಸ್ಥಗಿತಗೊಂಡಿದ್ದ ವಿದೇಶ ಸಂಚಾರವೀಗ ಮತ್ತೆ ಆರಂಭವಾಗಲಿದೆ.

ಭಾರತಕ್ಕೆ ಬರುವವರು ಹಾಗೂ ಭಾರತದಿಂದ ವಿದೇಶಕ್ಕೆ ಹೋಗುವವರಿಬ್ಬರಿಗೂ ಸರ್ಕಾರವೀಗ ಪುನರ್‌ ಅನುಮತಿ ನೀಡಿದೆ. ಆದರೆ, ಅವರು ಈಗಿರುವ ವಿಶೇಷ ವಿಮಾನಗಳಲ್ಲೇ ಸಂಚರಿಸಬೇಕು. ಸಾಮಾನ್ಯ ವಾಣಿಜ್ಯ ವಿಮಾನಗಳ ಹಾರಾಟ ಪುನಾರಂಭಿಸುವ ಬಗ್ಗೆ ಸರ್ಕಾರ ಏನನ್ನೂ ಹೇಳಿಲ್ಲ.

ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಗುರುವಾರ ಆದೇಶ ಹೊರಡಿಸಿದ್ದು, ‘ಎಲ್ಲ ಸಾಗರೋತ್ತರ ಭಾರತೀಯರು (ಒಸಿಐ), ಭಾರತೀಯ ಸಂಜಾತ ವ್ಯಕ್ತಿ (ಪಿಐಒ) ಕಾರ್ಡ್‌ ಹೊಂದಿರುವವರು ಹಾಗೂ ಇತರ ಎಲ್ಲಾ ವಿದೇಶಿ ನಾಗರಿಕರು ಭಾರತಕ್ಕೆ ಭೇಟಿ ನೀಡುವುದಿದ್ದರೆ ಅವರಿಗೆ ವೀಸಾ ನೀಡಬಹುದು. ಆದರೆ, ಪ್ರವಾಸಿ ವೀಸಾಗಳನ್ನು ನೀಡುವಂತಿಲ್ಲ’ ಎಂದು ತಿಳಿಸಿದೆ.

ಚೀನಾ, ಪಾಕ್‌ ಗಡಿಯಲ್ಲಿ 10 ಸುರಂಗಕ್ಕೆ ಭಾರತ ಸಿದ್ಧತೆ! ..

ಅಂದರೆ ವಿದೇಶೀಯರು ಭಾರತಕ್ಕೆ ವ್ಯಾಪಾರ, ಸಮಾವೇಶ, ಉದ್ಯೋಗ, ವ್ಯಾಸಂಗ, ಸಂಶೋಧನೆ ಸೇರಿದಂತೆ ಯಾವುದೇ ಉದ್ದೇಶಕ್ಕೆ ಆಗಮಿಸಬಹುದು. ಆದರೆ, ಎಲೆಕ್ಟ್ರಾನಿಕ್‌ ಮತ್ತು ಟೂರಿಸ್ಟ್‌ ವೀಸಾಗಳನ್ನು ಸದ್ಯಕ್ಕೆ ಪುನಾರಂಭಿಸಿಲ್ಲ. ಇನ್ನು ಹಳೆಯ ಮೆಡಿಕಲ್‌ ವೀಸಾಗಳನ್ನೂ ಮರುಸ್ಥಾಪನೆ ಮಾಡಿಲ್ಲ. ಆದರೆ, ಹೊಸತಾಗಿ ಮೆಡಿಕಲ್‌ ವೀಸಾ ಪಡೆದು ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸಬಹುದು.

‘ಕೊರೋನಾ ಹಿನ್ನೆಲೆಯಲ್ಲಿ ಫೆಬ್ರವರಿ ತಿಂಗಳಿನಲ್ಲಿ ಭಾರತಕ್ಕೆ ವಿದೇಶದಿಂದ ಆಗಮಿಸುವುದು ಮತ್ತು ಭಾರತದಿಂದ ವಿದೇಶಕ್ಕೆ ಹೋಗುವುದು ಎರಡನ್ನೂ ಸ್ಥಗಿತಗೊಳಿಸಲಾಗಿತ್ತು. ಈಗ ಸಂಚಾರ ನಿರ್ಬಂಧ ಮತ್ತು ವೀಸಾ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಎಲೆಕ್ಟ್ರಾನಿಕ್‌, ಟೂರಿಸ್ಟ್‌ ಮತ್ತು ಮೆಡಿಕಲ್‌ ವೀಸಾ ಹೊರತುಪಡಿಸಿ ಇನ್ನೆಲ್ಲ ಜಾರಿಯಲ್ಲಿರುವ ವೀಸಾಗಳನ್ನು ಮರುಸ್ಥಾಪನೆ ಮಾಡಲಾಗಿದೆ. ವೀಸಾಗಳ ಅವಧಿ ಮುಗಿದಿದ್ದರೆ ಸಂಬಂಧಪಟ್ಟಭಾರತೀಯ ಕಚೇರಿಗಳನ್ನು ಸಂಪರ್ಕಿಸಿ ವಿಸ್ತರಣೆ ಮಾಡಿಸಿಕೊಳ್ಳಬಹುದು. ಭಾರತಕ್ಕೆ ಆಗಮಿಸುವವರು ಇಲ್ಲಿನ ಆರೋಗ್ಯ ಇಲಾಖೆ ಜಾರಿಗೊಳಿಸಿರುವ ಎಲ್ಲಾ ಕೋವಿಡ್‌-19 ಸಂಬಂಧಿ ಮಾರ್ಗಸೂಚಿಗಳನ್ನು ಪಾಲಿಸಬೇಕು’ ಎಂದು ಗೃಹ ಸಚಿವಾಲಯ ತಿಳಿಸಿದೆ.

ವಿದೇಶಿಗರಿಗೆ ಭಾರತಕ್ಕೆ ಆಗಮಿಸಲು ಅನುಮತಿ ನೀಡಿದ್ದರೂ ಸದ್ಯ ವಾಣಿಜ್ಯ ವಿಮಾನಗಳು ಮೊದಲಿನಂತೆ ಹಾರಾಡುತ್ತಿಲ್ಲ. ವಂದೇ ಭಾರತ್‌ ಯೋಜನೆಯಡಿ ಭಾರತೀಯರನ್ನು ಸ್ವದೇಶಕ್ಕೆ ಕರೆದುಕೊಂಡು ಬರುವ ಏರ್‌ ಇಂಡಿಯಾ ವಿಶೇಷ ವಿಮಾನಗಳು ಮಾತ್ರ ಜೂನ್‌ನಿಂದ ಹಾರಾಡುತ್ತಿವೆ.