ಕೊಪ್ಪಳ ಜಿಲ್ಲೆಯಲ್ಲಿ ಹೊಟ್ಟೆಯ ಚರ್ಮ ಸರಿಯಾಗಿ ಬೆಳೆಯದ ಕಾರಣ ಕರುಳು-ಕಿಡ್ನಿ ಹೊರಬಂದ ಸ್ಥಿತಿಯಲ್ಲಿ ಜನಿಸಿದ ನವಜಾತ ಶಿಶುವನ್ನು, ಜೀರೋ ಟ್ರಾಫಿಕ್ ಮೂಲಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಗು ಸೋಮವಾರ ಮೃತಪಟ್ಟಿದೆ.
ಹುಬ್ಬಳ್ಳಿ (ಡಿ.30): ಹೊಟ್ಟೆಯ ಮೇಲೆ ಚರ್ಮ ಸರಿಯಾಗಿ ಬೆಳೆಯದ ಹಿನ್ನಲೆಯಲ್ಲಿ, ಕರುಳು-ಕಿಡ್ನಿ ಹೊರಬಂದು ನವಜಾತ ಶಿಶು ಸಾವು ಕಂಡಿದೆ. ಕೊಪ್ಪಳ ಜಿಲ್ಲೆಯ ಕುಕುನೂರ ತಾಲೂಕಿನ ಬೂದಗುಂಪ ಗ್ರಾಮದ ವಿಜಯಲಕ್ಷ್ಮಿ ಹಾಗೂ ಗುತ್ತೂರಿನ ಮಲ್ಲಪ್ಪ ಎನ್ನುವವರ ಮಗುವಿನ ಹೊಟ್ಟೆಯ ಮೇಲೆ ಚರ್ಮ ಹೊರಬರದ ಕಾರಣಕ್ಕೆ ಕರುಳು, ಕಿಡ್ನಿ ಎರಡೂ ಹೊರಬಂದಿತ್ತು. ಇದರಿಂದಾಗಿ ಮಗು ಹುಟ್ಟಿದ ತಕ್ಷಣವೇ ಜೀರೋ ಟ್ರಾಫಿಕ್‌ನಲ್ಲಿ ಶಿಶುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸೋಮವಾರ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದೆ. ಡಿಸೆಂಬರ್ 28 ರಂದು ಕೊಪ್ಪಳದಿಂದ ಜೀರೋ ಟ್ರಾಫಿಕ್‌ನಲ್ಲಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಗು ಸಾವು ಕಂಡಿದೆ.
ಕೊಪ್ಪಳದಲ್ಲಿ ಜನಿಸಿದ್ದ ಮಗು
ಕೊಪ್ಪಳದ ಕುಕನೂರ ತಾಲೂಕಾ ಆಸ್ಪತ್ರೆಯಲ್ಲಿ ಡಿಸೆಂಬರ್ 27ರ ರಾತ್ರಿ 11.30ಕ್ಕೆ ವಿಜಯಲಕ್ಷ್ಮಿ ಅವರಿಗೆ ಹೆರಿಗೆ ಆಗಿತ್ತು. ಡೆಲಿವರಿ ಆದ ಬೆನ್ನಲ್ಲಿಯೇ ಮಗುವಿನ ಕರುಳು, ಕಿಡ್ನಿ ಹೊರಬಂದಿತ್ತು. ತಕ್ಷಣವೇ ಮಗುವಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಡಿ.28ರ ಬೆಳಗಿನ ಜಾವ 10 ಗಂಟೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಜೀರೋ ಟ್ರಾಫಿಕ್‌ನಲ್ಲಿ ಕರೆತರಲಾಗಿತ್ತು. ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಿದರು ಸ್ಪಂದಿಸಿದೆ ನವಜಾತ ಶಿಶು ಸಾವು ಕಂಡಿದೆ.


